Video: ಪತ್ರಕರ್ತನ ಮೊಬೈಲ್ ಕದ್ದು ಮಳ್ಳಾದ ಕಳ್ಳ; ಕದ್ದ ಮರುಕ್ಷಣವೇ ಅವನಿಗೇ ಗೊತ್ತಿಲ್ಲದೆ 20 ಸಾವಿರ ಜನರಿಗೆ ಮುಖ ತೋರಿಸಿದ !
ಮೊಬೈಲ್ ಕದ್ದಿದ್ದು ಗಂಭೀರ ವಿಚಾರವಾದರೂ ಇದೀಗ ಫನ್ನಿ ವಿಡಿಯೋವಾಗಿ ಮಾರ್ಪಟ್ಟಿದೆ. ನೆಟ್ಟಿಗರೊಬ್ಬರು ಶೇರ್ ಮಾಡಿಕೊಂಡ ವಿಡಿಯೋಕ್ಕೆ 6.2 ಮಿಲಿಯನ್ಗಳಷ್ಟು ವೀವ್ಸ್ ಬಂದಿದೆ. ಸಾವಿರಾರು ಜನ ಕಮೆಂಟ್ ಮಾಡಿದ್ದಾರೆ.
ಕಳ್ಳನೊಬ್ಬ ಪತ್ರಕರ್ತನ ಮೊಬೈಲ್ ಕದ್ದು ಬೇಸ್ತುಬಿದ್ದ ಘಟನೆ ನಡೆದಿದೆ. ಕದ್ದ ಮರುಕ್ಷಣವೇ ಆ ಕಳ್ಳನ ಮುಖ ಎಲ್ಲರಿಗೂ ಕಂಡಿದೆ. ಇದೀಗ ಆತನ ಬಂಧನವೂ ಆಗಿದೆ. ಅಂದಹಾಗೆ ಘಟನೆ ನಡೆದದ್ದು ಈಜಿಪ್ಟ್ನ ರಾಜಧಾನಿ ಕೈರೋದಲ್ಲಿ. ಇಲ್ಲಿ ಪತ್ರಕರ್ತನೊಬ್ಬ ತನ್ನ ಮೊಬೈಲ್ನಲ್ಲಿ ವಿಡಿಯೋ ಮಾಡುತ್ತ, ಭೂಕಂಪದ ವರದಿ ಮಾಡುತ್ತಿದ್ದ. ಕೈರೋದ ರಸ್ತೆಗಳಲ್ಲಿ ಭೂಕಂಪದಿಂದಾದ ಹಾನಿಯ ಚಿತ್ರದ ವರದಿಯನ್ನು ಲೈವ್ ವಿಡಿಯೋ ಮಾಡುತ್ತಿದ್ದಾಗ ಬೈಕ್ನಲ್ಲಿ ಬಂದ ಕಳ್ಳನೊಬ್ಬ ಆತನ ಮೊಬೈಲ್ ಕಿತ್ತುಕೊಂಡು ಹೋದ. ಈ ವೇಳೆ ಪತ್ರಕರ್ತನ ವಿಡಿಯೋವನ್ನು ಸುಮಾರು 20 ಸಾವಿರ ಮಂದಿ ವೀಕ್ಷಿಸುತ್ತಿದ್ದರು. ಅಷ್ಟೂ ಜನಕ್ಕೆ ಕಳ್ಳ ತನ್ನ ಮುಖದರ್ಶನ ಮಾಡಿಸಿದ್ದಾನೆ. ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ.
ಈಜಿಪ್ಟ್ನ ಕೈರೋ ಸೇರಿ ವಿವಿಧೆಡೆ ಮಂಗಳವಾರ ಮುಂಜಾನೆ ಭೂಕಂಪನವಾಗಿತ್ತು. ಅದರ ಚಿತ್ರಣವನ್ನು ವರದಿ ಮಾಡಲು ಪತ್ರಕರ್ತ ಮೊಬೈಲ್ನಲ್ಲಿ ಫೇಸ್ಬುಕ್ ಲೈವ್ ವಿಡಿಯೋ ಮಾಡುತ್ತಿದ್ದ. ಬೈಕ್ನಲ್ಲಿ ಬಂದ ಕಳ್ಳ ಆ ಮೊಬೈಲ್ನ್ನು ಪತ್ರಕರ್ತನ ಕೈಯಿಂದ ಕಿತ್ತುಕೊಳ್ಳುವಾಗ ಕೆಲ ಕಾಲ ಅಡಚಣೆಯುಂಟಾಗಿದ್ದನ್ನು ವಿಡಿಯೋದಲ್ಲಿ ನೋಡಬಹುದು. ಹಾಗೇ, ಹಿಂದಿನಿಂದ ಪತ್ರಕರ್ತನ ಧ್ವನಿಯೂ ಇದರಲ್ಲಿ ಕೇಳುತ್ತಿರುತ್ತದೆ. ಮೊಬೈಲ್ ಕಿತ್ತುಕೊಂಡು ಆತ ತನ್ನ ಬೈಕ್ನ ಮುಂದೆ ಅದನ್ನಿಟ್ಟುಕೊಂಡು ಅಲ್ಲಿಂದ ಹೊರಟಿದ್ದಾನೆ. ಆದರೆ ಆ ಮೊಬೈಲ್ ಕ್ಯಾಮರಾ ಸೆಲ್ಫಿಯಾಗಿ ತಿರುಗಿರುವ ಕಾರಣ ಆ ಕಳ್ಳನ ಮುಖ ಎಲ್ಲರಿಗೂ ಕಂಡಿದೆ. ಆತ ಸಿಗರೇಟ್ ಬಾಯಲ್ಲಿಟ್ಟುಕೊಂಡು ಹೋಗುತ್ತಿದ್ದಾನೆ. ತನ್ನನ್ನು ಯಾರಾದರು ಹಿಂಬಾಲಿಸುತ್ತಿದ್ದಾರಾ ಎಂದು ಹಿಂದಿರುಗಿ ನೋಡುವುದು ಕೂಡ ವಿಡಿಯೋದಲ್ಲಿ ಕಾಣಿಸುತ್ತಿದೆ. ಆ ಕಳ್ಳನಿಗೆ ಮಾತ್ರ ಇದ್ಯಾವುದರ ಅರಿವೂ ಇಲ್ಲ. ಮೊಬೈಲ್ವೊಂದು ಸಿಕ್ಕ ಖುಷಿಯಲ್ಲಿ ಬೈಕ್ನಲ್ಲಿ ಸ್ಪೀಡ್ ಆಗಿ ಹೋಗುವುದು ವಿಡಿಯೋದಲ್ಲಿ ನೋಡಬಹುದು.
ಮೊಬೈಲ್ ಕದ್ದಿದ್ದು ಗಂಭೀರ ವಿಚಾರವಾದರೂ ಇದೀಗ ಫನ್ನಿ ವಿಡಿಯೋವಾಗಿ ಮಾರ್ಪಟ್ಟಿದೆ. ನೆಟ್ಟಿಗರೊಬ್ಬರು ಶೇರ್ ಮಾಡಿಕೊಂಡ ವಿಡಿಯೋಕ್ಕೆ 6.2 ಮಿಲಿಯನ್ಗಳಷ್ಟು ವೀವ್ಸ್ ಬಂದಿದೆ. ಸಾವಿರಾರು ಜನ ಕಮೆಂಟ್ ಮಾಡಿದ್ದಾರೆ. ಈ ಕಳ್ಳನೀಗ ಬಂಧಿಸಲ್ಪಟ್ಟಿದ್ದಾನೆ ಮತ್ತು ಆತನ ಬೈಕ್ನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಅಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ.
#اليوم_السابع مراسل اليوم السابع كان طالع لايف يتكلم عن الزلازل التليفون اتسرق منه والواد اللي سرقه كمل اللايف ? pic.twitter.com/ZAyHXN53z6
— Yasmin Mahmoud (@M49828376Yasmin) October 19, 2021
ಇದನ್ನೂ ಓದಿ: ಬಿಎಸ್ವೈ ಆಪ್ತನ ಸ್ಥಾನಚ್ಯುತಿ: ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿಢೀರ್ ಬದಲಾವಣೆ
‘ಸಲಗ ಚಿತ್ರವನ್ನು ತುಳಿಯೋಕೆ ಆಗಲ್ಲ, ಸುಮ್ಮನೆ ಸಣ್ಣತನ ತೋರಿಸಬೇಡಿ’: ದುನಿಯಾ ವಿಜಯ್ ಎಚ್ಚರಿಕೆ
Published On - 4:51 pm, Thu, 21 October 21