ನವದೆಹಲಿ: ಪಿಎಂ-ಕೇರ್ಸ್ ಫಂಡ್‌ನಲ್ಲಿ ಪಾರದರ್ಶಕತೆ ಇಲ್ಲ ಎನ್ನುವ ವಿಚಾರ ಈ ಮೊದಲಿನಿಂದಲೂ ಚರ್ಚೆ ಆಗುತ್ತಲೇ ಇದೆ. ಈ ವಿಚಾರಕ್ಕೆ ಸಂಬಂಧಿಸಿ 100 ಮಾಜಿ ಸರ್ಕಾರಿ ಅಧಿಕಾರಿಗಳು ಪ್ರಧಾನಿ ನರೇಂದ್ರ ಮೋದಿಯವರಿಗೆ ಶನಿವಾರ ಪತ್ರ ಬರೆದು, ಪಿಎಂ ಕೇರ್ಸ್ ಪಾರದರ್ಶಕತೆ ತರುವ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪಿಎಂ ಕೇರ್ಸ್ ಹಣ ದುರ್ಬಳಕೆ ಆಗುತ್ತಿದೆ ಎನ್ನುವುದು ವಿಪಕ್ಷಗಳ ಆರೋಪ. ಅನೇಕ ಸಾರ್ವಜನಿಕರು ಕೂಡ ಇದೇ ಮಾದರಿಯ ಆರೋಪ ಮಾಡಿದ್ದರು. ಹೀಗಾಗಿ, ಈ ಅನುಮಾನಗಳನ್ನು ತಪ್ಪಿಸಲು ಪಿಎಂ ಕೇರ್ಸ್ ಹಣಕಾಸಿನ ಖರ್ಚುಗಳ ವಿವರಗಳನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡುವುದು ಅವಶ್ಯಕತೆ ಎಂದು ಮಾಜಿ ಸರ್ಕಾರಿ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಕೊರೊನಾ ವೈರಸ್ನಿಂದ ಸಾಕಷ್ಟು ಜನರು ತೊಂದರೆಗೆ ಸಿಲುಕಿದ್ದಾರೆ. ಇವರಿಗೆ ಸಹಕಾರಿಯಾಗುವ ಉದ್ದೇಶದಿಂದ ಕೇಂದ್ರ ಸರ್ಕಾರ ಪಿಎಂ ಕೇರ್ಸ್ ಸ್ಥಾಪನೆ ಮಾಡಿತ್ತು. ಆದರೆ, ಪಿಎಂ ಕೇರ್ಸ್ ನಿರ್ವಹಿಸುತ್ತಿರುವ ರೀತಿ ಸಾಕಷ್ಟು ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿದೆ. ಹೀಗಾಗಿ, ಇದರಲ್ಲಿ ಪಾರದರ್ಶಕತೆ ತರುವ ಅವಶ್ಯಕತೆ ಇದೆ ಎಂದು ಮಾಜಿ ಅಧಿಕಾರಿಗಳು ಪತ್ರದಲ್ಲಿ ತಿಳಿಸಿದ್ದಾರೆ.
ಮಾಜಿ ಐಎಸ್ ಅಧಿಕಾರಿಗಳಾದ ಅನಿತಾ ಅಗ್ನಿಹೋತ್ರಿ, ಎಸ್ಪಿ ಅಂಬ್ರೋಸೆ, ಶರದ್ ಬೇಹರ್, ಅರುಣ್ ರಾಯ್ ಸೇರಿ ಅನೇಕರು ಪತ್ರಕ್ಕೆ ಸಹಿ ಹಾಕಿದ್ದಾರೆ.