ಹೈದರಾಬಾದ್: ವಿಶಾಖಪಟ್ಟಣಂನಲ್ಲಿರುವ ಆಂಧ್ರ ವಿಶ್ವವಿದ್ಯಾಲಯ (AU)ದ ಎಂಜಿನಿಯರಿಂಗ್ ಕಾಲೇಜಿನ 102 ವಿದ್ಯಾರ್ಥಿಗಳಿಗೆ ಕೊವಿಡ್ ತಗುಲಿದ್ದು, ಕಾಲೇಜಿನ ಹಾಸ್ಟೆಲ್ ನ್ನು ಐಸೋಲೆಷನ್ ವಾರ್ಡ್ ಆಗಿ ಪರಿವರ್ತಿಸಲಾಗಿದೆ. ಶನಿವಾರ 50 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಇರುವುದು ಪತ್ತೆಯಾಗಿತ್ತು. ಭಾನುವಾರ ಕೊವಿಡ್ ಪರೀಕ್ಷೆ ನಡೆಸಿದಾಗ 102 ವಿದ್ಯಾರ್ಥಿಗಳಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ. ಸೋಂಕಿತರಲ್ಲಿ 96 ವಿದ್ಯಾರ್ಥಿಗಳು, 5 ಮಂದಿ ಕಾಲೇಜು ಸಿಬ್ಬಂದಿ ಮತ್ತು ಓರ್ವ ವಿದ್ಯಾರ್ಥಿನಿ ಇದ್ದಾರೆ ಎಂದು ಕಾಲೇಜು ಅಧಿಕೃತರು ಹೇಳಿರುವುದಾಗಿ ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.
ಆದಾಗ್ಯೂ, ಈ ವಿದ್ಯಾರ್ಥಿಗಳ ಪ್ರಾಥಮಿಕ ಸಂಪರ್ಕಕ್ಕೆ ಬಂದಿರುವ ವಿದ್ಯಾರ್ಥಿಗಳನ್ನೂ ಕೂಡಾ ಕೊವಿಡ್ ಪರೀಕ್ಷೆಗೊಳಪಡಿಸಲಾಗುತ್ತಿದೆ. ಇಲ್ಲಿಯವರೆಗೆ 1000 ವಿದ್ಯಾರ್ಥಿಗಳಿಗೆ ಕೊವಿಡ್ ಇರುವುದು ಪತ್ತೆಯಾಗಿದೆ.
ವಿಶ್ವವಿದ್ಯಾಲಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾಲೇಜಿಗೆ ಭೇಟಿ ನೀಡಿದ ರಾಜ್ಯ ಪ್ರವಾಸೋದ್ಯಮ ಸಚಿವ ಎಂ.ಎಸ್ ಶ್ರೀನಿವಾಸ ರಾವ್ ಅವರು ವಿಶ್ವವಿದ್ಯಾಲಯದಲ್ಲಿ ಸೋಂಕು ಹರಡದಂತೆ ಕ್ರಮ ಕೈಗೊಳ್ಳಲಾಗಿದೆ. ಸೋಂಕಿತರಿಗೆ ಚಿಕಿತ್ಸೆಯನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.
ಕೊರೊನಾ ವೈರಸ್ ಸೋಂಕಿತರಿಗೆ ಅಗತ್ಯ ಚಿಕಿತ್ಸೆಗಳನ್ನು ಜಿಲ್ಲಾಡಳಿತ ಪೂರೈಸಿದೆ. ಐಸೋಲೇಷನ್ ಬ್ಲಾಕ್ ಸಿದ್ಧಪಡಿಸಿದ್ದು, ಕೋವಿಡ್-19 ಕಿಟ್ ವಿತರಣೆ ಮಾಡಲಾಗಿದೆ. ವಿದ್ಯಾರ್ಥಿಗಳ ಪೋಷಕರು ಭಯಪಡುವ ಅಗತ್ಯವಿಲ್ಲ ಎಂದು ರಾವ್ ಹೇಳಿದ್ದಾರೆ.
ಸೋಂಕಿತ ವಿದ್ಯಾರ್ಥಿಗಳೊಂದಿಗೆ ಸಂಪರ್ಕದಲ್ಲಿದ್ದ ವಿದ್ಯಾರ್ಥಿಗಳನ್ನು ಪರೀಕ್ಷೆಗೊಳಪಡಿಸಿ ಇನ್ನೊಂದು ಐಸೋಲೇಷನ್ ಬ್ಲಾಕ್ ನಲ್ಲಿ ಅವರನ್ನು ನಿಗಾದಲ್ಲಿರಸಲಾಗಿದೆ. ಕಿಂಗ್ ಜಾರ್ಜ್ ಆಸ್ಪತ್ರೆಯಲ್ಲಿ 550 ಹಾಸಿಗೆ, ವಿಶಾಖ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್ (VIMS)ನಲ್ಲಿ 650 ಹಾಸಿಗೆಗಳಿದ್ದು, ತುರ್ತು ಸಂದರ್ಭದಲ್ಲಿ ಇವುಗಳನ್ನು ಬಳಸಬಹುದು ಎಂದು ಸಚಿವರು ಹೇಳಿದ್ದಾರೆ.
ಜಿಲ್ಲಾಡಳಿತದ ಅಧಿಕಾರಿಗಳು, ಕಾಲೇಜು ಅಧಿಕೃತರು ಮತ್ತು ವಿಶ್ವ ವಿದ್ಯಾಲಯದ ಉಪ ಕುಲಪತಿ ಪ್ರೊಫೆಸರ್ ಪ್ರಸಾದ್ ರೆಡ್ಡಿ ಜತೆ ಸಭೆ ನಡೆಸಿದ ಸಚಿವ ರಾವ್, ಕಾಲೇಜಿನ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ. ಸೋಂಕಿತ ವಿದ್ಯಾರ್ಥಿಗಳಿಗೆ ಅಗತ್ಯ ಚಿಕಿತ್ಸೆ ನೀಡುವುದರ ಜತೆಗೆ ವಿದ್ಯಾರ್ಥಿಗಳ ಮೇಲೆ ನಿರಂತರ ನಿಗಾ ಇರಿಸುವಂತೆ ಸಚಿವರು ಜಿಲ್ಲಾ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ (DMHO) ಅವರಿಗೆ ನಿರ್ದೇಶಿಸಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಆಂಧ್ರ ಪ್ರದೇಶದಲ್ಲಿ 1,005 ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿವೆ. ಭಾನುವಾರದವರೆಗಿನ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ 8,95,920 ಕೊವಿಡ್ ಪ್ರಕರಣಗಳು ಪತ್ತೆಯಾಗಿದ್ದು 8,83,321 ಮಂದಿ ಚೇತರಿಸಿಕೊಂಡಿದ್ದಾರೆ. 7,205ಮಂದಿ ಮೃತಪಟ್ಟಿದ್ದಾರೆ. ಪ್ರಸ್ತುತ 5,394 ರೋಗಿಗಳು ಚಿಕಿತ್ಸೆಯಲ್ಲಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ದೇಶದಲ್ಲಿ ಏರಿಕೆಯಾಗುತ್ತಿದೆ ಕೊರೊನಾ ಪ್ರಕರಣ
ಕಳೆದ 24 ಗಂಟೆಯಲ್ಲಿ ದೇಶದಲ್ಲಿ ಒಟ್ಟು 68,020 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. 2020ರ ಅಕ್ಟೋಬರ್ ತಿಂಗಳ ನಂತರ ಒಂದೇ ದಿನ ಇಷ್ಟು ಪ್ರಮಾಣದಲ್ಲಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. 29 ಸೋಂಕಿತರು ಮೃತಪಟ್ಟಿದ್ದಾರೆ. ದೇಶದಲ್ಲಿ ಒಟ್ಟ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 35,498ಕ್ಕೆ ತಲುಪಿದೆ. ಕೊರೊನಾ ಸೋಂಕು ಗಣನೀಯ ಪ್ರಮಾಣದಲ್ಲಿ ಏರುತ್ತಿರುವ ರಾಜ್ಯಗಳಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದು, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಈಗಾಗಲೇ ಲಾಕ್ಡೌನ್ ವಿಧಿಸುವ ಸಂಭಾವ್ಯತೆಗಳ ಕುರಿತು ಅಧಿಕೃತ ಸುಳಿವು ನೀಡಿದ್ದಾರೆ.
ಸೋಂಕಿತರ ಪ್ರಮಾಣದಲ್ಲಿ ಹೆಚ್ಚಳ; ಹಬ್ಬಗಳ ಆಚರಣೆಗೆ ತಡೆ
ಮಹಾರಾಷ್ಟ್ರ ಮತ್ತು ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಹೋಳಿ ಹಬ್ಬದ ಆಚರಣೆ ಬಹು ಜೋರಾಗಿದ್ದು ಕೊರೊನಾ ಸೋಂಕಿನ ಹರಡುವಿಕೆ ಹೆಚ್ಚುವ ಸಾಧ್ಯತೆಯಿದೆ. ಈ ಕಾರಣಕ್ಕೆ ಮುಂಬೈ ಸೇರಿದಂತೆ ಬಹುತೇಕ ನಗರಗಳಲ್ಲಿ ಹೋಳಿ ಹಬ್ಬದ ಸಾರ್ವಜನಿಕ ಆಚರಣೆಗೆ ತಡೆ ಒಡ್ಡಲಾಗಿದೆ. ಮುಂಬೈನಲ್ಲಿ ಅಧಿಕೃತವಾಗಿಯೇ ಹೋಳಿ ಆಚರಣೆಗೆ ನಿಷೇಧ ಹೇರಲಾಗಿದ್ದು, ಇನ್ನಿತರ ಪ್ರಮುಖ ನಗರಗಳಾದ ದೆಹಲಿ, ಇಂದೋರ್, ಭೂಪಾಲ್ಗಳಲ್ಲಿ ಸಾರ್ವಜನಿಕವಾಗಿ ಹಬ್ಬಗಳ ಆಚರಣೆ ಮಾಡದಂತೆ ಆಯಾ ರಾಜ್ಯಗಳ ಆಡಳಿತಗಳು ಮನವಿ ಮಾಡಿವೆ. ಅಲ್ಲದೇ ಜಾರ್ಖಂಡ್, ರಾಜಸ್ಥಾನ, ಗೋವಾ, ತೆಲಂಗಾಣ ಉತ್ತರಾಖಂಡ್, ಬಿಹಾರ್, ರಾಜಸ್ಥಾನ, ಹರ್ಯಾಣ, ಮೇಘಾಲಯ ರಾಜ್ಯಗಳ ಸರ್ಕಾರಗಳು ಸಹ ಹೋಳಿ, ಶಬ್-ಇ-ಬರತ್,ಈಸ್ಟರ್ ಮತ್ತು ರಾಮನವಮಿ ಹಬ್ಬಗಳನ್ನು ಸಾರ್ವಜನಿಕವಾಗಿ ಆಚರಿಸದಂತೆ ಸಾರ್ವಜನಿಕರಲ್ಲಿ ಕೋರಿವೆ.
ಇದನ್ನೂ ಓದಿ: Coronavirus News LIVE: 24 ಗಂಟೆಯಲ್ಲಿ68,020 ಕೊರೊನಾ ಪ್ರಕರಣ; ವೇಗವಾಗಿ ಹಬ್ಬುತ್ತಿದೆ ಸೋಂಕು