11 Years of PM Modi: ನರೇಂದ್ರ ಮೋದಿ ಸರ್ಕಾರಕ್ಕೆ 11 ವರ್ಷ, ಕೈಗೊಂಡ ಹನ್ನೊಂದು ಪ್ರಮುಖ ನಿರ್ಧಾರಗಳು ಇಲ್ಲಿವೆ

ಮೋದಿ ಸರ್ಕಾರಕ್ಕೆ 11 ವರ್ಷ: ಪ್ರಧಾನಿ ನರೇಂದ್ರ ಮೋದಿ ಕೇಂದ್ರದಲ್ಲಿ ಅಧಿಕಾರದ ಗದ್ದುಗೆಗೆ ಏರಿ 11 ವರ್ಷಗಳಾಗಿವೆ. 2014ರ ಮೇ 26 ರಂದು ಅವರು ಮೊದಲು ಪ್ರಧಾನಿಯಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದ್ದರು. ನಂತರ 11 ವರ್ಷಗಳ ಅವಧಿಯಲ್ಲಿ ಅವರ ಸರ್ಕಾರ ಜನಧನ ಯೋಜನೆ, ಬೇಟಿ ಬಚಾವೋ, ನಮಾಮಿ ಗಂಗೆ, ಮೇಕ್ ಇನ್ ಇಂಡಿಯಾ, ನೋಟ್ ಬ್ಯಾನ್ ಮುಂತಾದ ಪ್ರಮುಖ ಕ್ರಮಗಳನ್ನು ಕೈಗೊಂಡಿದೆ. ಗ್ರಾಮೀಣ ವಿದ್ಯುದೀಕರಣ, ಡಿಜಿಟಲ್ ಇಂಡಿಯಾ, ಆರೋಗ್ಯ ಕ್ಷೇತ್ರದಲ್ಲಿನ ಉಪಕ್ರಮಗಳು ಹಾಗೂ ಪಾಕಿಸ್ತಾನದ ಉಗ್ರರ ವಿರುದ್ಧದ ಕ್ರಮಗಳು ಸಹ ಈ ಅವಧಿಯ ಗಮನಾರ್ಹ ಕ್ರಮಗಳಾಗಿವೆ. ವಿವರಗಳು ಇಲ್ಲಿದೆ.

11 Years of PM Modi: ನರೇಂದ್ರ ಮೋದಿ ಸರ್ಕಾರಕ್ಕೆ 11 ವರ್ಷ, ಕೈಗೊಂಡ ಹನ್ನೊಂದು ಪ್ರಮುಖ ನಿರ್ಧಾರಗಳು ಇಲ್ಲಿವೆ
ಪ್ರಧಾನ ಮಂತ್ರಿ ನರೇಂದ್ರ ಮೋದಿ

Updated on: May 26, 2025 | 10:38 AM

ನವದೆಹಲಿ, ಮೇ 26: ನರೇಂದ್ರ ಮೋದಿ (Narendra Modi) ಪ್ರಧಾನ ಮಂತ್ರಿಯಾಗಿ ಮೊದಲ ಬಾರಿಗೆ ಅಧಿಕಾರ ಸ್ವೀಕರಿಸಿ ಹನ್ನೊಂದು ವರ್ಷಗಳಾಗಿವೆ. 2014ರ ಮೇ 26 ರಂದು ಅವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದರು. ಆ ನಂತರ 2019ರಲ್ಲಿ ಮತ್ತೆ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದಿತು. 2024 ರ ಲೋಕಸಭೆ ಚುನಾವಣೆಯಲ್ಲಿ ಪೂರ್ಣ ಬಹುಮತಕ್ಕೆ ಬೇಕಿದ್ದ ಸ್ಥಾನಗಳಿಗಿಂತ ಬಿಜೆಪಿ (BJP) ಕೆಲವೇ ಸಂಖ್ಯೆಗಳಿಂದ ಹಿಂದುಳಿದಿದ್ದರೂ ಎನ್​ಡಿಎ ಮಿತ್ರಪಕ್ಷಗಳ ಬೆಂಬಲದೊಂದಿಗೆ ಮತ್ತೆ ಪ್ರಧಾನಿಯಾಗಿದ್ದಾರೆ. ಇದೀಗ ಅವರು 11 ವರ್ಷಗಳ ಅಧಿಕಾರಾವಧಿ ಪೂರೈಸಿದ್ದು ಬಿಜೆಪಿ ಹಾಗೂ ಎನ್​ಡಿಎ ನಾಯಕರು ಶುಭ ಕೋರಿದ್ದಾರೆ. ಈ ಅವಧಿಯಲ್ಲಿ ಅವರು ನೋಟ್ ಬ್ಯಾನ್, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ, ಪಾಕಿಸ್ತಾನದ ಭಯೋತ್ಪಾದಕರ ಅಡಗುದಾಣಗಳ ಮೇಲೆ ಸರ್ಜಿಕಲ್ ದಾಳಿ ಸೇರಿದಂತೆ ಹಲವು ಮಹತ್ವದ ಕ್ರಮಗಳನ್ನು ಕೈಗೊಂಡಿದ್ದಾರೆ. ಕಳೆದ 11 ವರ್ಷಗಳಲ್ಲಿ ಮೋದಿ ಸರ್ಕಾರ ಕೈಗೊಂಡ ಕೆಲವು ಮಹತ್ವದ ಕ್ರಮಗಳ ಸಂಪಕ್ಷಿಪ್ತ ಹಿನ್ನೋಟ ಇಲ್ಲಿದೆ.

ಪ್ರಧಾನ ಮಂತ್ರಿ ಜನಧನ ಯೋಜನೆ

ದೇಶದ ಎಲ್ಲ ಜನರಿಗೂ ಬ್ಯಾಂಕ್ ಖಾತೆ ಸೌಲಭ್ಯ ದೊರೆಯಬೇಕು ಮತ್ತು ಸರ್ಕಾರದ ಯೋಜನೆಗಳ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರ ಹಣ ವರ್ಗಾವಣೆ ಮಾಡಬೇಕು ಎಂಬ ಉದ್ದೇಶದೊಂದಿಗೆ 2014 ರ ಆಗಸ್ಟ್ 28 ರಂದು ಪ್ರಧಾನ ಮಂತ್ರಿ ಜನಧನ ಯೋಜನೆ ಆರಂಭಿಸಲಾಯಿತು.

ಬೇಟಿ ಬಚಾವೋ ಬೇಟಿ ಪಢಾವೋ

ಕ್ಷೀಣಿಸುತ್ತಿರುವ ಲಿಂಗಾನುಪಾತ ಸರಿಪಡಿಸುವುದು ಹಾಗೂ ಮಹಿಳೆಯರ ಸಬಲೀಕರದಣದ ಉದ್ದೇಶದೊಂದಿಗೆ 2015 ರ ಜನವರಿ 22 ರಂದು ಬೇಟಿ ಬಚಾವೋ ಬೇಟಿ ಪಢಾವೋ ಯೋಜನೆ ಅನುಷ್ಠಾನಕ್ಕೆ ಬಂದಿತು.

ಇದನ್ನೂ ಓದಿ
ಶತ್ರುಗಳ ಎದೆ ನಡುಗಿಸುವ ಬ್ರಹ್ಮೋಸ್: ಭಾರತ-ರಷ್ಯಾ ಮಹತ್ವದ ಮಾತುಕತೆ
ಭಯೋತ್ಪಾದನೆ ಕೊನೆಗೊಳಿಸಲೇಬೇಕು ಇದು ಪ್ರತಿಯೊಬ್ಬ ಭಾರತೀಯನ ಸಂಕಲ್ಪ: ಮೋದಿ
ಎಲ್ಲ ಪಕ್ಷಗಳ ಮುಖ್ಯಮಂತ್ರಿಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಟೀಂ ಇಂಡಿಯಾದಂತೆ ಒಂದಾಗಿ ಕೆಲಸ ಮಾಡೋಣ; ರಾಜ್ಯ ಸರ್ಕಾರಗಳಿಗೆ ಮೋದಿ ಕರೆ

ಸಂಸದರ ಆದರ್ಶ ಗ್ರಾಮ ಯೋಜನೆ

ಈ ಯೋಜನೆಯ ಮೂಲಕ, ಸಂಸದರು ಗ್ರಾಮವೊಂದನ್ನು ದತ್ತು ಸ್ವೀಕಾರ ಮಾಡಿ ಮಾದರಿ ಗ್ರಾಮವನ್ನಾಗಿ ಅಭಿವೃದ್ಧಿಪಡಿಸುವ ಉದ್ದೇಶ ಹೊಂದಲಾಗಿತ್ತು.

ಮೇಕ್ ಇನ್ ಇಂಡಿಯಾ

ಇದು ವಿವಿಧ ಕೈಗಾರಿಕಾ ವಲಯಗಳ ಉತ್ಪಾದನೆ ಮತ್ತು ಉದ್ಯಮಶೀಲತಾ ಚಟುವಟಿಕೆಗಳನ್ನು ಬೆಂಬಲಿಸಲು ಕೈಗೊಂಡ ಯೋಜನೆಯಾಗಿದೆ. ಇದರ ಅಡಿಯಲ್ಲಿ ಕೈಗಾರಿಕೆಗಳು ಹಾಗೂ ಉತ್ಪಾದನಾ ವಲಯಕ್ಕೆ ಮೂಲಸೌಕರ್ಯ ಒದಗಿಸಿಕೊಡಲಾಗುತ್ತದೆ.

ನಮಾಮಿ ಗಂಗೆ

ದೇಶದ ಪ್ರಮುಖ ನದಿಯಾಗಿರುವ ಗಂಗಾ ನದಿಯ ನೈರ್ಮಲ್ಯ ಕಾಪಾಡುವುದು, ಸ್ವಚ್ಛತೆಗೆ ಸಂಬಂಧಿಸಿದ ಯೋಜನೆ ಇದಾಗಿದೆ. 2014 ರ ಜೂನ್​ನಲ್ಲಿ 20,000 ಕೋಟಿ ರೂಪಾಯಿಗಳ ಬಜೆಟ್ ಅನುದಾನದೊಂದಿಗೆ ಯೋಜನೆ ಆರಂಭಿಸಲಾಗಿತ್ತು. ನದಿಯ ಸಂರಕ್ಷಣೆ ಮತ್ತು ಪುನರುಜ್ಜೀವನದ ದೃಷ್ಟಿಯಿಂದ ಈ ಯೋಜನೆ ಬಹಳ ಮಹತ್ವದ್ದಾಗಿದೆ.

ಆರ್ಟಿಕಲ್ 370 ರದ್ದತಿ

ಮೋದಿ ಸರ್ಕಾರದ ಬಹಳ ಮಹತ್ವದ ನಿರ್ಧಾರ ಇದಾಗಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ 2019ರಲ್ಲಿ ಅವುಗಳನ್ನು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಲಾಯಿತು. 2019 ರ ಆಗಸ್ಟ್ 5 ರಂದು 370 ನೇ ವಿಧಿಯನ್ನು ರದ್ದುಗೊಳಿಸುವ ದೂರದೃಷ್ಟಿಯ ನಿರ್ಧಾರ ಕೈಗೊಳ್ಳಲಾಯಿತು. 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ, ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಮತ್ತು ಸಹಜ ಸ್ಥಿತಿ ಮರಳಿದೆ. ಹಿಂಸಾಚಾರದಿಂದ ಛಿದ್ರಗೊಂಡ ಕಣಿವೆಯಲ್ಲಿ ಬೆಳವಣಿಗೆ ಮತ್ತು ಅಭಿವೃದ್ಧಿಯು ಮಾನವ ಜೀವನಕ್ಕೆ ಹೊಸ ಅರ್ಥವನ್ನು ತಂದಿದೆ ಎಂದು ಭಾರತ ಸರ್ಕಾರ ಹೇಳಿಕೊಂಡಿದೆ.

ನೋಟ್ ಬ್ಯಾನ್

ಕಪ್ಪುಹಣ ಮತ್ತು ಭ್ರಷ್ಟಾಚಾರ ತಡೆ ನಿಟ್ಟಿನಲ್ಲಿ 2016ರ ನವೆಂಬರ್ 8 ರಂದು 500 ಹಾಗೂ 1000 ರೂ. ಮುಖಬೆಲೆಯ ಕರೆನ್ಸಿ ನೋಟುಗಳನ್ನು ನಿಷೇಧಿಸಲಾಯಿತು. ಈ ಕ್ರಮ ರಾಜಕೀಯವಾಗಿಯೂ ಬಹಳಷ್ಟು ಟೀಕೆ, ಪರ-ವಿರೋಧ ಚರ್ಚೆಗೆ ಗ್ರಾಸವಾಗಿತ್ತು.

ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ

ಈ ಕಾರ್ಯಕ್ರಮವು ಸುಧಾರಿತ ನೀರಾವರಿ ಸೌಲಭ್ಯಗಳು ಮತ್ತು ‘‘ಪ್ರತಿ ಹನಿಗೆ ಹೆಚ್ಚಿನ ಬೆಳೆ’’ ಧ್ಯೇಯವಾಕ್ಯ ಸೇರಿದಂತೆ ಮಾರುಕಟ್ಟೆಯಲ್ಲಿ ಲಭ್ಯವಿರುವ ನೀರಾವರಿ ತಂತ್ರಜ್ಞಾನಗಳನ್ನು ಒದಗಿಸುವ ಮೂಲಕ ಕೃಷಿಯಿಂದ ಇಳುವರಿಯನ್ನು ಹೆಚ್ಚಿಸಲು ಪ್ರಯತ್ನಿಸುವ ಯೋಜನೆಯಾಗಿದೆ.

ಡಿಜಿಟಲ್ ಇಂಡಿಯಾ ಉಪಕ್ರಮ

ಭಾರತವನ್ನು ಡಿಜಿಟಲ್ ಸಬಲೀಕರಣಗೊಂಡ ಸಮಾಜವನ್ನಾಗಿ ಮಾಡುವ ಗುರಿಯೊಂದಿಗೆ ಡಿಜಿಟಲ್ ಇಂಡಿಯಾ ಯೋಜನೆ ಹಮ್ಮಿಕೊಳ್ಳಲಾಗಿತ್ತು. ಪರಿಣಾಮವಾಗಿ ದೇಶದಾದ್ಯಂತ, ಗ್ರಾಮೀಣ ಪ್ರದೇಶಗಳಲ್ಲೂ ಇಂಟರ್ನೆಟ್ ಸೌಲಭ್ಯ, ಡಿಜಿಟಲ್ ಪರಿಕರಗಳು ಲಭ್ಯವಾಗುವಂತಾಗಿದೆ.’

ಸಾರ್ವಜನಿಕರ ಆರೋಗ್ಯಕ್ಕಾಗಿ ಹಲವು ಯೋಜನೆಗಳು

ಕೇಂದ್ರ ಸರ್ಕಾರವು ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಅನೇ ಉಪಕ್ರಮಗಳನ್ನು ಕೈಗೊಂಡಿದೆ. ಜನರಿಗೆ ಉತ್ತಮ ಮತ್ತು ಸುಧಾರಿತ ಆರೋಗ್ಯ ಸೇವೆಯನ್ನು ಒದಗಿಸುವ ಉದ್ದೇಶದಿಂದ, ಸಮಾಜದ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಆರೋಗ್ಯ ವಿಮೆಗಾಗಿ ‘ಆಯುಷ್ಮಾನ್ ಭಾರತ್’ ಆರಂಭಿಸಲಾಗಿದೆ. ಬಡವರಿಗೆ ಕಡಿಮೆ ದರದಲ್ಲಿ ಔಷಧ ನೀಡಲು ಜನ ಔಷಧ ಕೇಂದ್ರಗಳ ಆರಂಭ ಸೇರಿದಂತೆ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಪಾಕಿಸ್ತಾನದ ಉಗ್ರರ ವಿರುದ್ಧ ದಿಟ್ಟ ಕ್ರಮ

2019ರಲ್ಲಿ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಭಯೋತ್ಪಾದಕ ದಾಳಿಗೆ ಸಿಆರ್​​ಪಿಎಫ್ ಯೋಧರು ಹುತಾತ್ಮರಾಗಿದ್ದರು. ಅದಾದ ನಂತರ, ಭಾರತೀಯ ಸೇನೆಯು ಬಾಲಾಕೋಟ್ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿತ್ತು. 2025ರ ಏಪ್ರಿಲ್ 22 ರಂದು ಪಹಲ್ಗಾಮ್​​ನಲ್ಲಿ ಉಗ್ರರ ದಾಳಿಗೆ 26 ಮಂದಿ ಅಮಾಯಕರು ಬಲಿಯಾಗಿದ್ದರು. ಇದಕ್ಕೆ ಪ್ರತೀಕಾರವಾಗಿ ಮೇ 7-8ರಂದು ಭಾರತೀಯ ಸೇನೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಹಾಗೂ ಪಾಕಿಸ್ತಾನದ ಒಳಭಾಗದ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:14 am, Mon, 26 May 25