ಶತ್ರುಗಳ ಎದೆ ನಡುಗಿಸುವ ‘ಬ್ರಹ್ಮೋಸ್’ ಬ್ರಹ್ಮಾಸ್ತ್ರ: ಭಾರತ-ರಷ್ಯಾ ಮಹತ್ವದ ಮಾತುಕತೆ
ಭಾರತದ ಶಕ್ತಿಶಾಲಿ ಅಸ್ತ್ರ ಬ್ರಹ್ಮೋಸ್ ನ ಪರಾಕ್ರಮ ಕಂಡು ಜಗತ್ತು ಬೆರಗಾಗಿದೆ. ಬ್ರಹ್ಮೋಸ್ ಭಾರತದ ಪಾಲಿಗೆ ಬ್ರಹ್ಮಾಸ್ತ್ರವಾಗಿದೆ. ಆಪರೇಷನ್ ಸಿಂದೂರ್ ಕಾರ್ಯಾಚರಣೆ ಸಂದರ್ಭದಲ್ಲಿ ಬ್ರಹ್ಮೋಸ್‌ನ ಶಕ್ತಿ ಮತ್ತು ಸಾಮಾರ್ಥ್ಯ ಪ್ರದರ್ಶನವಾಗಿದೆ. ಈ ಬ್ರಹ್ಮೋಸ್ ಕ್ಷೀಪಣಿಯನ್ನು ಭಾರತ ಮತ್ತು ರಷ್ಯಾ ಜಂಟಿಯಾಗಿ ನಿರ್ಮಿಸಿವೆ. ಇದೀಗ ಭಾರತ ಮತ್ತು ರಷ್ಯಾ ಮತ್ತೆ ಜಂಟಿಯಾಗಿ ಸೂಪರ್ ಬ್ರಹ್ಮೋಸ್ ಕ್ಷೀಪಣಿ ಅಭಿವೃದ್ಧಿಪಡಿಸಲು ಮುಂದಾಗಿವೆ.

ನವದೆಹಲಿ, ಮೇ 25: ಆಪರೇಷನ್ ಸಿಂದೂರ್ (Operation Sindoor) ಕಾರ್ಯಾಚರಣೆಯಲ್ಲಿ ಬ್ರಹ್ಮೋಸ್ ಕ್ಷಿಪಣಿಯ (Brahmos) ಪರಾಕ್ರಮವನ್ನು ಜಗತ್ತು ಕಂಡಿದೆ. ಭಾರತ (India) ಮತ್ತು ರಷ್ಯಾ (Russia) ಜಂಟಿಯಾಗಿ ನಿರ್ಮಿಸಿರುವ ಬ್ರಹ್ಮೋಸ್ ಜಗತ್ತಿನ ಅತ್ಯಂತ ಶಕ್ತಿಶಾಲಿ ಕ್ಷಿಪಣಿಗಳಲ್ಲಿ ಒಂದಾಗಿದೆ. ಇದೀಗ, ಭಾರತ ಮತ್ತು ರಷ್ಯಾ ಮತ್ತೆ ಜಂಟಿಯಾಗಿ ಬ್ರಹ್ಮೋಸ್ ಕ್ಷಿಪಣಿಯ ಹೊಸ ಮತ್ತು ಹೆಚ್ಚು ಶಕ್ತಿಶಾಲಿಯಾದ ಆವೃತ್ತಿಯನ್ನು (ಸೂಪರ್ ಬ್ರಹ್ಮೋಸ್) ತಯಾರಿಸಲು ಮುಂದಾಗಿವೆ. ಈ ಹೊಸ ಬ್ರಹ್ಮೋಸ್ ಕ್ಷಿಪಣಿಯನ್ನು ಇತ್ತೀಚಿಗೆ ಉದ್ಘಾಟನೆಗೊಂಡಿರುವ ಉತ್ತರ ಪ್ರದೇಶದ ಬ್ರಹ್ಮೋಸ್ ಉತ್ಪಾದನಾ ಘಟಕದಲ್ಲಿ ತಯಾರಿಸಲಾಗುತ್ತದೆ ಎಂದು ವರದಿಯಾಗಿದೆ.
ರಷ್ಯಾದ ಸಂಪೂರ್ಣ ಬೆಂಬಲ
ಈ ಹೊಸ ಕ್ಷಿಪಣಿ ತಯಾರಿಕೆಗೆ ರಷ್ಯಾ ಭಾರತಕ್ಕೆ ಸಂಪೂರ್ಣ ತಾಂತ್ರಿಕ ಬೆಂಬಲವನ್ನು ನೀಡಿದೆ. ಈ ಹೊಸ ಕ್ಷಿಪಣಿ ತಯಾರಿಕೆಗೆ ಸಂಬಂಧಿಸಿದಂತೆ ಎರಡೂ ದೇಶಗಳ ನಡುವಿನ ಮೊದಲ ಹಂತದ ಮಾತುಕತೆ ಪೂರ್ಣಗೊಂಡಿದೆ. ಹೊಸ ಬ್ರಹ್ಮೋಸ್, ಸದ್ಯ ಭಾರತದ ಬತ್ತಳಿಕೆಯಲ್ಲಿರುವ ಬ್ರಹ್ಮೋಸ್‌ಗಿಂತ ಹೆಚ್ಚಿನ ವೇಗ ಮತ್ತು ಶಕ್ತಿಶಾಲಿಯಾಗಿರುತ್ತದೆ. ಭಾರತವು ಪಾಕಿಸ್ತಾನದ ರಾವಲ್ಪಿಂಡಿಯಲ್ಲಿರುವ ನೂರ್ ಖಾನ್ ವಾಯುನೆಲೆಯನ್ನು ಬ್ರಹ್ಮೋಸ್ ಕ್ಷಿಪಣಿ ಮೂಲಕ ಧ್ವಂಸಗೊಳಿಸಿತ್ತು. ಈ ವಾಯುನೆಲೆಯು ಪಾಕಿಸ್ತಾನ ವಾಯುಪಡೆಯ ಉತ್ತರದ ಕಾರ್ಯಾಚರಣೆಗಳ ಪ್ರಮುಖ ಕೇಂದ್ರವಾಗಿದೆ. ಈ ವಾಯುನೆಲೆಯು ಪಾಕಿಸ್ತಾನದ ಪರಮಾಣು ಶಸ್ತ್ರಾಸ್ತ್ರ ನಿಯಂತ್ರಣ ಕೇಂದ್ರದ ಹತ್ತಿರದಲ್ಲಿದೆ.
ಶಕ್ತಿಶಾಲಿ ಬ್ರಹ್ಮೋಸ್ ಉತ್ಪಾದನೆಗೆ ಘಟಕ ಸಿದ್ಧ
ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಇತ್ತೀಚೆಗೆ ಉದ್ಘಾಟನೆಗೊಂಡ ಬ್ರಹ್ಮೋಸ್ ಕ್ಷಿಪಣಿ ಉತ್ಪಾದನಾ ಘಟಕದಲ್ಲಿ ಈ ಹೊಸ ‘ಸೂಪರ್ ಬ್ರಹ್ಮೋಸ್’ ಅನ್ನು ತಯಾರಿಸಲಾಗುತ್ತದೆ ಎಂದು ತಿಳಿದುಬಂದಿದೆ. ಸುಮಾರು 300 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಈ ಘಟಕವು 80 ಹೆಕ್ಟೇರ್ ಪ್ರದೇಶದಲ್ಲಿದೆ. ಉತ್ತರ ಪ್ರದೇಶದ ರಕ್ಷಣಾ ಕೈಗಾರಿಕಾ ಕಾರಿಡಾರ್ ಅಡಿಯಲ್ಲಿ ಉತ್ಪಾದನಾ ಘಟಕವನ್ನು ಆರಂಭಿಸಲಾಗಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮೇ 11 ರಂದು ಈ ಘಟಕವನ್ನು ಉದ್ಘಾಟಿಸಿದ್ದರು.
ಬ್ರಹ್ಮೋಸ್ ಕೇವಲ ಕ್ಷಿಪಣಿಯಲ್ಲ, ಅದೊಂದು ಸಂದೇಶ
ಬ್ರಹ್ಮೋಸ್ ಪರಾಕ್ರಮ ರಾಜಕೀಯ ವಲಯದಲ್ಲಿಯೂ ಸಾಕಷ್ಟು ಚರ್ಚೆಯಾಯಿತು. ಕ್ಷಿಪಣಿಯ ಬಗ್ಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾತನಾಡಿದ್ದು, “ಯಾರಾದರೂ ಬ್ರಹ್ಮೋಸ್‌ನ ಶಕ್ತಿಯನ್ನು ನೋಡಲು ಬಯಸಿದರೆ, ಪಾಕಿಸ್ತಾನವನ್ನು ಕೇಳಿ. ಆಪರೇಷನ್ ಸಿಂದೂರ್ ಸಮಯದಲ್ಲಿ ಎಲ್ಲರೂ ಅದರ ಶಕ್ತಿಯನ್ನು ನೋಡಿದ್ದಾರೆ” ಎಂದು ಹೇಳಿದ್ದರು. “ಬ್ರಹ್ಮೋಸ್ ಕೇವಲ ಕ್ಷಿಪಣಿಯಲ್ಲ, ಬದಲಾಗಿ ಶತ್ರುಗಳಿಗೆ ಪ್ರಬಲ ಸಂದೇಶವಾಗಿದೆ. ನಮ್ಮ ಶಕ್ತಿ, ನಮ್ಮ ಮಿಲಿಟರಿ ಸಾಮರ್ಥ್ಯ ಮತ್ತು ನಮ್ಮ ಗಡಿಗಳ ಭದ್ರತೆಯ ಸಂಕೇತ” ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದರು.
ಇದನ್ನೂ ಓದಿ: ಭಯೋತ್ಪಾದನೆ ಕೊನೆಗೊಳಿಸಲೇಬೇಕು ಇದು ಪ್ರತಿಯೊಬ್ಬ ಭಾರತೀಯನ ಸಂಕಲ್ಪ: ಪ್ರಧಾನಿ ಮೋದಿ
ಬ್ರಹ್ಮೋಸ್ ಮುಂದೆ ಪಾಕ್-ಚೀನಾ ವಾಯು ರಕ್ಷಣಾ ವ್ಯವಸ್ಥೆ ಠುಸ್
ಬ್ರಹ್ಮೋಸ್ ಕ್ಷಿಪಣಿಯ ಮ್ಯಾಕ್ 2.8 ವೇಗದಲ್ಲಿ ಚಲಿಸುತ್ತದೆ. ಪ್ರಸ್ತುತ, ಪಾಕಿಸ್ತಾನ ಅಥವಾ ಚೀನಾದ ಯಾವುದೇ ವಾಯು ರಕ್ಷಣಾ ವ್ಯವಸ್ಥೆಯು ಈ ಕ್ಷಿಪಣಿಯನ್ನು ತಡೆಯಲು ಸಾಧ್ಯವಿಲ್ಲ. ‘ಮೇಕ್ ಇನ್ ಇಂಡಿಯಾ’ ಮತ್ತು ‘ಆತ್ಮನಿರ್ಭರ ಭಾರತ್’ ಉಪಕ್ರಮದ ಅಡಿಯಲ್ಲಿ ದೇಶವನ್ನು ರಕ್ಷಣಾ ವ್ಯವಸ್ಥೆಯಲ್ಲಿ ಸ್ವಾವಲಂಬಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಈ ಯೋಜನೆ ಮಹತ್ವದ್ದಾಗಿದೆ ಎಂದು ಪರಿಗಣಿಸಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 9:10 pm, Sun, 25 May 25








