ಕೊವಿಶೀಲ್ಡ್​ ಲಸಿಕೆ ಮೊದಲ ಡೋಸ್​ಗೂ ಎರಡನೇ ಡೋಸ್​ಗೂ ನಡುವೆ 12-16 ವಾರಗಳ ಅವಧಿ; ಪದೇಪದೆ ಯಾಕೆ ಬದಲಾವಣೆ?

ಕೊವಿಶೀಲ್ಡ್ ಲಸಿಕೆ ಪಡೆಯುವ ಮಧ್ಯಂತರ ಅವಧಿಯನ್ನು ಪದೇಪದೆ ಬದಲಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಕೆಲವರು ಅಸಮಾಧಾನವನ್ನೂ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್​ ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್​ ಈ ಬಗ್ಗೆ ಗಂಭೀರ ಪ್ರಶ್ನೆ ಎತ್ತಿದ್ದಾರೆ.

ಕೊವಿಶೀಲ್ಡ್​ ಲಸಿಕೆ ಮೊದಲ ಡೋಸ್​ಗೂ ಎರಡನೇ ಡೋಸ್​ಗೂ ನಡುವೆ 12-16 ವಾರಗಳ ಅವಧಿ; ಪದೇಪದೆ ಯಾಕೆ ಬದಲಾವಣೆ?
ಕೊವಿಡ್​ ಲಸಿಕೆ
Follow us
Lakshmi Hegde
|

Updated on:May 13, 2021 | 7:13 PM

ದೆಹಲಿ: ಕೊವಿಶೀಲ್ಡ್​ ಕೊವಿಡ್19 ಲಸಿಕೆಯ ಒಂದು ಡೋಸ್​ನಿಂದ ಇನ್ನೊಂದು ಡೋಸ್ ತೆಗೆದುಕೊಳ್ಳುವ ಅವಧಿಯನ್ನು 12-16 ವಾರಗಳಿಗೆ ವಿಸ್ತರಿಸುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಈ ಮೊದಲು ಕೊವಿಶೀಲ್ಡ್ ಮೊದಲ ಡೋಸ್ ತೆಗೆದುಕೊಂಡ 6 ರಿಂದ 8ವಾರದೊಳಗೆ ಇನ್ನೊಂದು ಡೋಸ್ ಲಸಿಕೆ ಪಡೆಯಬೇಕಿತ್ತು. ಇನ್ನು ಕೊವಿಶೀಲ್ಡ್ ಲಸಿಕೆ ಪಡೆಯುವ ಅವಧಿಯ ಬಗ್ಗೆ ಮಾತ್ರ ಕೇಂದ್ರ ಸರ್ಕಾರ ಸೂಚನೆ ನೀಡಿದ್ದು, ಕೊವ್ಯಾಕ್ಸಿನ್ ಮೊದಲ ಡೋಸ್​ ಹಾಗೂ ಎರಡನೇ ಡೋಸ್​ ಪಡೆಯುವ ಮಧ್ಯಂತರ ಅವಧಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಹಾಗಾಗಿ ಇದು ಕೊವಿಶೀಲ್ಡ್ ಪಡೆಯುವವರಿಗೆ ಮಾತ್ರ ಅನ್ವಯ ಆಗಲಿದೆ. ಮೊದಲು ಕೊವಿಶೀಲ್ಡ್​ ಲಸಿಕೆ ಮೊದಲ ಡೋಸ್ ಪಡೆದ 4 ರಿಂದ 6ವಾರದೊಳಗೆ ಇನ್ನೊಂದು ಡೋಸ್ ಪಡೆಯಲು ಕೇಂದ್ರ ಸೂಚಿಸಿತ್ತು. ಅದಾದ ನಂತರ ಅದನ್ನು 6-8ವಾರಗಳಿಗೆ ವಿಸ್ತರಿಸಿ, ಇದೀಗ ಮತ್ತೆ 12-16 ವಾರಗಳಿಗೆ ನಿಗದಿಮಾಡಿದೆ.

ಕೆಲವು ಅಧ್ಯಯನಗಳನ್ನು ಅವಲೋಕಿಸಿದಾಗ ಕೊವಿಶೀಲ್ಡ್ ಲಸಿಕೆಯ ಮೊದಲ ಮತ್ತು ಎರಡನೇ ಡೋಸ್ ಮಧ್ಯಂತರ ಅವಧಿಯನ್ನು ಹೆಚ್ಚಿಸಬಹುದು ಎಂಬುದು ಸಾಬೀತಾಗಿದೆ. ಹಾಗಾಗಿ 12-16ವಾರಗಳಿಗೆ ವಿಸ್ತರಿಸಿ ಎಂದು ಕೇಂದ್ರಸರ್ಕಾರಕ್ಕೆ ತಜ್ಞರ ತಂಡ ಶಿಫಾರಸು ಮಾಡಿತ್ತು. ಅದಕ್ಕೀಗ ಸರ್ಕಾರ ಸಮ್ಮತಿ ನೀಡಿದೆ. ಇನ್ನು ಅವಧಿ ಹೆಚ್ಚಿಸುವುದಕ್ಕೂ ಮೊದಲು ವಿಶ್ವ ಆರೋಗ್ಯ ಸಂಸ್ಥೆಯ ಗಮನಕ್ಕೂ ಇದನ್ನು ತರಲಾಗಿದೆ.

ಆದರೆ ಕೊವಿಶೀಲ್ಡ್ ಲಸಿಕೆ ಪಡೆಯುವ ಮಧ್ಯಂತರ ಅವಧಿಯನ್ನು ಪದೇಪದೆ ಬದಲಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಕೆಲವರು ಅಸಮಾಧಾನವನ್ನೂ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್​ ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್​, ಒಂದು ಡೋಸ್​ನಿಂದ ಮತ್ತೊಂದು ಡೋಸ್ ಪಡೆಯುವ ಅವಧಿ ಮೊದಲು 4 ವಾರ ಇತ್ತು. ನಂತರ 6-8ವಾರ ಆಯಿತು. ಇದೀಗ 12-16ವಾರ ಎಂದು ಹೇಳಲಾಗುತ್ತಿದೆ. ದೇಶದಲ್ಲಿ ಲಸಿಕೆ ಅಭಾವ ಇರುವುದರಿಂದಲೇ ಅಲ್ಲವೇ ಹೀಗೆ ಪದೇಪದೆ ಅವಧಿಯಲ್ಲಿ ಬದಲಾವಣೆ ಮಾಡುತ್ತಿರುವುದು ಎಂದು ಪ್ರಶ್ನಿಸಿದ್ದಾರೆ. ಇದು ನಿಜಕ್ಕೂ ತಜ್ಞರ ಸಲಹೆಯೇ ಹೌದಾ ಎಂಬ ಅನುಮಾನ ಕಾಡುತ್ತಿದೆ. ಪ್ರಧಾನಿ ಮೋದಿ ನೇತೃತ್ವದ ಸರ್ಕಾರದಿಂದ ಇನ್ನಷ್ಟು ಪಾರದರ್ಶಕತೆ ನಾವು ನಿರೀಕ್ಷೆ ಮಾಡಬಹುದಾ ಎಂದು ಅವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ರಷ್ಯಾದ ಸ್ಪುಟ್ನಿಕ್ ಕೊವಿಡ್ ಲಸಿಕೆ ಮುಂದಿನ ವಾರ ಲಭ್ಯ ಸಾಧ್ಯತೆ: ಕೇಂದ್ರ ಸರ್ಕಾರ

ಉತ್ತರ ಪ್ರದೇಶದಲ್ಲಿ ಕೊವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ 14 ಸರ್ಕಾರಿ ವೈದ್ಯರು ರಾಜೀನಾಮೆ

Published On - 7:12 pm, Thu, 13 May 21