
ಅಯೋಧ್ಯೆ ಸೆಪ್ಟೆಂಬರ್ 20: ಅಯೋಧ್ಯೆಯಲ್ಲಿ (Ayodhya) ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರವನ್ನು ಸ್ಫೋಟಿಸುವ ಬೆದರಿಕೆ
(Ram Mandi bomb threat) ಹಾಕಲಾಗಿದೆ. ಸೆಪ್ಟೆಂಬರ್ 21 ರಂದು ಸ್ಫೋಟ ಸಂಭವಿಸಲಿದೆ ಎಂದು ಉತ್ತರ ಪ್ರದೇಶ (Uttar Pradesh) ಪೊಲೀಸ್ ಕಂಟ್ರೋಲ್ ರೂಮ್ ಡಯಲ್ ಸಂಖ್ಯೆ 112ಕ್ಕೆ ಮಂಗಳವಾರ ಈ ಕರೆ ಬಂದಿದೆ. ಈ ಕರೆ ಉತ್ತರ ಪ್ರದೇಶ ಪೊಲೀಸರಲ್ಲಿ ಮಾತ್ರವಲ್ಲದೆ ಕೇಂದ್ರ ಏಜೆನ್ಸಿಗಳಲ್ಲಿಯೂ ಆತಂಕ ಮೂಡಿಸಿದೆ. ಈ ಕರೆ ಮಾಡಿದವರನ್ನು ತರಾತುರಿಯಲ್ಲಿ ತನಿಖೆ ನಡೆಸಲಾಯಿತು. ಬರೇಲಿಯಲ್ಲಿ ವಾಸವಾಗಿರುವ ಬಾಲಕನೊಬ್ಬ ಈ ಕರೆ ಮಾಡಿದ್ದ.
ಅಯೋಧ್ಯೆಯ ರಾಮ ಮಂದಿರಕ್ಕೆ ಬಾಂಬ್ ದಾಳಿ ಮಾಡಲಾಗುವುದು ಎಂದು ಪೊಲೀಸ್ ಕರೆ ಮಾಡಿದ ನಂತರ 12 ವರ್ಷದ ಬಾಲಕನನ್ನು ವಿಚಾರಣೆಗಾಗಿ ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಮಂಗಳವಾರದಂದು, 112 ತುರ್ತು ಸಹಾಯವಾಣಿಗೆ ಈತ ಕರೆ ಮಾಡಿ, ಸೆಪ್ಟೆಂಬರ್ 21, ಗುರುವಾರದಂದು ರಾಮಮಂದಿರವನ್ನು ಬಾಂಬ್ ಸ್ಫೋಟಿಸಲಾಗುವುದು ಎಂದು ಹೇಳಿದ್ದ.
ಫತೇಗಂಜ್ (ಪೂರ್ವ) ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯ ಹುಡುಗನ ಕರೆಯನ್ನು ಪತ್ತೆಹಚ್ಚಲಾಗಿದೆ. ಅಪ್ರಾಪ್ತ ಬಾಲಕ ತನ್ನ ತಂದೆಯ ಫೋನ್‌ನಿಂದ ಕರೆ ಮಾಡಿದ್ದ. ಪೊಲೀಸ್ ಅಧೀಕ್ಷಕ (ಗ್ರಾಮೀಣ) ಮುಖೇಶ್ ಚಂದ್ರ ಮಿಶ್ರಾ ಮಾತನಾಡಿ, ಬಾಲಕ ಮತ್ತು ಆತನ ತಂದೆಯನ್ನು ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆತರಲಾಗಿದೆ ಎಂದು ಹೇಳಿದ್ದಾರೆ.
ಸೆಪ್ಟೆಂಬರ್ 21 ರಂದು ರಾಮ ಮಂದಿರವನ್ನು ಬಾಂಬ್‌ನಿಂದ ಸ್ಫೋಟಿಸಲಾಗುವುದು ಎಂದು ಸಾಮಾಜಿಕ ಮಾಧ್ಯಮ ಚಾನೆಲ್‌ನಲ್ಲಿ ವಿಡಿಯೊವನ್ನು ನೋಡಿದ್ದೇನೆ.ತಾನು 112 ಗೆ ಕರೆ ಮಾಡಿದ್ದು ಅದರ ಬಗ್ಗೆ ಅವರಿಗೆ ತಿಳಿಸಲು, ಬೆದರಿಕೆ ಹಾಕಲು ಅಲ್ಲ ಎಂದು ಆತ ಹೇಳಿದ್ದಾನೆ.
ವಿಚಾರಣೆಯ ನಂತರ ಬಾಲಕ ಮತ್ತು ಆತನ ತಂದೆಯನ್ನು ಮನೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಫೆಬ್ರವರಿಯಲ್ಲಿ, ಅಯೋಧ್ಯೆಯ ನಿವಾಸಿಯೊಬ್ಬರಿಗೆ ಅಪರಿಚಿತ ವ್ಯಕ್ತಿಯಿಂದ ಫೋನ್ ಕರೆ ಬಂದಿತ್ತು. ಕರೆ ಮಾಡಿದ ವ್ಯಕ್ತಿ ರಾಮ ಜನ್ಮಭೂಮಿ ಸಂಕೀರ್ಣವನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ. ಜಿಲ್ಲೆಯ ವಿವಿಧೆಡೆ ನಿಯೋಜಿಸಲಾಗಿರುವ ಎಲ್ಲಾ ಸಿಬ್ಬಂದಿಗೆ ಎಚ್ಚರಿಕೆ ನೀಡಿದ ಅವರು ಪೊಲೀಸರಿಗೆ ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಕೆನಡಾ ಪ್ರಧಾನಿ ಆರೋಪಕ್ಕೆ ಪಂಜಾಬ್ ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಕಿಡಿ
ಈ ವರ್ಷ ಡಿಸೆಂಬರ್ 30 ರೊಳಗೆ ಮೊದಲ ಹಂತದ ದೇವಾಲಯ ನಿರ್ಮಾಣ ಪೂರ್ಣಗೊಳ್ಳಲಿದೆ ಎಂದು ಹೇಳಲಾಗಿದ್ದು, ಮೊದಲ ಮತ್ತು ಎರಡನೇ ಮಹಡಿಗೆ 2024 ರ ಅಂತ್ಯದ ವೇಳೆಗೆ ಅಂತಿಮ ಸ್ಪರ್ಶ ದೊರೆಯಲಿದೆ. ಡಿಸೆಂಬರ್‌ನಲ್ಲಿ ಮೊದಲ ಹಂತದ ನಿರ್ಮಾಣ ಪೂರ್ಣಗೊಂಡ ನಂತರ ಶ್ರೀರಾಮನ ದರ್ಶನಕ್ಕಾಗಿ ದೇವಾಲಯವನ್ನು ಭಕ್ತರಿಗೆ ತೆರೆಯಲಾಗುವುದು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:49 pm, Wed, 20 September 23