Sign In

By signing in or creating an account, you agree with Associated Broadcasting Company's Terms & Conditions and Privacy Policy.

I.N.D.I.A ಮೈತ್ರಿ ಗಟ್ಟಿಗೊಳಿಸಿಕೊಳ್ಳಲು ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ತಮಿಳುನಾಡಿಗೆ ನೀರು -ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ

I.N.D.I.A ಮೈತ್ರಿ ಗಟ್ಟಿಗೊಳಿಸಿಕೊಳ್ಳಲು ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ತಮಿಳುನಾಡಿಗೆ ನೀರು -ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ

TV9 Web
| Updated By: ಸಾಧು ಶ್ರೀನಾಥ್​

Updated on: Sep 20, 2023 | 1:55 PM

ರಾಜ್ಯ ಕಾಂಗ್ರೆಸ್ ಸರ್ಕಾರ ಮೈತ್ರಿಕೂಟ ಗಟ್ಟಿಗೊಳಿಸಲು ತಮಿಳುನಾಡಿಗೆ ನೀರು ಹರಿಸಿ, ಈಗ ಕೇಂದ್ರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದೆ. ಇದು ಸರಿಯಲ್ಲ, ಹೀಗಾಗಬಾರದು ಎಂದು ನೇರವಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಉಪಸ್ಥಿತರಿದ್ದ ಸಭೆಯಲ್ಲೇ ಹೇಳಿದ್ದೇನೆ ಎಂದು ರಾಜ್ಯ ಸರ್ಕಾರವನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತರಾಟೆಗೆ ತೆಗೆದುಕೊಂಡರು.

ನವದೆಹಲಿ, ಸೆ. 20 : I.N.D.I. A. ಮೈತ್ರಿ ಕೂಟ ಗಟ್ಟಿಗೊಳಿಸಿಕೊಳ್ಳಲು ರಾಜ್ಯ ಕಾಂಗ್ರೆಸ್ ಸರ್ಕಾರ ತಮಿಳುನಾಡಿಗೆ ನೀರು ಹರಿಸಿದ್ದು, ನೀರು ಬಿಡುವಾಗ ನಿಮಗೆ ರಾಜ್ಯದ ಸಂಸದರ ನೆನಪಾಗಲಿಲ್ಲವೇ..? ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ನವದೆಹಲಿಯಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಕರ್ನಾಟಕದ ಹಿತ ಕಾಪಾಡಲು ನಾವು ಬದ್ಧರಾಗಿದ್ದೇವೆ. ಆದರೆ ರಾಜ್ಯ ಸರ್ಕಾರ ಮೊದಲು ನೀರು ಹರಿಸಿ ಈಗ ಬಂದು ಸಭೆ ಮಾಡುತ್ತಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಮೈತ್ರಿಕೂಟ ಗಟ್ಟಿಗೊಳಿಸಲು ತಮಿಳುನಾಡಿಗೆ ನೀರು ಹರಿಸಿ, ಈಗ ಕೇಂದ್ರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದೆ. ಇದು ಸರಿಯಲ್ಲ, ಹೀಗಾಗಬಾರದು ಎಂದು ನೇರವಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಉಪಸ್ಥಿತರಿದ್ದ ಸಭೆಯಲ್ಲೇ ಹೇಳಿದ್ದೇನೆ. ನೀವು ಮೊದಲು ನೀರು ಹರಿಸುವಾಗ ಯಾರನ್ನು ಕೇಳಿದ್ರಿ..? ಆಗ ನಿಮಗೆ ಸಂಸದರ ನೆನಪು ಆಗಲಿಲ್ವಾ‌? ಈ ವಿಷಯದಲ್ಲಿ ರಾಜಕೀಯ ಮಾಡಬೇಡಿ ಎಂದು ನೇರವಾಗಿ ಹೇಳಿದ್ದೇನೆ ಎಂದು ಪ್ರಲ್ಹಾದ ಜೋಶಿಯವರು ಹೇಳಿದರು.

ಕಾನೂನಾತ್ಮಕ ವಿಚಾರಗಳ ಬಗ್ಗೆಯೂ ಮಾತನಾಡಿದ ಅವರು, ನಾಳೆ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ಇದೆ. ನಮ್ಮಲ್ಲಿ ನೀರು ಇಲ್ಲ ಎಂದು ಅಫಿಡವಿಟ್ ಹಾಕ್ತಾರೆ. ಮತ್ತೆ ಅತ್ತ ಯಾವುದೋ ಒತ್ತಡದಲ್ಲಿ ತಮಿಳುನಾಡಿಗೆ ನೀರು ಹರಿಸ್ತಾರೆ. ತಮಿಳುನಾಡಿಗೆ ನೀರು ಹರಿಸುವ ಮೊದಲು ಮೀಟಿಂಗ್ ಮಾಡಬೇಕಿತ್ತು, ಚರ್ಚೆ ಮಾಡಬೇಕಿತ್ತು. ಕರ್ನಾಟಕದ ಹಿತ ಕಾಪಾಡಲು ನಾವು ಬದ್ಧರಾಗಿದ್ದೇವೆ. ನಿನ್ನೆ ಡಿಕೆಶಿ ನನ್ನನ್ನು ಭೇಟಿಯಾಗಿದ್ದಾರೆ.

ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಲು ಅವರಿಗೆ ಅವಕಾಶ ಸಿಕ್ಕಿದೆ. ಸಂಸದರು ಏನು ಮಾಡಿಲ್ಲ ಅಂತ ವೃಥಾ ಆರೋಪ ಮಾಡುವುದು ತಪ್ಪು. ಸುಮ್ಮನೇ ರಾಜಕೀಯ ಮಾಡಬಾರದು, ಜನ ತಿರುಗಿಬಿದ್ದ ನಂತರ ಈಗ ಬಂದು ಸಭೆ ಮಾಡ್ತಿದ್ದಾರೆ. ಇದರಲ್ಲಿ ಕೇವಲ ರಾಜಕೀಯಕ್ಕೋಸ್ಕರ ಪ್ರಧಾನಮಂತ್ರಿ ಜೊತೆ ಮಾತಾಡ್ತಿವಿ ಅಂತ ಹೇಳೋಕೆ ಆಗಲ್ಲ. ತಮಿಳುನಾಡು ಸಿಎಂ ಅವರನ್ನು ತಬ್ಬಿಕೊಂಡು ಸಭೆ ಮಾಡಿದವರು ಯಾರು..? ಆಗ ಕೇಳದವರು ಈಗ ಕೇಂದ್ರವನ್ನು ಕೇಳ್ತಿದ್ದಾರೆ‌ ಎಂದು ಪ್ರಲ್ಹಾದ ಜೋಶಿಯವರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.