ಭಾರತದಲ್ಲಿ ಕೊರೊನಾ ಸೋಂಕಿನ (Coronavirus) ಅಬ್ಬರ ತಗ್ಗುತ್ತಿದೆ. ಕಳೆದ 24ಗಂಟೆಯಲ್ಲಿ 13,596 ಹೊಸ ಪ್ರಕರಣಗಳು ಪತ್ತೆಯಾಗಿದೆ. ಇದು ಕಳೆದ ಏಳೂವರೆ ತಿಂಗಳಲ್ಲಿ (230 ದಿನಗಳು), ಒಂದು ದಿನದಲ್ಲಿ ಪತ್ತೆಯಾದ ಅತಿ ಕಡಿಮೆ ಸಂಖ್ಯೆಯಾಗಿದೆ. ಅಂದರೆ ಏಳೂವರೆ ತಿಂಗಳಿಂದೀಚೆಗೆ, ಒಂದು ದಿನದಲ್ಲಿ ಇಷ್ಟು ಕಡಿಮೆ ಪ್ರಮಾಣದ ಕೊರೊನಾ ಸೋಂಕಿನ ಪ್ರಕರಣಗಳು ಪತ್ತೆಯಾಗಿರಲಿಲ್ಲ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ದೇಶದಲ್ಲಿ ನಿನ್ನೆ 14,146 ಹೊಸ ಕೊರೊನಾ ಕೇಸ್ಗಳು ದಾಖಲಾಗಿದ್ದವು. ಅದಕ್ಕಿಂತ ಇಂದು ಶೇ.3.9ರಷ್ಟು ಕಡಿಮೆಯಾಗಿದೆ. ದೇಶದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 3,40,81,315ಕ್ಕೆ ಏರಿಕೆಯಾಗಿದ್ದರೂ, ಸಕ್ರಿಯ ಪ್ರಕರಣಗಳ ಸಂಖ್ಯೆ 1,89,694. ಹಾಗೇ, 24ಗಂಟೆಯಲ್ಲಿ 166 ಕೊರೊನಾ ರೋಗಿಗಳು ಮೃತಪಟ್ಟಿದ್ದು, ಸಾವಿನ ಸಂಖ್ಯೆ 4,52,290ಕ್ಕೆ ಏರಿಕೆಯಾಗಿದೆ.
ಶೇ.98.12ರಷ್ಟು ಚೇತರಿಕೆ ಪ್ರಮಾಣ
ಇನ್ನು ಕೊರೊನಾದಿಂದ ಚೇತರಿಸಿಕೊಳ್ಳುವ ಪ್ರಮಾಣ ಶೇ.98.12ಕ್ಕೆ ಏರಿಕೆಯಾಗಿದೆ. ಕಳೆದ 24ಗಂಟೆಯಲ್ಲಿ 19,582 ಮಂದಿ ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಅಲ್ಲಿಗೆ ಇದುವರೆಗೆ ಕೊರೊನಾದಿಂದ ಗುಣಮುಖರಾದವರ ಒಟ್ಟು ಸಂಖ್ಯೆ 3,34,39,331ಕ್ಕೆ ಏರಿದೆ. ಕೊರೊನಾ ತಪಾಸಣೆಯ ವೇಗವನ್ನೂ ಹೆಚ್ಚಿಸಲಾಗಿದ್ದು, ನಿನ್ನೆ ಒಂದೇ ದಿನ 9,89,493 ಮಾದರಿಗಳನ್ನು ಕೊರೊನಾ ಟೆಸ್ಟ್ಗೆ ಒಳಪಡಿಸಲಾಗಿದೆ. ನಿನ್ನೆಯವರೆಗೆ ಒಟ್ಟು 59,19,24,874 ಮಾದರಿಗಳಿಗೆ ತಪಾಸಣೆ ಮಾಡಿ ಮುಗಿದಿದೆ.
5ರಾಜ್ಯಗಳದ್ದೇ ಪಾಲು ಹೆಚ್ಚು
ದೇಶದಲ್ಲಿ ಪತ್ತೆಯಾಗುವ ಒಟ್ಟು ಕೊರೊನಾ ಸೋಂಕಿನ ಸಂಖ್ಯೆಯಲ್ಲಿ ಒಟ್ಟು 5ರಾಜ್ಯಗಳ ಪಾಲು ಹೆಚ್ಚಿದೆ. ಕೇರಳ, ಮಹಾರಾಷ್ಟ್ರ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳಲ್ಲೇ ಹೆಚ್ಚು ಕೊರೊನಾ ಸೋಂಕಿನ ಕೇಸ್ಗಳು ದಾಖಲಾಗಿದ್ದು, ಇಂದು ಪತ್ತೆಯಾದ ಒಟ್ಟು ಸಂಖ್ಯೆಯಲ್ಲಿ ಶೇ. 84.99ರಷ್ಟು ಪಾಲು ಈ 5ರಾಜ್ಯಗಳದ್ದು. ಕಳೆದ 24ಗಂಟೆಯಲ್ಲಿ ಕೇರಳದಲ್ಲಿ 7555, ಮಹಾರಾಷ್ಟ್ರದಲ್ಲಿ 1,715, ತಮಿಳುನಾಡಿನಲ್ಲಿ 1,218, ಪಶ್ಚಿಮಬಂಗಾಳದಲ್ಲಿ 624 ಮತ್ತು ಓಡಿಶಾದಲ್ಲಿ 443 ಪ್ರಕರಣಗಳು ದಾಖಲಾಗಿವೆ. ಅದರಲ್ಲೂ ಕೇರಳ ರಾಜ್ಯದಲ್ಲೇ ಜಾಸ್ತಿ ಸೋಂಕಿತರು ಇದ್ದಾರೆ. ಇನ್ನು ಕೊರೊನಾ ಲಸಿಕಾ ಅಭಿಯಾನ ಕೂಡ ಭರದಿಂದ ಸಾಗುತ್ತಿದ್ದು, ಇಲ್ಲಿಯವರೆಗೆ 97,79,47,783 ಜನರಿಗೆ ಲಸಿಕೆ ನೀಡಲಾಗಿದೆ.
ಇದನ್ನೂ ಓದಿ: ನಕಲಿ ಬಿಎಂಟಿಸಿ ಅಧಿಕಾರಿ ನೂರ್ ಅಹ್ಮದ್ ಬಂಧನ; ಆರೋಪಿ ಸ್ಟೈಲ್ಗೆ ದಂಗಾದ ಅಸಲಿ ಅಧಿಕಾರಿಗಳು