Uttarakhand Rain: ಉತ್ತರಕಾಶಿಯಲ್ಲಿ ಭೂಕುಸಿತದಿಂದ ಗಂಗೋತ್ರಿ, ಯಮುನೋತ್ರಿ ಹೆದ್ದಾರಿ ಬಂದ್
Uttarakhand Landslide: ಇಂದು ಉತ್ತರಕಾಶಿಯಲ್ಲಿ ಭೂಕುಸಿತ ಉಂಟಾಗಿದ್ದು, ಯಮುನೋತ್ರಿ, ಗಂಗೋತ್ರಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಂದ್ ಆಗಿದೆ. ಕೇದಾರನಾಥ, ಬದರಿನಾಥದಲ್ಲಿ ಭಾರೀ ಹಿಮಪಾತವಾಗುತ್ತಿದೆ.
ಉತ್ತರಕಾಶಿ: ಉತ್ತರಾಖಂಡದಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವೆಡೆ ಭೂಕುಸಿತಗಳಾಗಿವೆ. ಹಿಮಪಾತವೂ ಮುಂದುವರೆದಿದ್ದು, ಇಂದು ಮತ್ತು ನಾಳೆ ಟ್ರೆಕಿಂಗ್, ಪ್ರವಾಸವನ್ನು ನಿಷೇಧಿಸಲಾಗಿದೆ. ಉತ್ತರಾಖಂಡದ ಬಹುತೇಕ ಶಾಲಾ-ಕಾಲೇಜುಗಳಿಗೆ ಇಂದು ರಜೆ ನೀಡಲಾಗಿದೆ. ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ ಫೋನ್ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಉತ್ತರಾಖಂಡದ ಪ್ರವಾಹದ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದಿದ್ದಾರೆ. ಅಲ್ಲದೆ, ಕೇಂದ್ರ ಸರ್ಕಾರದಿಂದ ಎಲ್ಲ ರೀತಿಯ ಸಹಾಯ ನೀಡುವುದಾಗಿ ಭರವಸೆ ನೀಡಿದ್ದಾರೆ.
ಇಂದು ಉತ್ತರಕಾಶಿಯಲ್ಲಿ ಭೂಕುಸಿತ ಉಂಟಾಗಿದ್ದು, ಯಮುನೋತ್ರಿ, ಗಂಗೋತ್ರಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಂದ್ ಆಗಿದೆ. ಕೇದಾರನಾಥ, ಬದರಿನಾಥದಲ್ಲಿ ಭಾರೀ ಹಿಮಪಾತವಾಗುತ್ತಿದೆ. ಎನ್ಡಿಆರ್ಎಫ್ ತಂಡಗಳು ಭೂಕುಸಿತ ಸ್ಥಳಕ್ಕೆ ಧಾವಿಸಿವೆ.
ಉತ್ತರಾಖಂಡದ 13 ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯಾಗುವುದರಿಂದ ರೆಡ್ ಅಲರ್ಟ್ ಘೋಷಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ 13 ಜಿಲ್ಲೆಗಳಲ್ಲಿಯ ಶಾಲೆ, ಕಾಲೇಜು ಮತ್ತು ಅಂಗನವಾಡಿ ಕೇಂದ್ರಗಳನ್ನು ತೆರೆಯದಂತೆ ಆದೇಶ ನೀಡಿತ್ತು. ನಾಳೆಯೂ ಭಾರೀ ಮಳೆ ಮುಂದುವರೆಯುವುದರಿಂದ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ. ಮಂಗಳವಾರ ಚಮೋಲಿ ಜಿಲ್ಲೆಯ ನಂದಾದೇವಿ ರಾಷ್ಟ್ರೀಯ ಉದ್ಯಾನ ಮತ್ತು ಗೋಪೇಶ್ವರದ ಸಂಪೂರ್ಣ ಅರಣ್ಯ ಪ್ರದೇಶದಲ್ಲಿ ಟ್ರೆಕಿಂಗ್ ಚಟುವಟಿಕೆಯನ್ನು ಜಿಲ್ಲಾಡಳಿತ ನಿಷೇಧಿಸಿದೆ.
Uttarakhand | Gangotri in Uttarkashi district receives rainfall
IMD has issued a Red alert for ‘heavy rainfall’ in the State today pic.twitter.com/cCzB09XGqh
— ANI (@ANI) October 18, 2021
ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ನಿನ್ನೆ ಎಲ್ಲಾ ಪೊಲೀಸ್ ಅಧಿಕಾರಿಗಳು, ಎಸ್‌ಡಿಆರ್‌ಎಫ್ ಮತ್ತು ಇತರ ಸಂಬಂಧಿತ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಎಲ್ಲಾ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ. ಈಗಾಗಲೇ ರಾಜ್ಯಾದ್ಯಂತ ಸುಮಾರು 29 ಎಸ್‌ಡಿಆರ್‌ಎಫ್ ತಂಡಗಳು ಸಿದ್ಧವಾಗಿವೆ. ಉತ್ತರಾಖಂಡದಲ್ಲಿ ಇನ್ನು 2 ದಿನ ಮಿಂಚು ಸಹಿತ ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ. ಸುಮಾರು 80 ಕಿಮೀ ವೇಗದಲ್ಲಿ ಬಲವಾದ ಗಾಳಿಯೂ ಬೀಸಬಹುದು ಎಂದು ಐಎಂಡಿ ಮಾಹಿತಿ ನೀಡಿದೆ. ಉತ್ತರಾಖಂಡ್‌ನಲ್ಲಿ ಮುಂದಿನ ಎರಡು ದಿನ ಅಂದರೆ ಅಕ್ಟೋಬರ್ 20 ರವರೆಗೆ ವಿಪರೀತ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.
ಇದನ್ನೂ ಓದಿ: Kerala Rain: ಕೇರಳದಲ್ಲಿ ಭಾರಿ ಮಳೆ, ಪ್ರವಾಹ; ಮೃತರ ಸಂಖ್ಯೆ 24ಕ್ಕೆ ಏರಿಕೆ, 11 ಜಿಲ್ಲೆಗಳಲ್ಲಿ ಹಳದಿ ಅಲರ್ಟ್
Video: ಕೇರಳ ಮಳೆಯ ಭೀಕರತೆ; ನೋಡನೋಡುತ್ತಿದ್ದಂತೆ ನದಿಗೆ ಕುಸಿದುಬಿತ್ತು ಇಡೀ ಮನೆ
Published On - 1:35 pm, Mon, 18 October 21