Kerala Rain: ಕೇರಳದಲ್ಲಿ ಭಾರಿ ಮಳೆ, ಪ್ರವಾಹ; ಮೃತರ ಸಂಖ್ಯೆ 24ಕ್ಕೆ ಏರಿಕೆ, 11 ಜಿಲ್ಲೆಗಳಲ್ಲಿ ಹಳದಿ ಅಲರ್ಟ್
ಕೇರಳದಲ್ಲಿ ಅಕ್ಟೋಬರ್ 21ರವರೆಗೂ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಈ ಮಧ್ಯೆ ಈಗಿನವರೆಗೆ ಆದ ನಷ್ಟ, ಜೀವ ಹಾನಿಯ ವಿವರವನ್ನು ಕೇಂದ್ರ ಸರ್ಕಾರ ಪಡೆದಿದೆ.
ಕೇರಳ ಮಳೆಗೆ ತತ್ತರಿಸುತ್ತದೆ. ಭೂಕುಸಿತ-ಪ್ರವಾಹ (Kerala Rain) ಪರಿಸ್ಥಿತಿಯಿಂದಾಗಿ ಶನಿವಾರದಿಂದ ಇದುವರೆಗೆ ಸುಮಾರು 24 ಮಂದಿ ಜೀವ ಕಳೆದುಕೊಂಡಿದ್ದಾರೆ. ಭಾನುವಾರ ಮಧ್ಯಾಹ್ನದ ಹೊತ್ತಿಗೆ ಮಳೆ ಸ್ವಲ್ಪ ಕಡಿಮೆಯಾಗಿದ್ದರೂ ಭೂಕುಸಿತದ ಅಪಾಯ ಇರುವುದರಿಂದ ಸ್ಥಳೀಯ ಆಡಳಿತ ಜನರಿಗೆ ಎಚ್ಚರಿಕೆ ನೀಡಿದೆ. ಇಂದು 11 ಜಿಲ್ಲೆಗಳಲ್ಲಿ ಭಾರತೀಯ ಹವಾಮಾನ ಇಲಾಖೆ ಹಳದಿ ಅಲರ್ಟ್ (Yellow Alert) ಘೋಷಿಸಿದೆ. ಹಾಗೇ, ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಲು, ಮೇಘಸ್ಫೋಟವಾಗಿದ್ದೂ ಒಂದು ಕಾರಣ ಎಂದು ಹೇಳಿದೆ.
ಕೇರಳ ಮಳೆಯಿಂದಾದ ಅನಾಹುತಗಳ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ 1. ಒಟ್ಟು ಮೃತರಾದವರಲ್ಲಿ ಅತಿಹೆಚ್ಚು ಸಾವಾಗಿದ್ದು ಕೊಟ್ಟಾಯಂ ಜಿಲ್ಲೆಯಲ್ಲಿ. ಇಲ್ಲಿ 13 ಮೃತದೇಹಗಳು ಸಿಕ್ಕಿವೆ. ಅದು ಬಿಟ್ಟರೆ ಇಡುಕ್ಕಿಯಲ್ಲಿ 9 ಜನರ ಶವ ಪತ್ತೆಯಾಗಿದ್ದು, ಇದು ಮಳೆ, ಪ್ರವಾಹದಿಂದ ಆದ ಸಾವುಗಳೇ ಆಗಿವೆ. ಇಡುಕ್ಕಿಯಲ್ಲಿ ಇನ್ನಿಬ್ಬರು ನಾಪತ್ತೆಯಾಗಿದ್ದು, ಅವರನ್ನು ಹುಡುಕುವ ಕಾರ್ಯಾಚರಣೆ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಕಚೇರಿ ಹೇಳಿಕೆ ಬಿಡುಗಡೆ ಮಾಡಿದೆ. 2. ಅರೇಬಿಯನ್ ಸಮುದ್ರದಲ್ಲಿ ಲಕ್ಷದ್ವೀಪದ ಸಮೀಪ ಕಡಿಮೆ ಒತ್ತಡ ಉಂಟಾಗುವ ಕಾರಣ ಮಳೆ ಇಂದು ಕೂಡ ಮುಂದುವರಿಯಲಿದೆ. ಇಂದು ಸಂಜೆಯವರೆಗೂ ಕೇರಳದಲ್ಲಿ ಭರ್ಜರಿ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 3. ಭಾರಿ ಮಳೆಯಿಂದಾಗಿ ಇಡುಕ್ಕಿ ಮತ್ತು ಕೊಟ್ಟಾಯಂ ಜಿಲ್ಲೆಯಲ್ಲಿ ಭೂಕುಸಿತ ಉಂಟಾಗಿದೆ. ಇಡುಕ್ಕಿಯ ಕೊಕ್ಕಾಯರ್ ಮತ್ತು ಕೊಟ್ಟಾಯಂನ ಕೂಟಿಕ್ಕಲ್ ಎಂಬಲ್ಲಿ ಪ್ರಬಲವಾಗಿ ಭೂಕುಸಿತ ಸಂಭವಿಸಿದೆ. ಇನ್ನು ಇಡುಕ್ಕಿಯ ಪೀರುಮೇಡು ಎಂಬಲ್ಲಿ 24 ಸಿಎಂ ನಷ್ಟು ಮಳೆಬಿದ್ದಿದ್ದು, ಇದು ಕೇರಳದಲ್ಲಿ ಅತಿಹೆಚ್ಚು ಮಳೆ ಬಿದ್ದ ಪ್ರದೇಶವಾಗಿದೆ. 4. ಪಥನಂತಿಟ್ಟ, ಇಡುಕ್ಕಿ, ಎರ್ನಾಕುಲಂ, ತ್ರಿಶೂರ್, ಮಲಪ್ಪುರಂ ಮತ್ತು ಆಲಪ್ಪುಳಗಳಲ್ಲಿ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆ (NDRF)ಯ ಒಂದೊಂದು ತಂಡವನ್ನು ನಿಯೋಜಿಸಲಾಗಿದೆ. ಹಾಗೇ, ಇಡುಕ್ಕಿ, ಕೊಟ್ಟಾಯಂ, ಕೊಲ್ಲಂ, ಕಣ್ಣೂರ್ ಮತ್ತು ಪಲಕ್ಕಡ್ಗಳಲ್ಲಿ ಹೆಚ್ಚುವರಿ ರಕ್ಷಣಾ ಪಡೆಗಳನ್ನು ನಿಯೋಜಿಸಲಾಗಿದೆ. ತಿರುವನಂತಪುರಂ ಮತ್ತು ಕೊಟ್ಟಾಯಂಗಳಲ್ಲಿ ಭಾರತೀಯ ಸೇನಾ ಪಡೆಯ ತಂಡಗಳೂ ಕೂಡ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. 5. ಕೇರಳ, ಕರ್ನಾಟಕ ಮತ್ತು ಲಕ್ಷದ್ವೀಪದ ಕರಾವಳಿ ತೀರಗಳಲ್ಲಿ ಇಂದು ಸಂಜೆಯವರೆಗೂ ಮೀನುಗಾರಿಕೆಗೆ ಸಂಪೂರ್ಣ ನಿಷೇಧ ಹೇರಲಾಗಿದೆ. ಇಂದು ರಾತ್ರಿ 11.30ರವರೆಗೂ ಸಮುದ್ರದಲ್ಲಿ ಅಲೆಗಳ ಪ್ರಮಾಣ ರಭಸವಾಗಿ ಇರಲಿದ್ದು, ಮೀನುಗಾರರಿಗೆ ಅಪಾಯ ಕಟ್ಟಿಟ್ಟಬುತ್ತಿ ಎಂದು ಹವಾಮಾನ ಇಲಾಖೆ ತಿಳಿಸಿದೆ. 6. ಕೇರಳದಲ್ಲಿ ಅಕ್ಟೋಬರ್ 21ರವರೆಗೂ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಈ ಮಧ್ಯೆ ಈಗಿನವರೆಗೆ ಆದ ಹಾನಿ, ನಷ್ಟ, ಜೀವ ಹಾನಿಯ ಸಂಪೂರ್ಣ ವಿವರವನ್ನು ಕೇಂದ್ರ ಸರ್ಕಾರ ಪಡೆದಿದೆ. ಪ್ರಧಾನಿ ನರೇಂದ್ರ ಮೋದಿಯವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ಗೆ ಕರೆ ಮಾಡಿ ಪರಿಸ್ಥಿತಿಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ಹಾಗೇ, ಕೇರಳದಲ್ಲಿ ಈಗಿನ ಸಂದರ್ಭ ನಿಭಾಯಿಸಲು ಕೇಂದ್ರ ಸರ್ಕಾರ ಎಲ್ಲ ರೀತಿಯ ಸಹಾಯ ನೀಡುವುದಾಗಿ ಅಮಿತ್ ಶಾ ತಿಳಿಸಿದ್ದಾರೆ.
ಇದನ್ನೂ ಓದಿ: Sri Reddy: ‘ಆತ ಸಲಿಂಗಕಾಮಿ, ಅಂಥ ವ್ಯಕ್ತಿ ಜತೆ ಸಮಂತಾ ಸಂಬಂಧ ಬೆಳೆಸಲ್ಲ’; ನಟಿ ಶ್ರೀರೆಡ್ಡಿ ಶಾಕಿಂಗ್ ಹೇಳಿಕೆ
ವಿರಾಜಪೇಟೆ: ಗ್ರಾಮ ಪಂಚಾಯಿತಿ ಸದಸ್ಯೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣು, ನಾಲ್ಕು ದಿನಗಳ ಬಳಿಕ ಸಾವು
Published On - 9:55 am, Mon, 18 October 21