ಮಧ್ಯಪ್ರದೇಶದ ನದಿಯಲ್ಲಿ ಹಠಾತ್ ನೀರು ಏರಿಕೆ; ಕೊಚ್ಚಿ ಹೋದ 14 ಕಾರು, ಅಪಾಯದಿಂದ ಜನ ಪಾರು
ಎಸ್‌ಯುವಿಗಳು ಸೇರಿದಂತೆ ಕನಿಷ್ಠ 14 ಕಾರುಗಳು ನೀರಿನಲ್ಲಿ ಕೊಚ್ಚಿಹೋಗಿವೆ ಎಂದು ಅಧಿಕಾರಿ ಹೇಳಿದರು. ವಿಷಯ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಸ್ಥಳೀಯ ಗ್ರಾಮಸ್ಥರ ಟ್ರ್ಯಾಕ್ಟರ್‌ಗಳ ಸಹಾಯದಿಂದ 10 ಕಾರುಗಳು ಮತ್ತು ಎಸ್‌ಯುವಿಗಳನ್ನು ಹೊರತೆಗೆದಿದ್ದಾರೆ.
ಖಾರ್ಗೋನ್: ಮಳೆಯ ನಂತರ ನದಿಯಲ್ಲಿ ಹಠಾತ್ ನೀರಿನ ಏರಿಕೆಯಿಂದಾಗಿ ಮಧ್ಯಪ್ರದೇಶದ (Madhya Pradesh) ಖಾರ್ಗೋನ್ ಜಿಲ್ಲೆಯಲ್ಲಿ ಸುಮಾರು 50 ಜನರು ತಮ್ಮ ಪ್ರಾಣ ಉಳಿಸಿಕೊಳ್ಳಲು ಅರಣ್ಯ ಪ್ರದೇಶದ ಎತ್ತರದ ಸ್ಥಳಗಳಿಗೆ ಓಡಿದ್ದು ಅವರು ಬಂದಿದ್ದ 14 ಕಾರುಗಳು ನೀರಲ್ಲಿ ಕೊಚ್ಚಿ ಹೋಗಿವೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಇಂದೋರ್ ಜಿಲ್ಲೆಯ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಜನರ ಗುಂಪೊಂದು ಭಾನುವಾರ ಸಂಜೆ ಬಲವಾಡ ಪೊಲೀಸ್ ಠಾಣಾ ವ್ಯಾಪ್ತಿಯ ಕಟ್ಕೂಟ್ ಅರಣ್ಯದ ಸುಕ್ದಿ ನದಿಯ ಬಳಿ ಪಿಕ್ನಿಕ್ ಗಾಗಿ ಬಂದಿದ್ದರು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಸಿಂಗ್ ಪವಾರ್ ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಮಳೆ ಬಂದಾಗ ನದಿಯ ನೀರಿನ ಮಟ್ಟ ಏಕಾಏಕಿ ಏರಿಕೆಯಾಗಿದೆ. ಪಿಕ್ನಿಕ್ ಮಾಡುವವರು ತಮ್ಮ ಕಾರುಗಳು ಮತ್ತು ಎಸ್‌ಯುವಿ ಬಿಟ್ಟು ತಮ್ಮ ಪ್ರಾಣ ಉಳಿಸಿಕೊಳ್ಳಲು ಕಾಡಿನ ಎತ್ತರದ ಸ್ಥಳಗಳಿಗೆ ಧಾವಿಸಿದರು ಎಂದು ಅಧಿಕಾರಿ ಹೇಳಿದರು.
ಎಸ್‌ಯುವಿಗಳು ಸೇರಿದಂತೆ ಕನಿಷ್ಠ 14 ಕಾರುಗಳು ನೀರಿನಲ್ಲಿ ಕೊಚ್ಚಿಹೋಗಿವೆ ಎಂದು ಅಧಿಕಾರಿ ಹೇಳಿದರು. ವಿಷಯ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಸ್ಥಳೀಯ ಗ್ರಾಮಸ್ಥರ ಟ್ರ್ಯಾಕ್ಟರ್‌ಗಳ ಸಹಾಯದಿಂದ 10 ಕಾರುಗಳು ಮತ್ತು ಎಸ್‌ಯುವಿಗಳನ್ನು ಹೊರತೆಗೆದಿದ್ದಾರೆ.
ಆದಾಗ್ಯೂ, ವಾಹನಗಳಿಗೆ ನೀರು ನುಗ್ಗಿದ್ದ ಕಾರಣ ತಾಂತ್ರಿಕ ದೋಷಗಳಿಂದ ಕಾರು ಸ್ಟಾರ್ಟ್ ಆಗಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ. ಪಿಕ್ನಿಕ್‌ಗೆ ಬಂದವರನ್ನು ಬೇರೆ ವಾಹನಗಳಲ್ಲಿ ಅವರ ಮನೆಗಳಿಗೆ ಕಳುಹಿಸಲಾಯಿತು.
ಇತರ ಮೂರು ಕಾರುಗಳು ದೂರ ಕೊಚ್ಚಿ ಹೋಗಿದ್ದು ಒಂದು ಸೇತುವೆಯ ಕಂಬದ ಬಳಿ ಸಿಲುಕಿಕೊಂಡಿದೆ ಎಂದು ಅವರು ಹೇಳಿದರು. ಅಂತಹ ಸ್ಥಳಗಳಲ್ಲಿ ಹಠಾತ್ ನೀರು ಉಲ್ಬಣಗೊಳ್ಳುವ ಅಪಾಯದ ಬಗ್ಗೆ ತಿಳಿಸಲು ಈ ಪ್ರದೇಶದಲ್ಲಿ ಬೋರ್ಡ್ ಹಾಕಲು ಸ್ಥಳೀಯ ಪೊಲೀಸರನ್ನು ಕೇಳಲಾಗಿದೆ ಎಂದು ಅಧಿಕಾರಿ ಹೇಳಿದರು.
ಹೆಚ್ಚಿನ ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ