ಯುದ್ಧ ನೆಲ ಉಕ್ರೇನ್ನಿಂದ ಭಾರತೀಯರನ್ನು ಸ್ಥಳಾಂತರ ಮಾಡುವ ಕಾರ್ಯಾಚರಣೆ ಆಪರೇಶನ್ ಗಂಗಾ ನಾಲ್ಕೈದು ದಿನಗಳ ಹಿಂದೆ ಮುಕ್ತಾಯಗೊಂಡಿದೆ. ಕೊನೇ ದಿನ ಸುಮಿ ಯುದ್ಧವಲಯದಲ್ಲಿದ್ದ 674 ಭಾರತೀಯರನ್ನು ವಾಪಸ್ ಕರೆತರಲಾಗಿದೆ. ಹೀಗಿದ್ದಾಗ್ಯೂ ಇನ್ನೂ 15-20 ಭಾರತೀಯರು ಉಕ್ರೇನ್ನಲ್ಲಿಯೇ ಉಳಿದು ಹೋಗಿದ್ದಾರೆ. ಅವರೂ ಭಾರತಕ್ಕೆ ಮರಳಲು ಕಾಯುತ್ತಿದ್ದಾರೆ ಎಂದು ಕೇಂದ್ರ ಸರ್ಕಾರ ಇಂದು ತಿಳಿಸಿದೆ. ಅಷ್ಟೇ ಅಲ್ಲ, ಆಪರೇಶನ್ ಗಂಗಾ ಕಾರ್ಯಾಚರಣೆ ಮುಕ್ತಾಯಗೊಂಡಿಲ್ಲ. ಈಗ ಅಲ್ಲಿ ಉಳಿದಿರುವ ಭಾರತೀಯರಿಗೆ ಎಲ್ಲ ರೀತಿಯ ನೆರವು ನೀಡುತ್ತೇವೆ. ಖೆರ್ಸನ್ ಸಿಟಿಯಲ್ಲಿ ಸಿಲುಕಿರುವ ಅವರನ್ನೂ ದೇಶಕ್ಕೆ ವಾಪಸ್ ಕರೆತರಲಾಗುವುದು ಎಂದು ಕೇಂದ್ರ ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಬಾಗ್ಚಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಉಕ್ರೇನ್ನಲ್ಲಿ ರಷ್ಯಾದ ಆಕ್ರಮಣ ತೀವ್ರಗೊಳ್ಳುತ್ತಿದ್ದಂತೆಯೇ ಭಾರತೀಯರನ್ನು ರಕ್ಷಿಸುವ ಕಾರ್ಯಾಚರಣೆಯನ್ನು ಕೇಂದ್ರ ಸರ್ಕಾರ ಶುರುವಿಟ್ಟುಕೊಂಡಿತ್ತು. ಉಕ್ರೇನ್ ಗಡಿ ರಾಷ್ಟ್ರಗಳಾದ ಹಂಗೇರಿ, ರೊಮೇನಿಯಾ, ಪೋಲ್ಯಾಂಡ್ ಸೇರಿ ಇತರ ದೇಶಗಳ ಮೂಲಕ, ಆಪರೇಶನ್ ಗಂಗಾ ಎಂಬ ಹೆಸರಿನ ಕಾರ್ಯಾಚರಣೆ ನಡೆಸಿ ಸುಮಾರು 20 ಸಾವಿರ ವಿದ್ಯಾರ್ಥಿಗಳನ್ನು ಭಾರತಕ್ಕೆ ಸ್ಥಳಾಂತರ ಮಾಡಲಾಗಿದೆ. ಭಾರತದ ಒಬ್ಬ ವಿದ್ಯಾರ್ಥಿ ನವೀನ್ (ಕರ್ನಾಟಕದ ಹಾವೇರಿ ಮೂಲದವನು) ರಷ್ಯಾ ದಾಳಿಗೆ ಮೃತಪಟ್ಟಿದ್ದ. ಅದು ಬಿಟ್ಟರೆ ಇನ್ನೊಬ್ಬ ವಿದ್ಯಾರ್ಥಿಗೆ ಗುಂಡೇಟು ತಗುಲಿತ್ತು, ಆದರೆ ಪ್ರಾಣಾಪಾಯ ಆಗಿರಲಿಲ್ಲ.
ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ಉಕ್ರೇನ್ನ ಪೂರ್ವದ ನಗರಗಳಲ್ಲೇ ಆಗಿತ್ತು. ಹಾಗೇ ಯುದ್ಧ ತೀವ್ರತೆ ಅಲ್ಲಿ ಜಾಸ್ತಿಯಿತ್ತು. ಅವರನ್ನು ರಕ್ಷಿಸಲು ಭಾರತ ರಷ್ಯಾ ಮತ್ತು ಉಕ್ರೇನ್ ಜತೆ ರಾಜತಾಂತ್ರಿಕ ಮಾತುಕತೆಗಳನ್ನು ನಡೆಸಿ, ಎಲ್ಲ ಭಾರತೀಯರನ್ನೂ ಯಶಸ್ವಿಯಾಗಿ ರಕ್ಷಣೆ ಮಾಡಿದೆ. ನಿನ್ನೆ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದ ಕೇಂದ್ರ ವಿದೇಶಾಂಗ ಇಲಾಖೆ ಸಚಿವ ಎಸ್.ಜೈಶಂಕರ್, ನಾವು ಸುಮಾರು 20 ಸಾವಿರ ವಿದ್ಯಾರ್ಥಿಗಳನ್ನು ಸ್ಥಳಾಂತರ ಮಾಡಿದ್ದೇವೆ. ಹಾಗಿದ್ದಾಗ್ಯೂ ಇನ್ನೂ ಅನೇಕರು ಅಲ್ಲಿಯೇ ನೆಲೆಸಲು ತೀರ್ಮಾನ ಮಾಡಿದ್ದಾರೆ. ನಾವು ಅವರ ನಿರ್ಧಾರವನ್ನು ಗೌರವಿಸುತ್ತೇವೆ. ಕೆಲವು ಯೂನಿವರ್ಸಿಟಿಗಳು ಆನ್ಲೈನ್ ಕ್ಲಾಸ್ ನಡೆಸಲು ನಿರಾಕರಿಸುತ್ತಿವೆ. ಹೀಗಾಗಿ ತಮ್ಮ ಶಿಕ್ಷಣದ ದೃಷ್ಟಿಯಿಂದ ಅವರು ಅಲ್ಲೇ ಉಳಿದುಕೊಂಡಿದ್ದಾರೆ ಎಂದು ಹೇಳಿದ್ದರು.
ಇದನ್ನೂ ಓದಿ: ಐಪಿಎಸ್ ಅಧಿಕಾರಿಗೆ ಬ್ಯಾಗ್ ಓಪನ್ ಮಾಡಿ ಎಂದ ಏರ್ಪೋರ್ಟ್ ಸಿಬ್ಬಂದಿ; ಅದರಲ್ಲೇನಿತ್ತು ಎಂದು ನೀವು ಊಹಿಸಲೂ ಅಸಾಧ್ಯ!
Published On - 6:29 pm, Thu, 17 March 22