Bhagavad Gita: 6ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ಭಗವದ್ಗೀತೆ ಬೋಧನೆ; ಗುಜರಾತ್​ ಸರ್ಕಾರ ಆದೇಶ

6ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ಭಗವದ್ಗೀತೆಯನ್ನು ಬೋಧಿಸುವುದರ ಜೊತೆಗೆ ಭಗವದ್ಗೀತೆಯ ಕುರಿತು ಭಾಷಣ ಸ್ಪರ್ಧೆ, ಶ್ಲೋಕ ಸ್ಪರ್ಧೆ, ಸಾಹಿತ್ಯ ಸ್ಪರ್ಧೆಯನ್ನು ಕೂಡ ಆಯೋಜಿಸಲಾಗುವುದು ಎಂದು ಗುಜರಾತ್ ಸರ್ಕಾರ ತಿಳಿಸಿದೆ.

Bhagavad Gita: 6ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ಭಗವದ್ಗೀತೆ ಬೋಧನೆ; ಗುಜರಾತ್​ ಸರ್ಕಾರ ಆದೇಶ
ಭಗವದ್ಗೀತೆ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Mar 17, 2022 | 7:18 PM

ನವದೆಹಲಿ: ಗುಜರಾತ್​ನ ಶಾಲೆಗಳಲ್ಲಿ 6ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗಿನ ವಿದ್ಯಾರ್ಥಿಗಳಿಗೆ ಭಗವದ್ಗೀತೆ ಬೋಧಿಸಲು ಆದೇಶಿಸಲಾಗಿದೆ. ಹೊಸ ಶಿಕ್ಷಣ ನೀತಿ (NEP) ಅಡಿಯಲ್ಲಿ ಗುಜರಾತ್‌ನ ಶಾಲೆಗಳ ಮಕ್ಕಳಿಗೆ ಭಗವದ್ಗೀತೆಯನ್ನು ಕಲಿಸಲಾಗುತ್ತದೆ ಎಂದು ಗುಜರಾತ್ ಸರ್ಕಾರ (Gujarat Government) ಇಂದು ಪ್ರಕಟಿಸಿದೆ. ರಾಜ್ಯದ ಎಲ್ಲಾ ಶಾಲೆಗಳಲ್ಲಿ 6 ರಿಂದ 12 ನೇ ತರಗತಿಯ ಮಕ್ಕಳಿಗೆ ಭಗವದ್ಗೀತೆಯ (Bhagavad Gita) ತತ್ವಗಳು ಮತ್ತು ಮೌಲ್ಯಗಳನ್ನು ಕಲಿಸಲಾಗುವುದು ಎಂದು ಗುಜರಾತ್ ಶಿಕ್ಷಣ ಸಚಿವ ಜಿತು ವಘಾನಿ ಹೇಳಿದ್ದಾರೆ.

2022-23ರ ಶೈಕ್ಷಣಿಕ ವರ್ಷದಿಂದ ಶಾಲಾ ಶಿಕ್ಷಣದಲ್ಲಿ ಭಾರತೀಯ ಸಂಸ್ಕೃತಿ ಮತ್ತು ಜ್ಞಾನ ವ್ಯವಸ್ಥೆಯನ್ನು ಅಳವಡಿಸಲು ಮೊದಲ ಹಂತದಲ್ಲಿ ಭಗವದ್ಗೀತೆಯಲ್ಲಿರುವ ಮೌಲ್ಯಗಳು ಮತ್ತು ತತ್ವಗಳನ್ನು ತರಗತಿಯಲ್ಲಿ ತಿಳುವಳಿಕೆ ಮತ್ತು ಆಸಕ್ತಿಗೆ ಅನುಗುಣವಾಗಿ ಪರಿಚಯಿಸಲಾಗುತ್ತದೆ ಎಂದು ಗುಜರಾತ್‌ನ ಶಿಕ್ಷಣ ಸಚಿವರು ಹೇಳಿದ್ದಾರೆ.

ಭಗವದ್ಗೀತೆಯನ್ನು ಹಿಂದೂಗಳ ಧರ್ಮಗ್ರಂಥ ಎಂದೇ ಪರಿಗಣಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಈ ನಿರ್ಧಾರದಿಂದ ಗುಜರಾತ್​ನಲ್ಲಿ ಮತ್ತೊಮ್ಮೆ ವಿವಾದ, ಗಲಾಟೆಗಳು ಸೃಷ್ಟಿಯಾಗುವ ಸಾಧ್ಯತೆಯಿದೆ. 6ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ಭಗವದ್ಗೀತೆಯನ್ನು ಬೋಧಿಸುವುದರ ಜೊತೆಗೆ ಭಗವದ್ಗೀತೆಯ ಕುರಿತು ಭಾಷಣ ಸ್ಪರ್ಧೆ, ಶ್ಲೋಕ ಸ್ಪರ್ಧೆ, ಸಾಹಿತ್ಯ ಸ್ಪರ್ಧೆಯನ್ನು ಕೂಡ ಆಯೋಜಿಸಲಾಗುವುದು ಎಂದು ಗುಜರಾತ್ ಸರ್ಕಾರ ತಿಳಿಸಿದೆ.

6ರಿಂದ 8ನೇ ತರಗತಿವರೆಗೆ ಭಗವದ್ಗೀತೆಯನ್ನು ಕಥೆ ಮತ್ತು ಪಠ್ಯ ರೂಪದಲ್ಲಿ ಪಠ್ಯ ಪುಸ್ತಕಗಳಲ್ಲಿ ಅಳವಡಿಸಬೇಕು. 9ರಿಂದ 12 ನೇ ತರಗತಿಯಲ್ಲಿ ಭಗವದ್ಗೀತೆಯನ್ನು ಕಥೆ ಮತ್ತು ಪಠ್ಯ ರೂಪದಲ್ಲಿ ಪ್ರಥಮ ಭಾಷೆಯ ಪಠ್ಯಪುಸ್ತಕದಲ್ಲಿ ಪರಿಚಯಿಸಬೇಕು. ಈ ಕುರಿತು ವಿಡಿಯೊಗಳು ಸೇರಿದಂತೆ ಇತರ ಅಧ್ಯಯನ ಸಾಮಗ್ರಿಗಳು ಲಭ್ಯವಿರುತ್ತವೆ ಎಂದು ಗುಜರಾತ್ ಸರ್ಕಾರದ ಶಿಕ್ಷಣ ಸಚಿವರು ತಿಳಿಸಿದ್ದಾರೆ.

ಪ್ರಾರ್ಥನಾ ಕಾರ್ಯಕ್ರಮದಲ್ಲಿ ಭಗವದ್ಗೀತೆಯ ಪಠಣವನ್ನು ಸೇರಿಸಬೇಕು ಎಂದು ಜಿತು ವಘಾನಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಶಾಲೆಗಳಲ್ಲಿ ಭಗವದ್ಗೀತೆ ಆಧಾರಿತ ಶ್ಲೋಕ ಗಾನ, ಶ್ಲೋಕಪೂರ್ಣಿ, ಪ್ರಬಂಧ, ನೃತ್ಯ, ಚಿತ್ರಗಳು, ರಸಪ್ರಶ್ನೆ ಮುಂತಾದ ವಿವಿಧ ಸ್ಪರ್ಧೆಗಳು ಮತ್ತು ಸೃಜನಶೀಲ ಚಟುವಟಿಕೆಗಳನ್ನು ಆಯೋಜಿಸಬೇಕು. 6ರಿಂದ 12 ನೇ ತರಗತಿಗಳಿಗೆ ಭಗವದ್ಗೀತೆಯ ಸ್ಟಡಿ ಮೆಟೀರಿಯಲ್ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಗುಜರಾತ್​​ನಲ್ಲಿ ತಾಯಿ ಹೀರಾಬೆನ್​​ರನ್ನು ಭೇಟಿಯಾಗಿ ಆಶೀರ್ವಾದ ಪಡೆದ ಪ್ರಧಾನಿ ಮೋದಿ; ಒಟ್ಟಿಗೇ ಊಟ ಮಾಡಿದ ಅಮ್ಮ-ಮಗ

E- Bhagavad Gita: ಇ- ಭಗವದ್ಗೀತೆ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ; ಪವಿತ್ರ ಗ್ರಂಥದ ಗುಣಗಾನ

Published On - 7:08 pm, Thu, 17 March 22