Atmanirbhar Bharat: ಬಾಹ್ಯಾಕಾಶಕ್ಕೆ ತಲುಪಲಿದೆ ಭಗವದ್ಗೀತೆ! ಜೊತೆಗಿರಲಿದೆ ನರೇಂದ್ರ ಮೋದಿ ಮತ್ತು 25 ಸಾವಿರ ಜನರ ಹೆಸರು
Nano Satellite: ಈ ಯೋಜನೆ ಪೂರ್ಣಗೊಳ್ಳುವ ವೇಳೆಗೆ ಸಾರ್ವಜನಿಕರಿಗೆ ಒಂದು ಕರೆ ನೀಡಲಾಗಿತ್ತು. ಯಾರು ತಮ್ಮ ಹೆಸರನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಉತ್ಸುಕರಾಗಿದ್ದಾರೋ ಅವರಿಗೆ ತಮ್ಮ ಹೆಸರು ಕಳುಹಿಸಲು ಸೂಚಿಸಲಾಗಿತ್ತು. ಈ ಯೋಜನೆಯಿಂದ ಪ್ರೇರಿತರಾಗಿ ಸುಮಾರು 25 ಸಾವಿರ ಜನ ಹೆಸರು ಕಳುಹಿಸಿದ್ದಾರೆ.
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ದಿನೇದಿನೇ ಹೆಗ್ಗುರುತು ಮೂಡಿಸುತ್ತಿದೆ. ಇದನ್ನು ಮತ್ತಷ್ಟು ಉತ್ತುಂಗಕ್ಕೆ ಕೊಂಡೊಯ್ಯಲು ಪ್ರೇರೇಪಿಸುವ ಸಲುವಾಗಿ ಕಳೆದ ವರ್ಷ IN-SPACe ಎಂಬ ನೂತನ ಸಂಸ್ಥೆಯೊಂದನ್ನು ಕೇಂದ್ರ ಸರ್ಕಾರ ಸ್ಥಾಪಿಸಿತ್ತು. ಬಾಹ್ಯಾಕಾಶ ಚಟುವಟಿಕೆಗಳಲ್ಲಿ ಖಾಸಗಿ ಸಹಭಾಗಿತ್ವವನ್ನು ಉತ್ತೇಜಿಸಲು ಈ ಹೆಜ್ಜೆ ಇಟ್ಟಿತ್ತು. ಇದೀಗ ಭಾರತದ ಸ್ಟಾರ್ಟ್ ಅಪ್ ಒಂದು 2 ನ್ಯಾನೋ ಉಪಗ್ರಹಗಳನ್ನು ತಯಾರಿಸಿದ್ದು, ಆ ಪೈಕಿ ಒಂದು ಸ್ಯಾಟಲೈಟ್ ಇಸ್ರೋ ಮುಂದಾಳತ್ವದಲ್ಲಿ ಉಡಾವಣೆಯಾಗುತ್ತಿದೆ. ಈ ಉಪಗ್ರಹಕ್ಕೆ ಬಾಹ್ಯಾಕಾಶ ಸಂಶೋಧನೆಯಲ್ಲಿ ಮಹತ್ತರ ಸಾಧನೆ ಮಾಡಿದ ಸಂಶೋಧಕ ಸತೀಶ್ ಧವನ್ ಅವರ ಹೆಸರಿಡಲಾಗಿದೆ. SD SAT ಎಂದು ಕರೆಯಲಾಗಿದೆ. ಪಿಎಸ್ಎಲ್ವಿ ವಾಹನ ಈ ಉಪಗ್ರಹವನ್ನು ಕಕ್ಷೆಗೆ ಸೇರಿಸಲಿದೆ.
ಈ ಯೋಜನೆ ಪೂರ್ಣಗೊಳ್ಳುವ ವೇಳೆಗೆ ಸಾರ್ವಜನಿಕರಿಗೆ ಒಂದು ಕರೆ ನೀಡಲಾಗಿತ್ತು. ಯಾರು ತಮ್ಮ ಹೆಸರನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಉತ್ಸುಕರಾಗಿದ್ದಾರೋ ಅವರಿಗೆ ತಮ್ಮ ಹೆಸರು ಕಳುಹಿಸಲು ಸೂಚಿಸಲಾಗಿತ್ತು. ಈ ಯೋಜನೆಯಿಂದ ಪ್ರೇರಿತರಾಗಿ ಸುಮಾರು 25 ಸಾವಿರ ಜನ ಹೆಸರು ಕಳುಹಿಸಿದ್ದು, ಆ ಪೈಕಿ 1 ಸಾವಿರ ಹೆಸರು ವಿದೇಶದಿಂದ ಬಂದಿವೆ ಎಂಬುದು ಗಮನಾರ್ಹ. ಈ ರೀತಿಯ ಯೋಜನೆಯಿಂದ ಜನರಲ್ಲಿ ಬಾಹ್ಯಾಕಾಶದ ಕುರಿತಾಗಿ ಹೆಚ್ಚು ಆಸಕ್ತಿ ಮೂಡುವುದು ಸಾಧ್ಯವಾಗಲಿದೆ ಎನ್ನುವುದು ನಮ್ಮ ಅಭಿಪ್ರಾಯ ಎಂದು ಸ್ಪೇಸ್ಕಿಡ್ಸ್ ಸಂಸ್ಥಾಪಕ ಮತ್ತು ಸಿಇಒ ಡಾ. ಶ್ರೀಮೂರ್ತಿ ಹೇಳಿದ್ದಾರೆ.
ಇವರೆಲ್ಲರ ಹೆಸರಿನೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹೆಸರು ಮತ್ತು ಭಾವಚಿತ್ರವೂ ಇರಲಿದೆ. ಭಗವದ್ಗೀತೆಯ ಒಂದು ಪ್ರತಿ ಕಳುಹಿಸಲೂ ನಿರ್ಧರಿಸಿದ್ದೇವೆ. ಜೊತೆಗೆ ಇಸ್ರೋ ಮುಖ್ಯಸ್ಥ ಡಾ.ಕೆ.ಶಿವನ್ ಮತ್ತು ಇನ್ನೊಬ್ಬ ವಿಜ್ಞಾನಿ ಡಾ.ಆರ್.ಉಮಾಮಹೇಶ್ವರನ್ ಅವರ ಹೆಸರು ಕೂಡಾ ಇರಲಿದೆ ಎಂದು ತಿಳಿಸಿದ್ದಾರೆ. ಈ ಕಿರು ಉಪಗ್ರಹವನ್ನು ಭಾರತದಲ್ಲಿಯೇ ತಯಾರಿಸಿರುವ ಕಾರಣ ಆತ್ಮನಿರ್ಭರ್ ಭಾರತ ಘೋಷವಾಕ್ಯವನ್ನೂ ಇದು ನಭಕ್ಕೆ ಹೊತ್ತೊಯ್ಯಲಿದೆ. ಸದರಿ ಉಪಗ್ರಹವು ಮೂರು ಪೇಲೋಡ್ಗಳನ್ನು ಒಳಗೊಂಡಿದ್ದು, ಒಂದು ಬಾಹ್ಯಾಕಾಶದಲ್ಲಿನ ವಿಕಿರಣ ಅಭ್ಯಸಿಸಲು, ಇನ್ನೊಂದು ಕಾಂತೀಯ ವಲಯದ ಬಗ್ಗೆ ತಿಳಿಯಲು ಹಾಗೂ ಮತ್ತೊಂದು ಕಡಿಮೆ ಸಂಪನ್ಮೂಲದೊಂದಿಗೆ ಹೆಚ್ಚು ವಿಸ್ತೀರ್ಣದ ಸಂಪರ್ಕ ಸಾಧಿಸುವ ಪ್ರಯತ್ನ ಮಾಡಲು ಬಳಕೆಯಾಗಲಿವೆ ಎಂದು ಮೂಲಗಳು ತಿಳಿಸಿವೆ.
ಬಾಹ್ಯಾಕಾಶ ಚಟುವಟಿಕೆಗಳಲ್ಲಿ ಖಾಸಗಿ ಸಹಭಾಗಿತ್ವವನ್ನು ಉತ್ತೇಜಿಸಲು ಸರ್ಕಾರ ನಿರ್ಧರಿಸಿದ ನಂತರ ಇದೇ ಮೊದಲ ಬಾರಿಗೆ ಕಿರು ಉಪಗ್ರಹವೊಂದು ಉಡಾವಣೆಯಾಗುತ್ತಿದೆ. ಭಾರತದ ಸ್ಟಾರ್ಟ್ ಅಪ್ ತಯಾರಿಸಿದ ಸ್ಯಾಟಲೈಟ್ ಇಸ್ರೋ ಮುಂದಾಳತ್ವದಲ್ಲಿ ಉಡಾವಣೆಯಾಗುತ್ತಿರುವುದು ಮತ್ತಷ್ಟು ಕುತೂಹಲ ಮೂಡಿಸಿದೆ. ಈ ಉಪಗ್ರಹಕ್ಕೆ ಬಾಹ್ಯಾಕಾಶ ಸಂಶೋಧನೆಯಲ್ಲಿ ಮಹತ್ತರ ಸಾಧನೆ ಮಾಡಿದ ಭಾರತೀಯ ಸತೀಶ್ ಧವನ್ ಅವರ ಹೆಸರಿಡಲಾಗಿರುವ ಕಾರಣ, SD SAT ಕುರಿತ ನಿರೀಕ್ಷೆಗಳೂ ಹೆಚ್ಚಾಗಿವೆ.
ಇದನ್ನೂ ಓದಿ: ಚನ್ನಪಟ್ಟಣದ ರೈಲ್ವೇ ನಿಲ್ದಾಣದಲ್ಲಿ ಬೊಂಬೆಗಳ ಪ್ರದರ್ಶನ: ರೈಲ್ವೇ ಸಚಿವ ಪಿಯೂಶ್ ಗೋಯಲ್ ಟ್ವೀಟ್, ಪ್ರಧಾನಿ ಮೋದಿ ರೀಟ್ವೀಟ್