ಮುಂಬೈನ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಗೋಡೆ ಕುಸಿತ; 15 ಮಂದಿ ಸಾವು, ಎನ್​ಡಿಆರ್​ಎಫ್​ನಿಂದ ರಕ್ಷಣಾ ಕಾರ್ಯಾಚರಣೆ

| Updated By: Lakshmi Hegde

Updated on: Jul 18, 2021 | 9:42 AM

Maharashtra: ಕಳೆದ ಹಲವು ದಿನಗಳಿಂದಲೂ ಸಿಕ್ಕಾಪಟೆ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂಬೈ, ಮಹಾರಾಷ್ಟ್ರ ಸುತ್ತಮುತ್ತ ಹಲವು ಕಡೆ ಮಣ್ಣು ಕುಸಿತ, ಮನೆಕುಸಿತದಂಥ ಅವಘಡಗಳು ನಡೆಯುತ್ತಿವೆ ಎಂದು ಎನ್​ಡಿಆರ್​ಎಫ್​ ಡೆಪ್ಯೂಟಿ ಕಮಾಂಡಂಟ್ ಅಶೀಶ್​ ಕುಮಾರ್​ ಹೇಳಿದ್ದಾರೆ.

ಮುಂಬೈನ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಗೋಡೆ ಕುಸಿತ; 15 ಮಂದಿ ಸಾವು, ಎನ್​ಡಿಆರ್​ಎಫ್​ನಿಂದ ರಕ್ಷಣಾ ಕಾರ್ಯಾಚರಣೆ
ಮಹಾರಾಷ್ಟ್ರದ ಗೋಡೆ ಕುಸಿತ
Follow us on

ಮುಂಬೈ: ಮಹಾರಾಷ್ಟ್ರ(Maharashtra) ದ ಚೆಂಬೂರಿನಲ್ಲಿ ಮಣ್ಣುಕುಸಿತವಾಗಿ, ಗೋಡೆಯೊಂದು ಕೆಲವು ಗುಡಿಸಲುಗಳ ಮೇಲೆ ಬಿದ್ದ ಪರಿಣಾಮ ಸುಮಾರು 12 ಮಂದಿ ಮೃತಪಟ್ಟಿದ್ದಾರೆ. ಅಲ್ಲೀಗ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (NDRF) ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ (Rescue Operations) ನಡೆಸುತ್ತಿದೆ. ಮಧ್ಯರಾತ್ರಿಯೇ ಅವಘಡ ಸಂಭವಿಸಿದೆ ಎನ್ನಲಾಗಿದ್ದು, ಮುಂಜಾನೆ ಎನ್​ಡಿಆರ್​ಎಫ್​ ತಂಡದವರು ಅಲ್ಲಿಗೆ ತೆರಳುವಷ್ಟರಲ್ಲಿ ಸ್ಥಳೀಯರೇ 10 ಮೃತದೇಹಗಳನ್ನು ಹೊರತೆಗೆದಿದ್ದಾರೆ. ಉಳಿದ 2 ಮೃತದೇಹಗಳನ್ನು ರಕ್ಷಣಾ ಪಡೆಗಳು ತೆಗೆದಿವೆ. ಅಲ್ಲಿ ಗುಡಿಸಲುಗಳ ಅವಶೇಷಗಳನ್ನು ಸ್ವಚ್ಛಗೊಳಿಸುವ ಕಾರ್ಯಗಳು ನಡೆಯುತ್ತಿದ್ದು, ಇನ್ನೂ ಏಳು ಮಂದಿ ಸಿಲುಕಿರಬಹುದು ಎಂದು ಶಂಕಿಸಲಾಗಿದೆ.

ಇನ್ನೊಂದು ಪ್ರಕರಣ
ಹಾಗೇ ಮತ್ತೊಂದು ಇಂಥದ್ದೇ ಪ್ರಕರಣ ನಡೆದಿದ್ದು, ಮುಂಬೈನ ವಿಖ್ರೋಲಿ ಎಂಬಲ್ಲಿ ಇಂದು ಮುಂಜಾನೆ ಹೊತ್ತಿಗೆ ಒಂದು ವಸತಿ ಕಟ್ಟಡ ಕುಸಿದು ಬಿದ್ದ ಪರಿಣಾಮ ಮೂವರು ಮೃತಪಟ್ಟಿದ್ದಾರೆ. ಅಲ್ಲೂ ಕೂಡ ಎನ್​ಡಿಆರ್​ಎಫ್​ ತಂಡದವರೇ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಬೃಹನ್​ ಮುಂಬೈ ಕಾರ್ಪೋರೇಶನ್​ ತಿಳಿಸಿದೆ.

ಕುಸಿದುಬಿದ್ದ ಕಟ್ಟಡಗಳ ಅವಶೇಷದಿಂದ ಮೂರು ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಇನ್ನೂ ಆರು ಮಂದಿ ಸಿಲುಕಿರಬಹುದು ಎಂದು ಹೇಳಲಾಗಿದೆ. ಕಳೆದ ಹಲವು ದಿನಗಳಿಂದಲೂ ಸಿಕ್ಕಾಪಟೆ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂಬೈ, ಮಹಾರಾಷ್ಟ್ರ ಸುತ್ತಮುತ್ತ ಹಲವು ಕಡೆ ಮಣ್ಣು ಕುಸಿತ, ಮನೆಕುಸಿತದಂಥ ಅವಘಡಗಳು ನಡೆಯುತ್ತಿವೆ ಎಂದು ಎನ್​ಡಿಆರ್​ಎಫ್​ ಡೆಪ್ಯೂಟಿ ಕಮಾಂಡಂಟ್ ಅಶೀಶ್​ ಕುಮಾರ್​ ಹೇಳಿದ್ದಾರೆ. ನಿನ್ನೆ ರಾತ್ರಿಯೆಲ್ಲ ಮುಂಬೈನಲ್ಲಿ ವಿಪರೀತ ಮಳೆಯಾಗಿದ್ದು, ಇಂದು ಬೆಳಗ್ಗೆ ಆಗುವಷ್ಟರಲ್ಲಿ ನಗರದ ಅನೇಕ ಪ್ರದೇಶಗಳು ಜಲಾವೃತಗೊಂಡಿವೆ. ಸ್ಥಳೀಯ ರೈಲುಗಳ ಸಂಚಾರ ನಿಲುಗಡೆಯಾಗಿದೆ. ಭಾರಿ ಮಳೆಯ ಹಿನ್ನೆಲೆಯಲ್ಲಿ ಸದ್ಯ ಹವಾಮಾನ ಇಲಾಖೆ ನಗರದಲ್ಲಿ ರೆಡ್​ ಅಲರ್ಟ್​ ಘೋಷಿಸಿದೆ.

ಇದನ್ನೂ ಓದಿ: Karnataka Weather: ಕರ್ನಾಟಕದಲ್ಲಿ ಜುಲೈ 21 ರ ತನಕ ಭಾರೀ ಮಳೆ ಸಾಧ್ಯತೆ; SSLC ಪರೀಕ್ಷೆಗೆ ತೆರಳುವಾಗ ಎಚ್ಚರದಿಂದಿರಿ ಮಕ್ಕಳೇ

15 killed in two separate incidents of wall collapse in Mumbai

Published On - 9:40 am, Sun, 18 July 21