ಕಿನ್ನೌರ್: ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ 17 ಮಂದಿ ಚಾರಣಿಗರು ನಾಪತ್ತೆಯಾಗಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ. ಚಾರಣಿಗರು ಅಕ್ಟೋಬರ್ 14 ರಂದು ಉತ್ತರಾಖಂಡದ ಉತ್ತರಕಾಶಿಯ ಹರ್ಷಿಲ್ನಿಂದ ಹಿಮಾಚಲ ಪ್ರದೇಶದ ಕಿನ್ನೌರ್‌ನಲ್ಲಿ ಚಿತ್ಕುಲ್‌ಗೆ ಹೊರಟಿದ್ದರು. ಆದರೆ ಅವರು ಅಕ್ಟೋಬರ್ 17 ರಿಂದ 19 ರವರೆಗೆ ಲಮಖಾಗಾ ಪಾಸ್‌ನಲ್ಲಿ ಕಾಣೆಯಾದರು ಎಂದು ಅಧಿಕಾರಿ ಹೇಳಿದ್ದಾರೆ. ಲಮಖಾಗಾ ಪಾಸ್ ಕಿನ್ನೌರ್ ಜಿಲ್ಲೆಯನ್ನು ಉತ್ತರಾಖಂಡದ ಹರ್ಷಿಲ್‌ನೊಂದಿಗೆ ಸಂಪರ್ಕಿಸುವ ಕಠಿಣ ಪಾಸ್‌ಗಳಲ್ಲಿ ಒಂದಾಗಿದೆ. ಪೊಲೀಸ್, ಅರಣ್ಯ ಇಲಾಖೆ ತಂಡಗಳು ಮತ್ತು ತ್ವರಿತ ಪ್ರತಿಕ್ರಿಯೆ ತಂಡವನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಕಿನ್ನೌರ್ ಉಪ ಆಯುಕ್ತ ಅಬಿದ್ ಹುಸೇನ್ ಸಾದಿಕ್ ತಿಳಿಸಿದ್ದಾರೆ. ಅವರ ಶೋಧಕ್ಕಾಗಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸರ ಸಹಾಯವನ್ನೂ ಕೋರಲಾಗಿದೆ ಎಂದು ಡಿಸಿ ಹೇಳಿದ್ದಾರೆ.
ಗುರುವಾರ ಮುಂಜಾನೆ ಶೋಧ ಕಾರ್ಯಾಚರಣೆ ಆರಂಭಿಸಲಾಗುವುದು ಎಂದು ಅವರು ಹೇಳಿದರು.
ಉತ್ತರಾಖಂಡದಲ್ಲಿ ಕಾಣೆಯಾದ 3 ಪೋರ್ಟರ್ಗಳು ಶವವಾಗಿ ಪತ್ತೆ
ಭಾರತ-ಚೀನಾ ಗಡಿಯಲ್ಲಿ ಐಟಿಬಿಪಿ ತಂಡದೊಂದಿಗೆ ಗಸ್ತು ತಿರುಗುತ್ತಿದ್ದಾಗ ನಾಪತ್ತೆಯಾಗಿದ್ದ ಮೂವರು ಪೋರ್ಟರ್ಗಳು ಬುಧವಾರ ಜಿಲ್ಲೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಸ್ತು ತಿರುಗುತ್ತಿದ್ದಾಗ ಪೋರ್ಟರ್ ಗಳು ದಾರಿ ತಪ್ಪಿ ಐಟಿಬಿಪಿ ತಂಡದಿಂದ ಬೇರ್ಪಟ್ಟಿದ್ದಾರೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ದೇವೇಂದ್ರ ಪಟ್ವಾಲ್ ತಿಳಿಸಿದ್ದಾರೆ.
ಅವರು ಸೋಮವಾರ ನೀಲಪಾಣಿಯ ಐಟಿಬಿಪಿ ಪೋಸ್ಟ್ ತಲುಪಬೇಕಿತ್ತು ಆದರೆ ಪರ್ವತ ಶಿಖರಗಳಲ್ಲಿ ಹಿಮಪಾತವಾಗಿದ್ದರಿಂದ, ಅವರು ಮಂಗಳವಾರ ಸಂಜೆಯಾದರೂ ಹಿಂತಿರುಗಲಿಲ್ಲ. ಆದ್ದರಿಂದ ಅವರನ್ನು ಪತ್ತೆಹಚ್ಚಲು ಭಾರತೀಯ ವಾಯುಪಡೆ (ಐಎಎಫ್) ಮತ್ತು ವಿಪತ್ತು ನಿರ್ವಹಣಾ ಇಲಾಖೆಯ ಸಹಾಯ ಪಡೆಯಿತು ಎಂದು ಅಧಿಕಾರಿ ಹೇಳಿದರು.
ಐಟಿಬಿಪಿ ಮಟ್ಲಿ 12 ಬೆಟಾಲಿಯನ್ ಕಮಾಂಡೆಂಟ್ ಅಭಿಜಿತ್ ಸಮಯಾರ್ ಅವರು ಪೋರ್ಟರ್ ಗಳ ಸಾವನ್ನು ದೃಢಪಡಿಸಿದ್ದು ಅವರನ್ನು ಹಿಮದ ಕೆಳಗೆ ಹೂಳಲಾಗಿದೆ ಎಂದು ಹೇಳಿದರು. ಅವರ ಶವಗಳನ್ನು ಹೊರತೆಗೆಯಲು ಮತ್ತು ಮಟ್ಲಿಯಲ್ಲಿ ಕಾಯುತ್ತಿರುವ ಅವರ ಸಂಬಂಧಿಕರಿಗೆ ಹಸ್ತಾಂತರಿಸಲು ಗುರುವಾರ ಕಾರ್ಯಾಚರಣೆ ಆರಂಭಿಸಲಾಗುವುದು ಎಂದು ಅವರು ಹೇಳಿದರು.
ಇದನ್ನೂ ಓದಿ: ರೈತರಿಗೆ ಪ್ರತಿಭಟನೆ ಮಾಡುವ ಹಕ್ಕಿದೆ, ಆದರೆ ರಸ್ತೆಗಳನ್ನು ಅನಿರ್ದಿಷ್ಟವಾಗಿ ನಿರ್ಬಂಧಿಸಲು ಸಾಧ್ಯವಿಲ್ಲ: ಸುಪ್ರೀಂಕೋರ್ಟ್