ಗಡಿ ಭದ್ರತಾ ಪಡೆಯ (BSF) ಇಬ್ಬರು ಯೋಧರು ಪರಸ್ಪರ ಶೂಟ್ ಮಾಡಿಕೊಂಡು ಮೃತಪಟ್ಟ ಘಟನೆ ಪಶ್ಚಿಮ ಬಂಗಾಳದ ಬಾಂಗ್ಲಾದೇಶ-ಭಾರತ ಗಡಿ ಸಮೀಪ ಇಂದು ಮುಂಜಾನೆ 6.45ರ ಹೊತ್ತಿಗೆ ನಡೆದಿದೆ. ಇವರು ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯಲ್ಲಿರುವ ಕಕ್ಮರಿಚಾರ್ ಸೇನಾ ಶಿಬಿರದ ಬೆಟಾಲಿಯನ್ ಕ್ಯಾಂಪ್ 177ರ ಯೋಧರಾಗಿದ್ದರು. ಕೋಲ್ಕತ್ತದಿಂದ 230 ಕಿಮೀ ದೂರದಲ್ಲಿರುವ ಪ್ಯಾರಾ ಮಿಲಿಟರಿ ಪಡೆಯ ಬರ್ಹಾಂಪೋರ್ ವಲಯದಲ್ಲಿ ಈ ಶಿಬಿರವಿದೆ. ಹೀಗೆ ಗುಂಡು ಹಾರಿಸಿಕೊಂಡು ಮೃತಪಟ್ಟವರಿಬ್ಬರೂ ಗಡಿ ಭದ್ರತಾ ಪಡೆಯ ಹೆಡ್ಕಾನ್ಸ್ಟೆಬಲ್ಗಳಾಗಿದ್ದು, ಒಬ್ಬರ ಹೆಸರು ಎಸ್.ಎಸ್.ಸೇಖರ್ ಮತ್ತು ಇನ್ನೊಬ್ಬರು ಜಾನ್ಸನ್ ಟೊಪ್ಪೊ ಎಂದು ಗುರುತಿಸಲಾಗಿದೆ.
ಹೀಗೆ ಗುಂಡು ಹಾರಿಸಿಕೊಳ್ಳುವುದಕ್ಕೂ ಮೊದಲು ಇವರು ಜಗಳವಾಡಿಕೊಂಡಿದ್ದಾರೆ. ದೀರ್ಘ ಸಮಯದಿಂದಲೂ ಒಬ್ಬರಿಗೊಬ್ಬರು ಮಾತಿನ ಚಕಮಕಿ ನಡೆಸುತ್ತಲೇ ಇದ್ದರು. ಇವರಿಬ್ಬರಿಗೆ ಪೊಲೀಸರು ಸಮನ್ಸ್ ಕೂಡ ನೀಡಿ, ವಿಚಾರಣೆಗೆ ಹಾಜರಾಗಲು ಸೂಚಿಸಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಎಸ್ಎಫ್ ಡಿಐಜಿ ಎಸ್ಎಸ್ ಗುಲೇರಿಯಾ, ಇವರಿಬ್ಬರ ಮಧ್ಯೆ ಜಗಳಕ್ಕೆ ಕಾರಣ ಏನಿತ್ತು. ಪರಸ್ಪರ ಗುಂಡು ಹಾರಿಸಿಕೊಂಡಿದ್ದೇಕೆ ಎಂಬಿತ್ಯಾದಿ ವಿಚಾರಗಳನ್ನು ತನಿಖೆಗೆ ಕೈಗೆತ್ತಿಕೊಳ್ಳುವುದಾಗಿ ಹೇಳಿದ್ದಾರೆ.
ಬೆಳಗಾವಿ ಮೂಲದ ಯೋಧ ಸತ್ಯಪ್ಪ ಕಿಲಾರಗಿ (33) ತನ್ನ ಐವರು ಸಹಚರರ ಮೇಲೆ ಗುಂಡಿನ ದಾಳಿ ನಡೆಸಿ, ತಾನೂ ಗುಂಡು ಹಾರಿಸಿಕೊಂಡು ಮೃತಪಟ್ಟ ಘಟನೆ ನಿನ್ನೆ ಪಂಜಾಬ್ನಲ್ಲಿ ನಡೆದಿತ್ತು. ಈ ದುರ್ಘಟನೆ ಬೆನ್ನಲ್ಲೇ ಇಂದು ಪಶ್ಚಿಮ ಬಂಗಾಳದಲ್ಲಿ ಇಬ್ಬರು ಬಿಎಸ್ಎಫ್ ಯೋಧರು ಪರಸ್ಪರ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಳೆ ವಂಟಮೂರಿ ಗ್ರಾಮದ ಯೋಧ ಸತ್ಯಪ್ಪ ಕಳೆದ 13 ವರ್ಷಗಳ ಹಿಂದೆ BSF ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ವೈಯಕ್ತಿಕ ಸಾಲ ಹಾಗೂ ಕೌಟುಂಬಿಕ ವಿಚಾರಕ್ಕೆ ಮಾನಸಿಕವಾಗಿ ಖಿನ್ನರಾಗಿದ್ದ ಯೋಧ ಸತ್ಯಪ್ಪ, ನಿನ್ನೆ (ಮಾರ್ಚ್ 6) ಪಂಜಾಬ್ನ ಅಮೃತಸರ ಅಟ್ಟಾರಿ ಗಡಿಯ ಖೇಸರ್ ಕ್ಯಾಂಪ್ ನಲ್ಲಿ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಐವರು ಯೋಧರ ಮೇಲೆ ಗುಂಡು ತಗುಲಿದ್ದು ಬಳಿಕ ತಾನೂ ಸಹ ಗುಂಡು ಹಾರಿಸಿಕೊಂಡಿದ್ದಾರೆ.
ಇದನ್ನೂ ಓದಿ: ಪ್ರಿಯಕರನೊಂದಿಗೆ ಬೆಂಗಳೂರಿಗೆ ಓಡಿಬಂದಿರುವ ತಮಿಳುನಾಡು ಸಚಿವರೊಬ್ಬರ ಮಗಳಿಗೆ ಕರ್ನಾಟಕ ಸರ್ಕಾರದ ರಕ್ಷಣೆ ಬೇಕಂತೆ