ಉತ್ತರ ಪ್ರದೇಶ: ಕಾನ್ಪುರದಲ್ಲಿರುವ ರಾಜಕೀಯ್ ಬಾಲಮಂದಿರ್ ಕೇಂದ್ರದಲ್ಲಿ ನಡೆಸಲಾದ ಕೊರೊನಾ ಪರೀಕ್ಷೆಯಿಂದ ಹಲವಾರು ಸ್ಫೋಟಕ ಮಾಹಿತಿಗಳು ಹೊರಬಿದ್ದಿವೆ.
ಬಾಲಮಂದಿರದ 56 ಅಪ್ರಾಪ್ತೆಯರಲ್ಲಿ ಕೊರೊನಾ, ಇಬ್ಬರು ಗರ್ಭವತಿ..!
ಬಾಲಮಂದಿರದಲ್ಲಿರುವ ಅಪ್ರಾಪ್ತೆಯರಲ್ಲಿ ಕೆಲವರಿಗೆ ಕೊರೊನಾ ಸೋಂಕಿನ ಲಕ್ಷಣಗಳು ಕಂಡು ಬಂದಿದ್ದ ಹಿನ್ನೆಲೆಯಲ್ಲಿ ಬಾಲಮಂದಿರದ ಎಲ್ಲಾ ಬಾಲಕಿಯರನ್ನು ಕೊರೊನಾ ಟೆಸ್ಟ್ಗೆ ಒಳಪಡಿಸಲಾಗಿತ್ತು. ಇದೀಗ ಟೆಸ್ಟ್ನ ಫಲಿತಾಂಶವು ಹೊರಬಂದಿದ್ದು ಆ ಪೈಕಿ 56 ಅಪ್ರಾಪ್ತೆಯರಲ್ಲಿ ಸೋಂಕು ದೃಢವಾಗಿದೆ.
ಗರ್ಭವತಿ ಅಪ್ರಾಪ್ತೆಯರಲ್ಲಿ ಒಬ್ಬಳಿಗೆ ಏಡ್ಸ್, ಮತ್ತೊಬ್ಬಳಿಗೆ ಹೆಪಟೈಟಿಸ್..!
ಆದರೆ, ಅದಕ್ಕಿಂತ ಆಘಾತಕಾರಿ ಸಂಗತಿಯೆಂದರೆ ಆ 56 ಬಾಲಕಿಯರಲ್ಲಿ ಇಬ್ಬರು ಗರ್ಭವತಿಯಾಗಿದ್ದಾರೆ. ಮತ್ತೊಂದು ವಿಷಾದಕರ ಸಂಗತಿಯೆಂದರೆ ಆ ಇಬ್ಬರಲ್ಲಿ ಒಂದು ಹೆಣ್ಣುಮಗುವಿನಲ್ಲಿ ಮಾರಕ HIV ಕಂಡುಬಂದಿದ್ದರೆ, ಮತ್ತೋರ್ವ ಬಾಲಕಿಯಲ್ಲಿ ಹೆಪಟೈಟಿಸ್-C ರೋಗದ ಲಕ್ಷಣಗಳು ಪತ್ತೆಯಾಗಿವೆ. ಇದರಿಂದ ಕಾನ್ಪುರದ ಈ ಬಾಲಮಂದಿರದ ಆಡಳಿತ ನಿರ್ವಹಣೆಯ ಬಗ್ಗೆ ಸಾಕಷ್ಟು ಪ್ರಶ್ನೆಗಳು ಹುಟ್ಟಿದೆ.
17 ವರ್ಷದ ಆಸುಪಾಸಿನಲ್ಲಿರುವ ಇಬ್ಬರು ಗರ್ಭವತಿ ಅಪ್ರಾಪ್ತೆಯರನ್ನ ಸದ್ಯಕ್ಕೆ ಪ್ರತ್ಯೇಕ ಹೆರಿಗೆ ಆಸ್ಪತ್ರೆಗೆ ರವಾನಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಜೊತೆಗೆ ಉಳಿದ ಸೋಂಕಿತೆಯರನ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಬಾಲಕಿಯರು ಗರ್ಭವತಿಯಾದ ಬಗ್ಗೆ ಅಧಿಕಾರಿಗಳಿಗಿಲ್ಲವಂತೆ ಮಾಹಿತಿ..!
ವಿಪರ್ಯಾಸವೆಂದರೆ, ಸ್ಥಳೀಯ ಅಧಿಕಾರಿಗಳಿಗೆ ಇದಾವುದರ ಬಗ್ಗೆಯೂ ಮಾಹಿತಿಯೇ ಇಲ್ಲವಂತೆ. ಜೊತೆಗೆ ಸೋಂಕಿತೆಯರ ಟ್ರಾವೆಲ್ ಹಿಸ್ಟರಿಯನ್ನ ಕೂಡ ಇನ್ನೂ ಪತ್ತೆ ಹಚ್ಚೋಕೆ ಸಾಧ್ಯವಾಗಿಲ್ಲವಂತೆ. ಕಳೆದ ಡಿಸಂಬರ್ನಲ್ಲಿ ಇವರನ್ನೆಲ್ಲ ಈ ಸರ್ಕಾರಿ ಬಾಲಮಂದಿರಕ್ಕೆ ಕರೆತರಲಾಗಿತ್ತು ಎಂದು ಮಾತ್ರ ತಿಳಿದುಬಂದಿದೆ. ಸದ್ಯಕ್ಕೆ ವಿವಾದಿತ ಬಾಲಮಂದಿರವನ್ನು ಸೀಲ್ಡೌನ್ ಮಾಡಲಾಗಿದ್ದು ಸಿಬ್ಬಂದಿಯನ್ನ ಕ್ವಾರಂಟೈನ್ನಲ್ಲಿ ಇರಿಸಲಾಗಿದೆ.