ಕಾಶ್ಮೀರದ ಬಾರಾಮುಲ್ಲಾ ಎನ್​ಕೌಂಟರ್​​ನಲ್ಲಿ ಹತ್ಯೆಗೀಡಾದ ಉಗ್ರರಿಗೂ ಎಲ್​ಇಟಿಗೂ ನಂಟು

|

Updated on: Jun 20, 2024 | 5:29 PM

ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಹತ್ಯೆಗೀಡಾದ ಇಬ್ಬರು ಭಯೋತ್ಪಾದಕರು ಪಾಕಿಸ್ತಾನಿ ಉಗ್ರ ಸಂಘಟನೆಯಾದ ಎಲ್​ಇಟಿಯೊಂದಿಗೆ ನಂಟು ಹೊಂದಿದ್ದಾರೆ ಎಂದು ಭಾರತೀಯ ಸೇನೆ ಇಂದು (ಗುರುವಾರ) ದೃಢಪಡಿಸಿದೆ.

ಕಾಶ್ಮೀರದ ಬಾರಾಮುಲ್ಲಾ ಎನ್​ಕೌಂಟರ್​​ನಲ್ಲಿ ಹತ್ಯೆಗೀಡಾದ ಉಗ್ರರಿಗೂ ಎಲ್​ಇಟಿಗೂ ನಂಟು
ಬಾರಾಮುಲ್ಲಾ ಎನ್​ಕೌಂಟರ್
Follow us on

ಬಾರಾಮುಲ್ಲಾ: ಬುಧವಾರ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ (Baramulla) ಜಿಲ್ಲೆಯಲ್ಲಿ ನಡೆದ ಎನ್​ಕೌಂಟರ್ (Encounter) ಕಾರ್ಯಾಚರಣೆಯಲ್ಲಿ ಹತ್ಯೆಗೀಡಾದ ಇಬ್ಬರು ಭಯೋತ್ಪಾದಕರು ಪಾಕಿಸ್ತಾನದ ನಿವಾಸಿಗಳು ಮತ್ತು ನಿಷೇಧಿತ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಭಾರತೀಯ ಸೇನೆ (Indian Army) ಖಚಿತಪಡಿಸಿದೆ.

ಬುಧವಾರ ಕಾಶ್ಮೀರ ಕಣಿವೆಯ ಬಾರಾಮುಲ್ಲಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟ ಉಗ್ರರನ್ನು ಉಸ್ಮಾನ್ ಮತ್ತು ಉಮರ್ ಎಂದು ಗುರುತಿಸಲಾಗಿದೆ. ಎನ್​ಕೌಂಟರ್​​ನಲ್ಲಿ ಹತ್ಯೆಗೀಡಾದ ಭಯೋತ್ಪಾದಕರು ಪಾಕಿಸ್ತಾನ ಮೂಲದವರು ಮತ್ತು ಎಲ್‌ಇಟಿಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು 5 ಸೆಕ್ಟರ್ ರಾಷ್ಟ್ರೀಯ ರೈಫಲ್ಸ್ ಕಮಾಂಡರ್ ಬ್ರಿಗೇಡಿಯರ್ ದೀಪಕ್ ದೇವ್ ಮಾಹಿತಿ ನೀಡಿದ್ದಾರೆ.

ಈ ಎನ್‌ಕೌಂಟರ್‌ ಕಾರ್ಯಾಚರಣೆಯಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ ಕೂಡ ಗಾಯಗೊಂಡಿದ್ದಾರೆ. ಉಸ್ಮಾನ್ 2020ರಿಂದ ಕಾಶ್ಮೀರ ಕಣಿವೆಯಲ್ಲಿ ಸಕ್ರಿಯನಾಗಿದ್ದ ಎಂದು ಬ್ರಿಗೇಡಿಯರ್ ದೀಪಕ್ ದೇವ್ ಹೇಳಿದ್ದಾರೆ.

ಇದನ್ನೂ ಓದಿ: ಜಾರ್ಖಂಡ್​ನಲ್ಲಿ ನಡೆದ​ ಎನ್​ಕೌಂಟರ್​ನಲ್ಲಿ ನಾಲ್ವರು ನಕ್ಸಲರ ಹತ್ಯೆ

ಬಾರಾಮುಲ್ಲಾದ ವಾಟರ್‌ಗಾಮ್ ಪ್ರದೇಶದಲ್ಲಿ ಭಯೋತ್ಪಾದಕರ ಉಪಸ್ಥಿತಿಯ ಬಗ್ಗೆ ಮಾಹಿತಿ ಪಡೆದ ನಂತರ ಕಾರ್ಡನ್ ಮತ್ತು ಸರ್ಚ್ ಕಾರ್ಯಾಚರಣೆಯಲ್ಲಿ ಭಯೋತ್ಪಾದಕರು ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿದ ನಂತರ ಎನ್‌ಕೌಂಟರ್ ನಡೆಯಿತು.

ಈ ಕಾರ್ಯಾಚರಣೆಯ ನಂತರ ಸೇನಾ ಅಧಿಕಾರಿಗಳು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಸಂಗ್ರಹವನ್ನು ವಶಪಡಿಸಿಕೊಂಡರು. ಕಳೆದ ಕೆಲವು ವಾರಗಳಿಂದ, ಬಾರಾಮುಲ್ಲಾ ಜಿಲ್ಲೆಯ ಸೋಪೋರ್-ರಫ್ಲಾಬಾದ್ ಪ್ರದೇಶದಲ್ಲಿ ಭಯೋತ್ಪಾದಕ ಗುಂಪಿನ ಚಲನವಲನದ ಬಗ್ಗೆ ನಿರಂತರ ಮಾಹಿತಿ ಇದೆ ಎಂದು ಬ್ರಿಗೇಡಿಯರ್ ಹೇಳಿದ್ದಾರೆ.

ರಫಿಯಾಬಾದ್ ಪ್ರದೇಶದ ಹದಿಪುರ ಗ್ರಾಮದ ಮನೆಯೊಂದರಲ್ಲಿ ಇಬ್ಬರು ಭಯೋತ್ಪಾದಕರು ಅಡಗಿಕೊಂಡಿದ್ದಾರೆ ಎಂದು ಜಮ್ಮು ಮತ್ತು ಕಾಸ್ಮೀರ್ ಪೊಲೀಸರ ಮೂಲಕ ನಿರ್ದಿಷ್ಟ ಗುಪ್ತಚರ ಮಾಹಿತಿ ಪಡೆಯಿತು. ಇದರ ಪರಿಣಾಮವಾಗಿ, ಭಾರತೀಯ ಸೇನೆ, ಜೆಕೆಪಿ ಮತ್ತು ಸಿಆರ್‌ಪಿಎಫ್ ಜಂಟಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು. ತಕ್ಷಣ ಆ ಪ್ರದೇಶವನ್ನು ಸುತ್ತುವರಿದವು ಎಂದು ಬ್ರಿಗೇಡಿಯರ್ ದೇವ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ಇದನ್ನೂ ಓದಿ: Terrorists Encounter: ಜಮ್ಮು ಕಾಶ್ಮೀರದ ಬರಾಮುಲ್ಲಾದಲ್ಲಿ ಎನ್‌ಕೌಂಟರ್‌; ಇಬ್ಬರು ಉಗ್ರರ ಹತ್ಯೆ

ಈ ಎನ್​ಕೌಂಟರ್ ಕಾರ್ಯಾಚರಣೆಯ ಸಮಯದಲ್ಲಿ ಪ್ರಮಾಣಿತ ಕಾರ್ಯವಿಧಾನಗಳನ್ನು ಅನುಸರಿಸಿ ಪಕ್ಕದ ಮನೆಗಳಿಂದ ನಾಗರಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು. ಆ ಪ್ರದೇಶವನ್ನು ಸುರಕ್ಷಿತಗೊಳಿಸಲಾಯಿತು. ನಂತರ, ಸೇನಾ ಸಿಬ್ಬಂದಿ ಆ ಮನೆಯನ್ನು ಸುತ್ತುವರೆದರು. ಆಗ ಭಯೋತ್ಪಾದಕರು ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದರು. ನಂತರದ ಗುಂಡಿನ ಚಕಮಕಿಯಲ್ಲಿ ಇಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡಲಾಯಿತು ಎಂದು ದೀಪಕ್ ದೇವ್ ಹೇಳಿದ್ದಾರೆ.

ಎನ್​ಕೌಂಟರ್ ಕಾರ್ಯಾಚರಣೆಯ ಯಶಸ್ಸಿಗೆ ಕಾಶ್ಮೀರಿ ಜನರ ಸಂಪೂರ್ಣ ಸಹಕಾರವೇ ಕಾರಣ ಎಂದು ಬ್ರಿಗೇಡಿಯರ್ ಹೇಳಿದ್ದಾರೆ. ಕಾಶ್ಮೀರದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಲು ಭದ್ರತಾ ಪಡೆಗಳು ನಿರಂತರ ಪ್ರಯತ್ನಗಳನ್ನು ಮುಂದುವರೆಸುತ್ತವೆ ಎಂದು ಅವರು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ