ಕೊರ್ಬಾ: ಛತ್ತೀಸ್‌ಗಢದ (Chhattisgarh) ಕೊರ್ಬಾ ಜಿಲ್ಲೆಯಲ್ಲಿ ಪಾಗಲ್ ಪ್ರೇಮಿಯೊಬ್ಬ ತನ್ನೊಂದಿಗೆ ಮಾತನಾಡಲು ನಿರಾಕರಿಸಿದ 20 ವರ್ಷದ ಯುವತಿಯನ್ನು ಕಟ್ಟಿ ಹಾಕಿ, ಆಕೆಯ ಬಾಯಿಯನ್ನು ಮುಚ್ಚಿ, 51 ಬಾರಿ ಸ್ಕ್ರೂಡ್ರೈವರ್‌ನಿಂದ ಇರಿದು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಡಿಸೆಂಬರ್ 24ರಂದು ಸೌತ್ ಈಸ್ಟರ್ನ್ ಕೋಲ್ ಫೀಲ್ಡ್ ಲಿಮಿಟೆಡ್ (SECL) ಪಂಪ್ ಹೌಸ್ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಆರೋಪಿ ಯುವಕ ಅಲ್ಲಿಗೆ ಬಂದಾಗ ಆ ಯುವತಿ ಮನೆಯಲ್ಲಿ ಒಬ್ಬಳೇ ಇದ್ದಳು. ಆಕೆಯ ಕಿರುಚಾಟವನ್ನು ತಡೆಯಲು ಆಕೆಯ ಬಾಯಿಗೆ ಬಟ್ಟೆ ತುರುಕಿ, ಆಕೆಗೆ ಸ್ಕ್ರೂ ಡ್ರೈವರ್‌ನಿಂದ 51 ಬಾರಿ ಇರಿದಿದ್ದಾನೆ. ಇದರಿಂದ ಆ ಯುವತಿ ಸಾವನ್ನಪ್ಪಿದ್ದಾಳೆ.
ಆ ಯುವತಿಯ ತಮ್ಮ ಸಂಜೆ ಮನೆಗೆ ಬಂದಾಗ ಆಕೆ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ಗಾಬರಿಯಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಜಶ್ಪುರ್ ಜಿಲ್ಲೆಯವನಾದ ಆರೋಪಿಯು 3 ವರ್ಷಗಳ ಹಿಂದೆ ಆ ಯುವತಿಯೊಂದಿಗೆ ಪರಿಚಯವಾಗಿದ್ದ. ಬಸ್‌ನಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದಾಗ ಅದೇ ಬಸ್‌ನಲ್ಲಿ ಆ ಯುವತಿ ಕೂಡ ಪ್ರಯಾಣಿಸುತ್ತಿದ್ದಳು. ಆಗ ಅವರಿಬ್ಬರಿಗೂ ಪರಿಚಯವಾಗಿತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿ ಯುವಕ ನಂತರ ಕೆಲಸಕ್ಕಾಗಿ ಗುಜರಾತ್‌ನ ಅಹಮದಾಬಾದ್‌ಗೆ ತೆರಳಿದ್ದ. ಆಮೇಲೆ ಅವರಿಬ್ಬರೂ ಫೋನ್‌ನಲ್ಲಿ ಸಂಪರ್ಕದಲ್ಲಿದ್ದರು. ಆ ಯುವತಿ ಆತನೊಂದಿಗೆ ಫೋನ್‌ನಲ್ಲಿ ಮಾತನಾಡುವುದನ್ನು ನಿಲ್ಲಿಸಿದ ನಂತರ ಆ ಯುವಕ ಆಕೆಯ ಪೋಷಕರಿಗೂ ಬೆದರಿಕೆ ಹಾಕಿದ್ದ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: ಆಸ್ತಿಗಾಗಿ ತಮ್ಮನ ಮರ್ಡರ್, 3 ದಿನಗಳ ಬಳಿಕ ಶವ ಪತ್ತೆ, ಕೊಲೆ ರಹಸ್ಯ ಬೇಧಿಸಿದ ಸೊರಬ ಪೊಲೀಸರು
ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ನಾಪತ್ತೆಯಾಗಿರುವ ಆರೋಪಿಯ ಪತ್ತೆಗೆ 4 ಪೊಲೀಸ್ ತಂಡಗಳನ್ನು ರಚಿಸಲಾಗಿದೆ.
Published On - 3:31 pm, Tue, 27 December 22