2019ರ ದ್ವೇಷ ಭಾಷಣ ಪ್ರಕರಣ, ಎಸ್‌ಪಿ ನಾಯಕ ಅಜಂ ಖಾನ್​​ಗೆ 2 ವರ್ಷ ಜೈಲು ಶಿಕ್ಷೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Jul 15, 2023 | 4:25 PM

ಸಮಾಜವಾದಿ ಪಕ್ಷದ (ಎಸ್‌ಪಿ) ನಾಯಕ ಅಜಂ ಖಾನ್ ವಿರುದ್ಧ ದಾಖಲಾಗಿದ್ದ ದ್ವೇಷ ಭಾಷಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು (ಜು.15) ರಾಂಪುರ ನ್ಯಾಯಾಲಯ ಅವರನ್ನು ದೋಷಿ ಎಂದು ಘೋಷಿಸಿದ್ದು, ಅವರಿಗೆ ಎರಡು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ.

2019ರ ದ್ವೇಷ ಭಾಷಣ ಪ್ರಕರಣ, ಎಸ್‌ಪಿ ನಾಯಕ ಅಜಂ ಖಾನ್​​ಗೆ 2 ವರ್ಷ ಜೈಲು ಶಿಕ್ಷೆ
ಆಜಂ ಖಾನ್
Follow us on

ಲಖನೌ ಜು.15: 2019ರ ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ ಸಮಾಜವಾದಿ ಪಕ್ಷದ (ಎಸ್‌ಪಿ) ನಾಯಕ ಅಜಂ ಖಾನ್ (Azam Khan) ವಿರುದ್ಧ ದಾಖಲಾಗಿದ್ದ ದ್ವೇಷ ಭಾಷಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು (ಜು.15) ರಾಂಪುರ ನ್ಯಾಯಾಲಯ ಅವರನ್ನು ದೋಷಿ ಎಂದು ಘೋಷಿಸಿದ್ದು, ಅವರಿಗೆ ಎರಡು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ. ಅಜಂ ಖಾನ್ 2019ರ ಲೋಕಸಭೆ ಚುನಾವಣೆಯಲ್ಲಿ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಮತ್ತು ಮಾಯಾವತಿ ಅವರ ಜತೆಗಿನ ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಈ ಸಂದರ್ಭದಲ್ಲಿ ರಾಂಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ಔಂಜನೇಯ ಕುಮಾರ್ ಸಿಂಗ್ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಅವಹೇಳನಕಾರಿ ಹೇಳಿಕೆಯನ್ನು ನೀಡಿದ್ದರು. ಈ ಕಾರಣಕ್ಕೆ ಅಜಂ ಖಾನ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಅಜಂ ಖಾನ್ ಮಾಡಿದ ಭಾಷಣದ ವೀಡಿಯೊ ಎಲ್ಲ ಕಡೆ ವೈರಲ್​​ ಆಗಿತ್ತು. ಇದನ್ನು ಸಾಕ್ಷಿಯಾಗಿರಿಸಿಕೊಂಡಿದ್ದ ರಾಂಪುರ ಜಿಲ್ಲೆಯ ಸಹಾಯಕ ಅಭಿವೃದ್ಧಿ ಅಧಿಕಾರಿ (ಪಂಚಾಯತ್) ಅನಿಲ್ ಕುಮಾರ್ ಚೌಹಾಣ್ ಅವರು ಶಹಜಾದ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

2019ರಲ್ಲಿ ದ್ವೇಷ ಭಾಷಣದ ಮತ್ತೊಂದು ಪ್ರಕರಣದಲ್ಲಿ ಅಜಂ ಖಾನ್ ಅವರನ್ನು ದೋಷಿ ಎಂದು ಘೋಷಿಸಲಾಯಿತು ಮತ್ತು ಅಕ್ಟೋಬರ್ 17, 2022ರಂದು ಜನಪ್ರತಿನಿಧಿಗಳ ನ್ಯಾಯಾಲಯವು ಮೂರು ವರ್ಷಗಳ ಕಾಲ ಅವರಿಗೆ ಜೈಲು ಶಿಕ್ಷೆಯನ್ನು ವಿಧಿಸಿತು, ನಂತರ ಅವರನ್ನು ಉತ್ತರ ಪ್ರದೇಶ ವಿಧಾನಸಭೆಯಿಂದ ಅನರ್ಹಗೊಳಿಸಲಾಗಿತ್ತು. 2023ರ ಮೇ ತಿಂಗಳಲ್ಲಿ ಇವರನ್ನು ವಿಚಾರಣೆ ನಡೆಸಿದ ಸೆಷನ್ಸ್ ನ್ಯಾಯಾಲಯವು ಅವರ ಮೇಲಿನ ದೋಷಾರೋಪಣೆಯನ್ನು ರದ್ದುಗೊಳಿಸಿತು ಮತ್ತು ಪ್ರಕರಣದಲ್ಲಿ ಅಜಂ ಖಾನ್ ಅವರನ್ನು ಖುಲಾಸೆಗೊಳಿಸಿತು.

ಇದನ್ನೂ ಓದಿ: ಮೋದಿ-ಯೋಗಿ ವಿರುದ್ಧ ದ್ವೇಷ ಭಾಷಣ: ಶಾಸಕ ಸ್ಥಾನ ಕಳೆದುಕೊಂಡ ಅಜಂ ಖಾನ್‌

ಅಜಂ ಖಾನ್ ಅವರನ್ನು ವಿಧಾನಸಭೆಯಿಂದ ಅನರ್ಹಗೊಳಿಸಿದ ನಂತರ, ರಾಂಪುರ ಸದರ್ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಅಜಂ ಖಾನ್ ಅವರ ಮೇಲೆ ದ್ವೇಷ ಭಾಷಣ ವಿರುದ್ಧ ದೂರು ನೀಡಿದ್ದ ಮತ್ತೊಬ್ಬ ವ್ಯಕ್ತಿ ಆಕಾಶ್ ಸಕ್ಸೇನಾ ಅವರನ್ನು ಬಿಜೆಪಿಯ ಅಭ್ಯರ್ಥಿಯಾಗಿ ಸ್ಪರ್ಧೆಗೆ ಇಳಿಸಿದರು, ಇದರ ಜತೆಗೆ ಅಜಂ ಖಾನ್ ಅವರ ಆಪ್ತ ಸಹಾಯಕ ಎಸ್‌ಪಿ ಅಭ್ಯರ್ಥಿ ಅಸಿಂ ರಾಜಾ ಕೂಡ ಸ್ಪರ್ಧಿಸಿದರು, ಆದರೆ ಈ ಚುನಾವನೆಯಲ್ಲಿ ಆಕಾಶ್ ಸಕ್ಸೇನಾ ಜಯಭೇರಿ ಸಾಧಿಸಿದರು. ಅಜಂ ಖಾನ್ ಅವರ ಆಪ್ತ ಸಹಾಯಕ ಎಸ್‌ಪಿ ಅಭ್ಯರ್ಥಿ ಅಸಿಂ ರಾಜಾ ಸೋತರು. ಈಗಾಗಲೇ ಅಜಂ ಖಾನ್ ಮೇಲೆ ಅನೇಕ ಪ್ರಕರಣಗಳಿದ್ದು, ಅದರ ವಿಚಾರಣೆ ಕೋರ್ಟ್​ನಲ್ಲಿ ನಡೆಯುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:23 pm, Sat, 15 July 23