AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2019ರ ಪುಲ್ವಾಮಾ ದಾಳಿಯ ಆರೋಪಿ ಜಮ್ಮು ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನ

2019ರ ಫೆಬ್ರವರಿ 14ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 40 ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (CRPF) ಸಿಬ್ಬಂದಿ ಮೃತಪಟ್ಟಿದ್ದರು. ಜೈಲಿನಲ್ಲಿದ್ದ ಆ ದಾಳಿಯ ಆರೋಪಿ ಇದೀಗ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.

2019ರ ಪುಲ್ವಾಮಾ ದಾಳಿಯ ಆರೋಪಿ ಜಮ್ಮು ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನ
ಪುಲ್ವಾಮಾ ದಾಳಿ
ಸುಷ್ಮಾ ಚಕ್ರೆ
|

Updated on: Sep 24, 2024 | 5:11 PM

Share

ಪುಲ್ವಾಮಾ: 2019ರಲ್ಲಿ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಸಿಆರ್‌ಪಿಎಫ್ ಬೆಂಗಾವಲು ಪಡೆಯ ಮೇಲೆ ನಡೆದ ಭೀಕರ ಭಯೋತ್ಪಾದಕ ದಾಳಿಯ ಆರೋಪಿಯಾಗಿದ್ದ 32 ವರ್ಷದ ವ್ಯಕ್ತಿ ಜಮ್ಮುವಿನ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಕಾಕಪೋರಾದ ಹಾಜಿಬಲ್ ಗ್ರಾಮದ ಆರೋಪಿ ಬಿಲಾಲ್ ಅಹ್ಮದ್ ಕುಚೇಯ್ ಸೇರಿದಂತೆ 19 ಮಂದಿಯ ಮೇಲೆ ಚಾರ್ಜ್​ಶೀಟ್ ಸಲ್ಲಿಸಲಾಗಿತ್ತು.

ಈ ಪ್ರಕರಣದ ಆರೋಪಿ ಬಿಲಾಲ್ ಅಹ್ಮದ್ ಕುಚೆ ಅವರನ್ನು ಸೆಪ್ಟೆಂಬರ್ 17ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಧಿಕಾರಿಗಳ ಪ್ರಕಾರ, ಆರೋಪಿಯು ಸೆಪ್ಟೆಂಬರ್ 17 ರಂದು ಕಿಶ್ತ್ವಾರ್ ಜಿಲ್ಲಾ ಕಾರಾಗೃಹದಲ್ಲಿ ಅನಾರೋಗ್ಯಕ್ಕೆ ಒಳಗಾದ ನಂತರ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಸೋಮವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

2020ರ ಆಗಸ್ಟ್ 25 ರಂದು ರಾಷ್ಟ್ರೀಯ ತನಿಖಾ ಸಂಸ್ಥೆ (NIA) 18 ಇತರ ಆರೋಪಿಗಳೊಂದಿಗೆ ಕುಚೇಯ್ ವಿರುದ್ಧವೂ ಚಾರ್ಜ್ ಶೀಟ್ ಸಲ್ಲಿಸಿತ್ತು. ಈ ಪ್ರಕರಣದಲ್ಲಿ ಬಂಧಿತರಾದ 7 ಆರೋಪಿಗಳಲ್ಲಿ ಅವರೂ ಸೇರಿದ್ದಾರೆ. ಅವರು ಮತ್ತು ಇತರ ಆರೋಪಿಗಳಾದ ಶಾಕಿರ್ ಬಶೀರ್, ಇನ್ಶಾ ಜಾನ್ ಮತ್ತು ಪೀರ್ ತಾರಿಕ್ ಅಹ್ಮದ್ ಶಾ ಲಾಜಿಸ್ಟಿಕ್ಸ್ ಒದಗಿಸಿದ್ದರು ಮತ್ತು ಅವರ ಮನೆಗಳಲ್ಲಿ ಜೆಎಂ ಭಯೋತ್ಪಾದಕರಿಗೆ ಆಶ್ರಯ ನೀಡಿದ್ದರು ಎಂಬ ಆರೋಪ ಕೇಳಿಬಂದಿತ್ತು.

ಇದನ್ನೂ ಓದಿ: ಲೆಬನಾನ್​ನಲ್ಲಿ 400ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ಇಸ್ರೇಲ್​ನ ರಾಕೆಟ್ ದಾಳಿ ಹೇಗಿತ್ತು

ಏನಿದು ಘಟನೆ?:

ಪುಲ್ವಾಮಾ ಭಯೋತ್ಪಾದಕ ದಾಳಿಯು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಅತ್ಯಂತ ಭೀಕರ ಭಯೋತ್ಪಾದಕ ದಾಳಿಗಳಲ್ಲಿ ಒಂದಾಗಿದೆ. ಇದು 40 ಸಿಆರ್‌ಪಿಎಫ್ ಯೋಧರನ್ನು ಬಲಿ ತೆಗೆದುಕೊಂಡಿತ್ತು. ಈ ದಾಳಿಯು ದೇಶಾದ್ಯಂತ ಬೃಹತ್ ಪ್ರತಿಭಟನೆಗಳು, ಕ್ಯಾಂಡಲ್‌ಲೈಟ್ ಮೆರವಣಿಗೆಗಳು ಮತ್ತು ಬಂದ್‌ಗಳಿಗೆ ಕಾರಣವಾಗಿತ್ತು. ಇದಾದ ನಂತರ ಈ ದಾಳಿಯಲ್ಲಿ ಸತ್ತವರಿಗೆ ನ್ಯಾಯ ಕೊಡಿಸಬೇಕೆಂದು ಜನರು ಬೀದಿಗಿಳಿದಿದ್ದರು.

2019ರ ಫೆಬ್ರವರಿ 14ರಂದು ಮಧ್ಯಾಹ್ನ ಸುಮಾರು 3.15ಕ್ಕೆ ಶ್ರೀನಗರ- ಜಮ್ಮು ಹೆದ್ದಾರಿಯಲ್ಲಿ ಸಿಆರ್‌ಪಿಎಫ್ ಯೋಧರ ಬೆಂಗಾವಲು ಸ್ಫೋಟಕ ತುಂಬಿದ ಎಸ್‌ಯುವಿಯಿಂದ ಡಿಕ್ಕಿ ಹೊಡೆದಿತ್ತು. ಅವಂತಿಪೋರಾ ಬಳಿ ನಡೆದ ಈ ದಾಳಿಯಲ್ಲಿ 40 ಸಿಆರ್‌ಪಿಎಫ್ ಜವಾನರು ಸಾವನ್ನಪ್ಪಿದ್ದರು. ಹಲವರು ಗಾಯಗೊಂಡಿದ್ದರು. ಪುಲ್ವಾಮಾ ಭಯೋತ್ಪಾದಕ ದಾಳಿಯು ಜಮ್ಮು ಮತ್ತು ಕಾಶ್ಮೀರದ ಭದ್ರತಾ ವ್ಯವಸ್ಥೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿತ್ತು.

ನಂತರ ಈ ದಾಳಿಯ ಹೊಣೆಯನ್ನು ಪಾಕಿಸ್ತಾನ ಮೂಲದ ಇಸ್ಲಾಮಿ ಉಗ್ರಗಾಮಿ ಸಂಘಟನೆ ಜೈಶ್-ಎ-ಮೊಹಮ್ಮದ್ ಹೊತ್ತುಕೊಂಡಿತ್ತು. ದಾಳಿಕೋರನನ್ನು ಪುಲ್ವಾಮಾ ಜಿಲ್ಲೆಯ ಸ್ಥಳೀಯ ಆದಿಲ್ ಅಹ್ಮದ್ ದಾರ್ ಎಂದು ಗುರುತಿಸಲಾಗಿತ್ತು. ಈತ ಜೈಶ್-ಎ-ಮೊಹಮ್ಮದ್ ಸದಸ್ಯನಾಗಿದ್ದ. 1 ವರ್ಷದ ಹಿಂದೆ ಗುಂಪಿಗೆ ಸೇರಿದ್ದ ಕಾಕಪೋರಾದ 22 ವರ್ಷದ ಆದಿಲ್ ಅಹ್ಮದ್ ದಾರ್ ಎಂಬ ಆಕ್ರಮಣಕಾರನ ವೀಡಿಯೊವನ್ನು ಅವರು ಬಿಡುಗಡೆ ಮಾಡಿದ್ದರು.

ಇದನ್ನೂ ಓದಿ: ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣ: ಪೊಲೀಸ್ ಎನ್​ಕೌಂಟರ್​ನಲ್ಲಿ ಆರೋಪಿ ಸಾವು

ಈ ದಾಳಿಯನ್ನು ಪಾಕಿಸ್ತಾನ ಖಂಡಿಸಿತ್ತು. ಆದರೂ ಜೈಶ್-ಎ-ಮೊಹಮ್ಮದ್‌ನ ನಾಯಕ ಮಸೂದ್ ಅಜರ್ ಪಾಕಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದಾನೆ ಎಂದು ತಿಳಿದಿದ್ದರೂ, ಈ ಘಟನೆಯಲ್ಲಿ ಯಾವುದೇ ಭಾಗಿಯಾಗಿಲ್ಲ ಎಂದು ಇಮ್ರಾನ್ ಖಾನ್ ಸ್ಪಷ್ಟವಾಗಿ ನಿರಾಕರಿಸಿದ್ದರು. ಭಯೋತ್ಪಾದನಾ ದಾಳಿಯಲ್ಲಿ ಭಾಗಿಯಾದ ಮೂವರು ಪಾಕಿಸ್ತಾನಿಯರು ಸೇರಿದಂತೆ 6 ಭಯೋತ್ಪಾದಕರು ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಕೊಲ್ಲಲ್ಪಟ್ಟಿದ್ದರೆ, ಜೆಎಂ ಸಂಸ್ಥಾಪಕ ಮಸೂದ್ ಅಜರ್ ಸೇರಿದಂತೆ ಇನ್ನೂ 6 ಮಂದಿ ತಲೆಮರೆಸಿಕೊಂಡಿದ್ದರು.

ಇದಕ್ಕೆ ಪ್ರತೀಕಾರವಾಗಿ ಫೆಬ್ರವರಿ 26ರಂದು, ಭಾರತೀಯ ವಾಯುಪಡೆಯ 12 ಮಿರಾಜ್ 2000 ಜೆಟ್‌ಗಳು ಗಡಿ ನಿಯಂತ್ರಣ ರೇಖೆಯನ್ನು (ಎಲ್‌ಒಸಿ) ದಾಟಿ ಪಾಕಿಸ್ತಾನದ ಬಾಲಾಕೋಟ್‌ಗೆ ಬಾಂಬ್‌ಗಳನ್ನು ಹಾಕಿದವು. ಭಾರತವು ಜೈಶ್-ಎ-ಮೊಹಮ್ಮದ್ ತರಬೇತಿ ಶಿಬಿರದ ಮೇಲೆ ದಾಳಿ ಮಾಡಿ 300ಕ್ಕೂ ಹೆಚ್ಚಿನ ಸಂಖ್ಯೆಯ ಭಯೋತ್ಪಾದಕರನ್ನು ಕೊಂದಿರುವುದಾಗಿ ಹೇಳಿಕೊಂಡಿತ್ತು.

ಪಾಕಿಸ್ತಾನದ ಮಿಲಿಟರಿ ಫೆಬ್ರವರಿ 26ರ ಬೆಳಿಗ್ಗೆ ವಾಯುದಾಳಿಯನ್ನು ಮೊದಲು ಘೋಷಿಸಿತು. ಮರುದಿನ ಫೆಬ್ರವರಿ 27 ರಂದು ಪಾಕಿಸ್ತಾನವು ಭಾರತದ ಯುದ್ಧ ವಿಮಾನವನ್ನು ಹೊಡೆದುರುಳಿಸಿತು. ಇಮ್ರಾನ್ ಖಾನ್ ನೇತೃತ್ವದ ಪಾಕ್ ದೇಶವು ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು 60 ಗಂಟೆಗಳ ಕಾಲ ವಶಪಡಿಸಿಕೊಂಡಿತ್ತು. ಅಭಿನಂದನ್ ವರ್ಧಮಾನ್ ಅವರಿಗೆ ಆಗಸ್ಟ್ 2019ರಲ್ಲಿ ವೀರ ಚಕ್ರ ಶೌರ್ಯ ಪ್ರಶಸ್ತಿಯನ್ನು ನೀಡಲಾಯಿತು.

ಅದಾದ 1 ವರ್ಷದೊಳಗೆ ಭಯೋತ್ಪಾದಕ ದಾಳಿಯ ಹಿಂದಿನ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಗುಂಪಿನ ಸ್ವಯಂಘೋಷಿತ ಮುಖ್ಯಸ್ಥ ಕ್ವಾರಿ ಯಾಸಿರ್ ಸೇರಿದಂತೆ ಬಹುತೇಕ ಎಲ್ಲಾ ಸಂಚುಕೋರರು ಕೊಲ್ಲಲ್ಪಟ್ಟರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ