ಗಾಂಧಿನಗರ: ಸುಮಾರು 10 ವರ್ಷಗಳಿಂದ ಮನೆಯೊಳಗೇ ಬಂಧಿಯಾಗಿದ್ದ ಮೂವರು ಸಹೋದರರನ್ನು ಗುಜರಾತ್ನ ರಾಜ್ಕೋಟ್ನಲ್ಲಿ ರಕ್ಷಿಸಲಾಗಿದೆ. 34 ರಿಂದ 42 ವರ್ಷ ವಯಸ್ಸಿನ ಮೂವರು, ಕಳೆದ ಒಂದು ದಶಕದಿಂದ ಮನೆಯೊಳಗೆ ಸ್ವ ಇಚ್ಛೆಯಿಂದ ಬಂಧಿಯಾಗಿದ್ದರು ಎಂದು ಹೇಳಲಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಯ ಮರಣದ ನಂತರ ಇಬ್ಬರು ಹುಡುಗರು ಮತ್ತು ಒಬ್ಬ ಹುಡುಗಿ (ಒಟ್ಟು ಮೂವರು ಒಡಹುಟ್ಟಿದವರು) ಹೀಗೆ ಮಾಡಿದ್ದಾರೆ.
ಸಾಥಿ ಸೇವಾ ಗ್ರೂಪ್ನ ಜಲ್ಪಾ ಪಟೇಲ್ ಎಂಬವರ ನೇತೃತ್ವದಲ್ಲಿ ಸ್ವಯಂಸೇವಕರ ತಂಡವೊಂದು ಮೂವರನ್ನೂ ಈಗ ರಕ್ಷಣೆ ಮಾಡಿದೆ. ಭಾನುವಾರ, ಅವರ ಮನೆಯ ಕೋಣೆಯ ಬಾಗಿಲನ್ನು ಮುರಿದು, ಒಳಗೆ ಪ್ರವೇಶಿಸಿ ರಕ್ಷಣಾ ಕಾರ್ಯ ಮಾಡಲಾಗಿದೆ. ಅವರ ತಂದೆ, ನವೀನ್ ಮೆಹ್ತಾ (80) ಕರೆಗೆ ಈ ಒಡಹುಟ್ಟಿದವರು ಪ್ರತಿಕ್ರಿಯಿಸುವುದನ್ನು ನಿಲ್ಲಿಸಿದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ.
ಸ್ವಯಂಸೇವಕರ ಹೇಳಿಕೆಯಂತೆ ಒಬ್ಬಾತ ಮನೆಯೊಳಗೆ ನೆಲದ ಮೇಲೆ ಪತ್ರಿಕೆ, ಚಿಂದಿ ರಾಶಿಯ ಮೇಲೆ ಬಿದ್ದುಕೊಂಡಿದ್ದ. ಮತ್ತೊಬ್ಬ ಮನೆಯೊಳಗೆ ಕಸದ ರಾಶಿಯ ಪಕ್ಕ ನಿಂತುಕೊಂಡಿದ್ದ. ಅವರ ಜೊತೆಗಿದ್ದ ಸಹೋದರಿ ಮಾತ್ರ ಮೈಮೇಲೆ ಬಟ್ಟೆ ತೊಟ್ಟುಕೊಂಡಿದ್ದಳು. ಈ ರಕ್ಷಣಾ ಕಾರ್ಯಾಚರಣೆ ವೇಳೆ ಸ್ವಯಂಸೇವಕರ ಜೊತೆಗಿದ್ದ ಮೂವರು ಒಡಹುಟ್ಟಿದವರ ತಂದೆ ನವೀನ್ ಮೆಹ್ತಾ ಅವರು ತಮ್ಮ ಮಕ್ಕಳನ್ನು ಅಂಬ್ರೀಶ್, ಭವೇಶ್ ಹಾಗೂ ಮೇಘ್ನಾ ಎಂದು ಗುರುತಿಸಿದ್ದಾರೆ.
ಮೂವರೂ ಪದವೀಧರರು!
ತಂದೆ ಮೆಹ್ತಾ ಹೇಳುವಂತೆ ಮೂವರೂ ಕೂಡ ಎಂಟು ಹತ್ತು ವರ್ಷಗಳ ಹಿಂದೆ ಅವರ ತಾಯಿ ತೀರಿಹೋದ ಬಳಿಕ ಮನೆಯೊಳಗೆ ಬಂಧನ ಮಾಡಿಕೊಂಡಿದ್ದರು. ಹಲವಾರು ಬಾರಿ ಹೊರ ಕರೆದರೂ ಮಕ್ಕಳು ಮನೆಯೊಳಗೆ ಸ್ವಬಂಧನ ಮಾಡಿಕೊಂಡರು ಎಂದು ಹೇಳಿದ್ದಾರೆ. ಗೃಹಬಂಧನದಲ್ಲಿದ್ದ ಅಂಬ್ರೀಶ್ ಬಿಎ ಎಲ್ಎಲ್ಬಿ, ಭವೇಶ್ ಎಕನಾಮಿಕ್ಸ್ ಹಾಗೂ ಮೇಘ್ನಾ ಸೈಕಾಲಜಿ ಪದವೀಧರೆ ಎಂದೂ ಮೆಹ್ತಾ ಹೇಳಿದ್ದಾರೆ.
ಸಾಥಿ ಸೇವಾ ಸಂಘದ ಸ್ವಯಂಸೇವಕರ ಮಾಹಿತಿಯಂತೆ, ಅಂಬ್ರೀಶ್ (42), ಮೇಘ್ನಾ (39) ಬಹಳ ಕೃಷರಾಗಿದ್ದರು. ಭವೇಶ್ ಉಳಿದಿಬ್ಬರಿಗೆ ಹೋಲಿಕೆ ಮಾಡಿದರೆ ಉತ್ತಮ ದೈಹಿಕ ಸ್ಥಿತಿಯಲ್ಲಿದ್ದರು. ಮೇಘ್ನಾ ಮನೆಯಿಂದ ಹೊರ ಬಂದ ತಕ್ಷಣ ಊಟ ಬೇಕೆಂದು ಕೇಳುತ್ತಿದ್ದರು. ಭವೇಶ್ ಮಾತೇ ಆಡುತ್ತಿರಲಿಲ್ಲ.
ಮೂವರು ಸಹೋದರರಿಗೆ ಊಟ ಕೊಡುತ್ತಿದ್ದವರು ಯಾರು?
ಅವರ ತಂದೆ ಮೆಹ್ತಾ ನಿವೃತ್ತ ಸರ್ಕಾರಿ ಉದ್ಯೋಗಿಯಾಗಿದ್ದಾರೆ. ಸದ್ಯ 34 ಸಾವಿರ ರೂಪಾಯಿಗಳಷ್ಟು ಮಾಸಿಕ ಪೆನ್ಶನ್ ಪಡೆದುಕೊಳ್ಳುತ್ತಿದ್ದಾರೆ. ಮೆಹ್ತಾ ತಂಗಿ ಅಲ್ಲೇ ಸಮೀಪದ ಊರಿನಲ್ಲಿ ನೆಲೆಸಿದ್ದಾರೆ. ‘ತಂಗಿಯ ಮನೆಯಿಂದ ಬುತ್ತಿಯಲ್ಲಿ ಊಟ ತಂದು ಮಕ್ಕಳಿಗೆ ಕೊಡುತ್ತಿದ್ದೆ. ಮನೆಯ ಹೊರಗೆ ಊಟ ಇಟ್ಟು ಹೋಗುತ್ತಿದೆ. ಐದು ಕೋಣೆಗಳಿರುವ ಅದೇ ಮನೆಯಲ್ಲಿ ನಾನೂ ನೆಲೆಸಿದ್ದೆ’ ಎಂದು ಮೆಹ್ತಾ ಹೇಳಿದ್ದಾರೆ. ಆದರೆ ಸಾಥಿ ಗ್ರೂಪ್ನವರು ಮನೆಯಲ್ಲಿ ಮೆಹ್ತಾರಿಗೆ ಸಂಬಂಧಿಸಿದ ಯಾವ ವಸ್ತುಗಳೂ ಸಿಕ್ಕಿಲ್ಲ ಎಂದಿದ್ದಾರೆ.
ಅಂಬ್ರೀಶ್ ಕೆಲ ಸಮಯಗಳ ಹಿಂದೆ ಮಾನಸಿಕವಾಗಿ ಕುಗ್ಗಿ ಹೋಗಿದ್ದ. ಕೈಗೆ ಸಿಕ್ಕಿದ್ದನ್ನು ಮನೆಗೆ ಬಂದವರ ಮೇಲೆ ಎಸೆಯುತ್ತಿದ್ದ ಎಂದು ಸ್ಥಳೀಯರು ಹೇಳಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ಮನೆಯಲ್ಲಿ ಯಾರೋ ವಾಸವಿದ್ದಾರೆ ಎಂದು ಹೇಳುವುದೇ ಅನುಮಾನವಾಗಿತ್ತು ಎಂದು ಹೇಳಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸೋಶಿಯಲ್ ಡಿಫೆನ್ಸ್ ಅಧಿಕಾರಿ (SDO) ಮೆಹುಲ್ ಗೋಸ್ವಾಮಿ ಅವರು ಮಕ್ಕಳನ್ನು ತಂದೆ ಬಂಧಿಸಿ ಇಟ್ಟಿಲ್ಲ. ಬದಲಾಗಿ, ಸಹೋದರರು ತಮಗೆ ತಾವೇ ಗೃಹಬಂಧನ ಹೇರಿಕೊಂಡಿದ್ದರು. ದೀರ್ಘಕಾಲದ ವರೆಗೆ ಮನೆಯೊಳಗಿದ್ದು ಮಾನಸಿಕವಾಗಿ ದುರ್ಬಲರಾಗಿದ್ದರು. Schizophrenia ಗೆ ಒಳಗಾಗಿದ್ದರು ಎಂದಿದ್ದಾರೆ.
ಇದೀಗ ಮೂವರನ್ನು ರಕ್ಷಿಸಿ ಕ್ಷೌರ ಮಾಡಿಸಿ, ಹೊಸ ಬಟ್ಟೆ ತೊಡಿಸಿ ಮೆಹ್ತಾ ತಂಗಿಯ ಮನೆಯಲ್ಲಿ ಕಾಪಾಡಲಾಗಿದೆ. ಮೂವರಿಗೂ ಬೇಕಾದ ಚಿಕಿತ್ಸೆ ನೀಡಿ ನೋಡಿಕೊಳ್ಳಲಾಗುತ್ತಿದೆ. ಈ ಘಟನೆಯ ಹಿಂದಿನ ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿಯಬೇಕಿದೆ. ಸೋಶಿಯಲ್ ಡಿಫೆನ್ಸ್ ಅಧಿಕಾರಿ (SDO) ಮೆಹುಲ್ ಗೋಸ್ವಾಮಿ ರಕ್ಷಣಾ ಕಾರ್ಯ ನಡೆದಿರುವುದನ್ನು ಖಚಿತಪಡಿಸಿದ್ದಾರೆ.
Published On - 2:23 pm, Tue, 29 December 20