ರಾಜಕೀಯಕ್ಕೆ ಗುಡ್ಬೈ ಹೇಳಿದ ರಜನಿಕಾಂತ್! ‘ರಾಜಕೀಯಕ್ಕೆ ಇಳಿಯದೆಯೂ ನಾನು ಜನರ ಸೇವೆ ಮಾಡಬಲ್ಲೆ..’
ಪ್ರವೇಶಕ್ಕೂ ಮೊದಲೇ ರಾಜಕಾರಣದಿಂದ ಹಿಂದೆ ಸರಿದ ರಜನಿಕಾಂತ್..
ಚೆನ್ನೈ: ತಮಿಳುನಾಡು ರಾಜಕಾರಣದಲ್ಲಿ ಹೊಸ ಅಧ್ಯಾಯ ಆರಂಭಿಸುವ ಮುನ್ಸೂಚನೆ ನೀಡಿದ್ದ ಸೂಪರ್ಸ್ಟಾರ್ ರಜನಿಕಾಂತ್ ಆರಂಭಕ್ಕೂ ಮುನ್ನವೇ ರಾಜಕೀಯಕ್ಕೆ ಬೆನ್ನು ಹಾಕಿದ್ದಾರೆ. ಈ ಕುರಿತು ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿರುವ ರಜನಿ ಸದ್ಯಕ್ಕೆ ರಾಜಕೀಯ ಪ್ರವೇಶ ಇಲ್ಲ ಎಂದು ಹೇಳಿದ್ದಾರೆ.
ಇತ್ತೀಚೆಗೆ ಶೂಟಿಂಗ್ನಲ್ಲಿ ಪಾಲ್ಗೊಂಡಿದ್ದ ರಜನಿಕಾಂತ್ಗೆ ಆರೋಗ್ಯದಲ್ಲಿ ಏರುಪೇರಾಗಿ ಹೈದರಾಬಾದ್ನ ಆಸ್ಪತ್ರೆಗೆ ದಾಖಲಾಗಿದ್ದರು. ಎರಡು ದಿನಗಳ ಬಳಿಕ ಡಿಸ್ಚಾರ್ಜ್ ಆಗಿ, ಸದ್ಯ ವಿಶ್ರಾಂತಿಯಲ್ಲಿದ್ದಾರೆ. ಇದೀಗ ತಮ್ಮ ಆರೋಗ್ಯದ ಕಡೆಗೆ ಗಮನಹರಿಸಬೇಕು ಎಂಬ ಕಾರಣಕ್ಕೆ ರಾಜಕೀಯದಿಂದ ದೂರವೇ ಉಳಿಯುತ್ತೇನೆ ಎಂದು ಸೂಪರ್ಸ್ಟಾರ್ ತಿಳಿಸಿದ್ದಾರೆ.
ರಜನಿಕಾಂತ್ ಇಂದು ಬೆಳಗ್ಗೆ ಟ್ವೀಟ್ ಮಾಡಿದ್ದು ಅದರ ಸಾರಾಂಶ ಇಲ್ಲಿದೆ
ಸದ್ಯ ನನಗೆ ಆರೋಗ್ಯದ ಕಡೆಗೆ ಗಮನಹರಿಸಬೇಕಾಗಿದೆ. ಈಗ ನನ್ನ ರಾಜಕೀಯ ಪಕ್ಷವನ್ನು ಅಧಿಕೃತವಾಗಿ ಹೊರತಂದರೂ ಮನೆಮನೆಗೆ ಹೋಗಿ ಪ್ರಚಾರ ಮಾಡಲು ಸಾಧ್ಯವಿಲ್ಲ. ಇನ್ನು ಅಧಿಕೃತವಾಗಿ ರಾಜಕೀಯ ಪ್ರವೇಶ ಮಾಡಿ ಆದ ಮೇಲೆ ಕೇವಲ ಸಾಮಾಜಿಕ ಮಾಧ್ಯಮ, ಮಾಧ್ಯಮಗಳ ಮೂಲಕ ಪ್ರಚಾರ ಮಾಡಿದರೆ, ರಾಜಕೀಯ ಕ್ರಾಂತಿಯನ್ನು ಸೃಷ್ಟಿಸಲು ಸಾಧ್ಯವಾಗುವುದಿಲ್ಲ.. ಮುಂಬರುವ ತಮಿಳುನಾಡು ಚುನಾವಣೆಯಲ್ಲಿ ಮಹತ್ವದ ಗೆಲುವು ಸಾಧಿಸಲೂ ಸಾಧ್ಯವಾಗುವುದಿಲ್ಲ. ಈ ವಾಸ್ತವವನ್ನು ರಾಜಕೀಯ ಅನುಭವ ಇರುವವರು ಒಪ್ಪಿಕೊಳ್ಳಲೇಬೇಕು..
ಚುನಾವಣಾ ರಾಜಕೀಯಕ್ಕೆ ಇಳಿಯದೆಯೂ ನಾನು ಜನರ ಸೇವೆ ಮಾಡಬಲ್ಲೆ. ನನಗೆ ಸತ್ಯವನ್ನು ಮಾತಾಡಲು ಎಂದಿಗೂ ಭಯವಿಲ್ಲ. ನನ್ನ ಸತ್ಯ ಮತ್ತು ಪಾರದರ್ಶಕತೆಯನ್ನು ಪ್ರೀತಿಸುವ, ಆರೋಗ್ಯದ ಬಗ್ಗೆ ಕಾಳಜಿ ಹೊಂದಿರುವ ನನ್ನೆಲ್ಲ ಅಭಿಮಾನಿಗಳಲ್ಲೂ ಈ ನಿರ್ಧಾರವನ್ನು ಸ್ವೀಕರಿಸುವಂತೆ ಮನವಿ ಮಾಡುತ್ತೇನೆ. ಹಾಗೇ ನನ್ನ ರಜಿನಿ ಮಕ್ಕಳ್ ಮಂದ್ರಮ್ ಇಷ್ಟು ದಿನಗಳಂತೆ ಕಾರ್ಯ ನಿರ್ವಹಿಸಲಿದೆ ಎಂದು ರಜಿನಿ ಇಂದಿನ ಹೇಳಿಕೆಯಲ್ಲಿ ತಿಳಿಸಿದ್ದಾರೆ.
— Rajinikanth (@rajinikanth) December 29, 2020
ಹೆಚ್ಚಿನ ಮಾಹಿತಿ ಸದ್ಯದಲ್ಲೇ ಲಭ್ಯ
ರಜನಿಕಾಂತ್ ಆರೋಗ್ಯ ಸ್ಥಿರ: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಸೂಪರ್ಸ್ಟಾರ್
Published On - 12:15 pm, Tue, 29 December 20