ಇತ್ತೀಚೆಗೆ ನಡೆದ ಟಿ 20 ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನದ ಎದುರು ಭಾರತ ಸೋತಿದ್ದು ಇಲ್ಲಿನ ಕ್ರಿಕೆಟ್ ಪ್ರೇಮಿಗಳಿಗೆ ತೀವ್ರ ಬೇಸರ ಉಂಟು ಮಾಡಿದೆ. ಭಾರತ-ಪಾಕಿಸ್ತಾನ ಕ್ರಿಕೆಟ್ (India Pakistan T20) ಪಂದ್ಯವೆಂದರೆ ಮೊದಲಿನಿಂದಲೂ ಅಲ್ಲೊಂದು ಪ್ರತಿಷ್ಠೆ ಇದ್ದೇ ಇರುತ್ತದೆ. ಅದನ್ನು ಹೆಚ್ಚಿನವರು ದ್ವೇಷದ ದೃಷ್ಟಿಯಿಂದಲೇ ನೋಡುತ್ತಾರೆ. ಅದರೊಂದಿಗೆ ಪಾಕಿಸ್ತಾನ(Pakistan)ದ ಗೆಲುವನ್ನು ಸಂಭ್ರಮಿಸುವವರೂ ಅಲ್ಲೊಬ್ಬರು, ಇಲ್ಲೊಬ್ಬರು ಸಿಗುತ್ತಾರೆ. ಹಾಗೇ ಈ ಬಾರಿ ಟಿ 20ಯಲ್ಲಿ ಪಾಕ್ ಗೆದ್ದಿದ್ದನ್ನು ಸಂಭ್ರಮಿಸಿದ ಮೂವರು ವಿದ್ಯಾರ್ಥಿಗಳನ್ನು ಉತ್ತರಪ್ರದೇಶದ ಆಗ್ರಾದಲ್ಲಿ ಬಂಧಿಸಲಾಗಿದೆ.
ಪಾಕಿಸ್ತಾನದ ಗೆಲುವನ್ನು ಸಂಭ್ರಮಿಸುವವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು ಮಾಡಲಾಗುವುದು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾಗಿ ಮುಖ್ಯಮಂತ್ರಿ ಕಚೇರಿ ಇಂದು ಬೆಳಗ್ಗೆ ಟ್ವೀಟ್ ಮಾಡಿದೆ. ಬಂಧಿತರಾದ ಮೂರು ವಿದ್ಯಾರ್ಥಿಗಳೂ ಕಾಶ್ಮೀರದವರೇ ಆಗಿದ್ದು, ರಾಜಾ ಬಲವಂತ್ ಸಿಂಗ್ ಕಾಲೇಜಿನಲ್ಲಿ ಇಂಜನಿಯರಿಂಗ್ ಓದುತ್ತಿದ್ದಾರೆ. ಬಂಧಿತರನ್ನು ಅರ್ಶೀದ್ ಯುಸುಫ್, ಇನಾಯತ್ ಅಲ್ತಫ್ ಶೇಖ್ ಮತ್ತು ಶೌಕತ್ ಅಹ್ಮದ್ ಗನೈ ಎಂದು ಗುರುತಿಸಲಾಗಿದೆ. ಇವರಲ್ಲಿ ಅರ್ಶೀದ್ ಮತ್ತು ಇನಾಯತ್ ಇಬ್ಬರೂ ಇಂಜನಿಯರಿಂಗ್ ಪದವಿ ಮೂರನೇ ವರ್ಷದಲ್ಲಿ, ಶೌಕತ್ ನಾಲ್ಕನೇ ವರ್ಷದಲ್ಲಿ ಓದುತ್ತಿದ್ದಾರೆ. ಧರ್ಮದ ಆಧಾರದ ಮೇಲೆ ಗುಂಪುಗಳ ನಡುವೆ ವೈರತ್ವ ಮತ್ತು ಸೈಬರ್ ಭಯೋತ್ಪಾದನೆಯನ್ನು ಉತ್ತೇಜಿಸಿದ ಆರೋಪದಡಿ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ.
ಸದ್ಯ ಕಾಲೇಜು ಮೂವರು ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿದೆ. ಅವರು ಪಾಕಿಸ್ತಾನ ಪರ ಸ್ಟೇಟಸ್ ಹಾಕುತ್ತಿದ್ದು, ಅಶಿಸ್ತಿನ ವರ್ತನೆ ತೋರಿಸುತ್ತಿದ್ದುದು ಬೆಳಕಿಗೆ ಬಂದ ನಂತರ ಅವರನ್ನು ಅಮಾನತುಗೊಳಿಸಿಸಲಾಗಿದೆ ಎಂದು ಕಾಲೇಜು ತಿಳಿಸಿದೆ. ಇವರ ಹೊರತಾಗಿ, ಕ್ರಿಕೆಟ್ ಪಂದ್ಯಕ್ಕೆ ಸಂಬಂಧಪಟ್ಟ ಪ್ರಕರಣದಲ್ಲಿ ಲಖನೌದಿಂದ ಮೂವರನ್ನು, ಬರೇಲಿಯಲ್ಲಿ ಒಬ್ಬನನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ನೀಡುವ ಹಾಸನಾಂಬೆ ದೇವಸ್ಥಾನದ ಬಾಗಿಲು ಓಪನ್, ನಾಳೆಯಿಂದ ಭಕ್ತರಿಗೆ ದರ್ಶನ ಭಾಗ್ಯ