ಬಿಹಾರದ ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ; 4 ಜನ ಸಾವು, ಮುಂದುವರಿದ ರಕ್ಷಣಾ ಕಾರ್ಯಾಚರಣೆ
ಬಿಹಾರದ ಸೀವನ್ ಜಿಲ್ಲೆಯಲ್ಲಿರುವ ಅಕ್ರಮ ಪಟಾಕಿ ತಯಾರಿಕಾ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಭೀಕರ ಸ್ಪೋಟದಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ದುರ್ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಅವಶೇಷಗಳ ಅಡಿಯಲ್ಲಿ ಇನ್ನಷ್ಟು ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗುತ್ತಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕ ಎದುರಾಗಿದೆ. ಪಟಾಕಿ ತಯಾರಿಸಲು ಸಂಗ್ರಹಿಸಿಟ್ಟಿದ್ದ ರಾಸಾಯನಿಕ ಹಾಗೂ ಕಚ್ಚಾ ವಸ್ತುಗಳಲ್ಲಿ ಉಂಟಾದ ಅನಿರೀಕ್ಷಿತ ಸ್ಪೋಟದಿಂದಾಗಿ ಕಾರ್ಖಾನೆಯ ಕಟ್ಟಡ ಸಂಪೂರ್ಣವಾಗಿ ಕುಸಿದುಬಿದ್ದಿದೆ. ಸ್ಫೋಟದ ತೀವ್ರತೆಗೆ ಸುತ್ತಮುತ್ತಲಿನ ಮನೆಗಳಿಗೂ ಹಾನಿಯಾಗಿದೆ.

ಪಾಟ್ನಾ, ಅಕ್ಟೋಬರ್ 23: ಬಿಹಾರದ ಸೀವನ್ ಜಿಲ್ಲೆಯಲ್ಲಿ ಪಟಾಕಿ ತಯಾರಿಸುತ್ತಿದ್ದ ಮನೆಯೊಂದರಲ್ಲಿ ಇಂದು ಸಂಜೆ ಸಂಭವಿಸಿದ ಪಟಾಕಿ ಸ್ಫೋಟದಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬರ್ಹರಿಯಾ ಬ್ಲಾಕ್‌ನ ಜಾಮೊ ಪೊಲೀಸ್ ಠಾಣೆ ವ್ಯಾಪ್ತಿಯ ಅಲಂಪುರ್ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ. ಇಂದು ಸಂಜೆ 5.20ರ ಸುಮಾರಿಗೆ ಸ್ಫೋಟದ ಬಗ್ಗೆ ಮಾಹಿತಿ ಲಭಿಸಿದೆ. ಸ್ಫೋಟ ಸಂಭವಿಸಿದ ಮನೆಯಲ್ಲಿ 7 ಮಂದಿ ಇದ್ದರು. ಉಳಿದವರಿಗಾಗಿ ರಕ್ಷಣಾ ತಂಡಗಳು ಶೋಧ ಮುಂದುವರಿಸಿವೆ.
72 ವರ್ಷ ವಯಸ್ಸಿನ ಅಮ್ರುದ್ದೀನ್ ಎಂಬುವವರಿಗೆ ಸೇರಿದ ಮನೆಯಲ್ಲಿ ಈ ದುರಂತ ಸಂಭವಿಸಿದ್ದು, ಮೃತರು ಆತನ ಕುಟುಂಬದ ಸದಸ್ಯರು ಎಂದು ಗುರುತಿಸಲಾಗಿದೆ. ಈ ಘಟನೆಯಿಂದ ಗ್ರಾಮದಲ್ಲಿ ಭೀತಿ ಆವರಿಸಿದ್ದು, ಜನಸ್ತೋಮ ಸ್ಥಳದಲ್ಲಿ ಜಮಾಯಿಸಿತ್ತು. ಆದರೆ ಸ್ಥಳದಲ್ಲಿ ಆಗಾಗ ಸಣ್ಣಪುಟ್ಟ ಸ್ಫೋಟಗಳು ಮುಂದುವರಿದಿದ್ದರಿಂದ ರಕ್ಷಣಾ ಮತ್ತು ಪರಿಹಾರ ಕಾರ್ಯಗಳಿಗೆ ತೀವ್ರ ಅಡ್ಡಿಯಾಯಿತು. ಪೊಲೀಸರು ಸ್ಥಳವನ್ನು ಸುತ್ತುವರೆದು, ಜನರನ್ನು ಸುಮಾರು 200 ಮೀಟರ್ ದೂರದಲ್ಲಿರುವಂತೆ ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಭೀಕರ ಕೃತ್ಯ; ಕಾರಿನಿಂದ ಬೆನ್ನಟ್ಟಿ, ಕಬ್ಬಿಣದ ರಾಡ್‌ನಿಂದ ಹೊಡೆದು ವ್ಯಕ್ತಿಯ ದಾರುಣ ಹತ್ಯೆ
ಸ್ಥಳಕ್ಕೆ ಧಾವಿಸಿರುವ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯವನ್ನು ಮುಂದುವರಿಸಿದ್ದಾರೆ. ಜೆಸಿಬಿ ಮೂಲಕ ಅವಶೇಷಗಳನ್ನು ತೆರವುಗೊಳಿಸಿ, ಸಿಲುಕಿರುವವರನ್ನು ಹೊರತೆಗೆಯುವ ಪ್ರಯತ್ನಗಳು ಭರದಿಂದ ಸಾಗುತ್ತಿವೆ. ಗಾಯಗೊಂಡಿರುವವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
🚨 TRAGIC! At least 7 feared DEAD in a massive EXPLOSION at an ILLEGAL firecracker manufacturing unit inside a house in Alampur village, Siwan (Bihar).
The severe impact caused the building to collapse, with intermittent blasts continuing for hours.
Rescue teams and senior police officials are on the scene. #Alampur #Siwan #Bihar #Tragic #Illegal #Firecracker
— Priyanka Kanade (@1Hindu_Sanatani) October 23, 2026
ಜನವಸತಿ ಪ್ರದೇಶದ ಬಳಿ ಈ ಅಕ್ರಮ ಪಟಾಕಿ ಘಟಕವು ಯಾವುದೇ ಸುರಕ್ಷತಾ ಮಾನದಂಡಗಳಿಲ್ಲದೆ ಕಾರ್ಯಾಚರಿಸುತ್ತಿತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
