ಮಹಾರಾಷ್ಟ್ರದಲ್ಲಿ ಭೀಕರ ಕೃತ್ಯ; ಕಾರಿನಿಂದ ಬೆನ್ನಟ್ಟಿ, ಕಬ್ಬಿಣದ ರಾಡ್‌ನಿಂದ ಹೊಡೆದು ವ್ಯಕ್ತಿಯ ದಾರುಣ ಹತ್ಯೆ
ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ಜನನಿಬಿಡ ರಸ್ತೆಯಲ್ಲಿ ದಿನದ ಬೆಳಕಿನಲ್ಲೇ ವ್ಯಕ್ತಿಯೊಬ್ಬರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಮೊದಲು ಕಾರಿನಿಂದ ಸ್ಕೂಟರ್‌ಗೆ ಗುದ್ದಿಸಿ ಕೆಡವಿ, ಬಳಿಕ ಹಾಕಿ ಸ್ಟಿಕ್ ಮತ್ತು ಕಬ್ಬಿಣದ ರಾಡ್‌ನಿಂದ ತಲೆ ಹಾಗೂ ಮುಖಕ್ಕೆ ಮನಬಂದಂತೆ ಹೊಡೆದು ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ. ಈ ಕೃತ್ಯದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಜಿಮ್ ಮುಗಿಸಿ ಬೈಕ್‌ನಲ್ಲಿ ಮರಳುತ್ತಿದ್ದ ದೇವೇಶ್ ಅಲಿಯಾಸ್ ಬಂಟಿ ದೀಕ್ಷಿತ್ ಹತ್ಯೆಗೊಳಗಾದ ದುರ್ದೈವಿ. ದೇವೇಶ್ ದೀಕ್ಷಿತ್ ಜಿಮ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದಾಗ, ಪವನ್ ಪರಾಶರ ಎಂಬಾತ ತನ್ನ ಕಾರಿನಿಂದ ಹಿಂದಿನಿಂದ ಬೈಕಿಗೆ ಡಿಕ್ಕಿ ಹೊಡೆದಿದ್ದಾನೆ.

ಮುಂಬೈ, ಅಕ್ಟೋಬರ್ 23: ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ ಸಿಡ್ಕೊ ಎನ್-7 ಪ್ರದೇಶದ ಬಜರಂಗ ಚೌಕ್ ಬಳಿ ಜನನಿಬಿಡ ರಸ್ತೆಯಲ್ಲೇ ಭೀಕರ ಹತ್ಯೆಯೊಂದು ನಡೆದಿದ್ದು, ಇದರ ನಡುಕ ಹುಟ್ಟಿಸುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಜಿಮ್ ಮುಗಿಸಿ ತಮ್ಮ ಸ್ಕೂಟರ್‌ನಲ್ಲಿ ಮನೆಗೆ ಮರಳುತ್ತಿದ್ದ ದೇವೇಶ್ ಅಲಿಯಾಸ್ ಬಂಟಿ ದೀಕ್ಷಿತ್ ಎಂಬುವವರನ್ನು ಆರೋಪಿ ಪವನ್ ಪರಾಶರ ಎಂಬಾತ ಕಾರಿನಲ್ಲಿ ಬೆನ್ನಟ್ಟಿಕೊಂಡು ಬಂದು, ಹಿಂದಿನಿಂದ ಭೀಕರವಾಗಿ ಡಿಕ್ಕಿ ಹೊಡೆದಿದ್ದಾನೆ.
ಡಿಕ್ಕಿಯ ರಭಸಕ್ಕೆ ದೇವೇಶ್ ಸ್ಕೂಟರ್‌ನಿಂದ ಬಿದ್ದು ರಸ್ತೆಗೆ ಉರುಳಿದ್ದಾರೆ. ತಕ್ಷಣವೇ ಕಾರಿನಿಂದ ಕೆಳಗಿಳಿದ ಆರೋಪಿ ಪವನ್ ಪರಾಶರ ತನ್ನ ಕೈಯಲ್ಲಿದ್ದ ಹಾಕಿ ಸ್ಟಿಕ್ ಮತ್ತು ಕಬ್ಬಿಣದ ರಾಡ್‌ನಿಂದ ದೇವೇಶ್ ಅವರ ತಲೆ ಹಾಗೂ ಮುಖಕ್ಕೆ ತೀವ್ರವಾಗಿ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡ ದೇವೇಶ್ ರಕ್ತದ ಮಡುವಿನಲ್ಲಿ ಸ್ಥಳದಲ್ಲೇ ಅಂತಿಮ ಉಸಿರೆಳೆದಿದ್ದಾರೆ.
ಇದನ್ನೂ ಓದಿ: ಮಣಿಪುರದಲ್ಲಿ ಮತ್ತೆ ಹಿಂಸಾಚಾರ; ಇಬ್ಬರ ಹತ್ಯೆ ಖಂಡಿಸಿ ಮುಖ್ಯಮಂತ್ರಿ ಮನೆಯೆದುರೇ ಶವವಿಟ್ಟು ಪ್ರತಿಭಟನೆ
ಈ ದಾರುಣ ಕೃತ್ಯ ಎಸಗಿದ ಬಳಿಕ ಆರೋಪಿ ಪವನ್ ಪರಾಶರ ನೇರವಾಗಿ ಸಿಡ್ಕೊ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಪೊಲೀಸರು ಕೃತ್ಯಕ್ಕೆ ಬಳಸಿದ ಕಾರು ಹಾಗೂ ದಾಳಿಗೆ ಬಳಸಿದ್ದ ಕಬ್ಬಿಣದ ರಾಡ್ ಅನ್ನು ವಶಕ್ಕೆ ಪಡೆದಿದ್ದಾರೆ. ಮೃತ ದೇವೇಶ್ ದೀಕ್ಷಿತ್ ಮೆಸ್ ನಡೆಸುತ್ತಿದ್ದರು ಹಾಗೂ ರಿಯಲ್ ಎಸ್ಟೇಟ್ ಉದ್ಯಮದಲ್ಲೂ ತೊಡಗಿಸಿಕೊಂಡಿದ್ದರು. ಆರೋಪಿ ಮತ್ತು ಮೃತನ ನಡುವೆ ಹಳೆಯ ವೈಷಮ್ಯ ಹಾಗೂ ವ್ಯವಹಾರಿಕ ವಿವಾದಗಳಿದ್ದವು ಎಂದು ಹೇಳಲಾಗಿದ್ದು, ಈ ಕುರಿತು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




