ರೈಲಿನಲ್ಲಿ ಹೊಗೆಯೇಳುತ್ತಿದೆ ಎಂದು ಭಯಗೊಂಡು ಇಳಿದ ಪ್ರಯಾಣಿಕರಿಗೆ ಮತ್ತೊಂದು ಟ್ರೇನ್​​ ಡಿಕ್ಕಿ; ಐವರ ದುರ್ಮರಣ

| Updated By: Lakshmi Hegde

Updated on: Apr 12, 2022 | 9:41 AM

ಮೃತಪಟ್ಟ ಎಲ್ಲರ ಗುರುತೂ ಇನ್ನೂ ಪತ್ತೆಯಾಗಿಲ್ಲ. ಇಬ್ಬರು ಅಸ್ಸಾಂನವರು ಎಂದು ಹೇಳಲಾಗಿದೆ. ಉಳಿದವರು ಯಾರು ಎಂಬುದನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ.

ರೈಲಿನಲ್ಲಿ ಹೊಗೆಯೇಳುತ್ತಿದೆ ಎಂದು ಭಯಗೊಂಡು ಇಳಿದ ಪ್ರಯಾಣಿಕರಿಗೆ ಮತ್ತೊಂದು ಟ್ರೇನ್​​ ಡಿಕ್ಕಿ; ಐವರ ದುರ್ಮರಣ
ಸಾಂದರ್ಭಿಕ ಚಿತ್ರ
Follow us on

ಎಕ್ಸ್​ಪ್ರೆಸ್​ ರೈಲು ಡಿಕ್ಕಿ ಹೊಡೆದು ಐವರು ಮೃತಪಟ್ಟು, ಹಲವರು ಗಾಯಗೊಂಡ ದುರ್ಘಟನೆ ಆಂಧ್ರಪ್ರದೇಶದ ಶ್ರಿಕಾಕುಲಂ ಜಿಲ್ಲೆಯಲ್ಲಿ ಸೋಮವಾರ ರಾತ್ರಿ ನಡೆದಿದೆ.  ಸ್ಥಳಕ್ಕೆ ಪೊಲೀಸರು ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.  ಇದು ನಡೆದದ್ದು ಶ್ರೀಕಾಕುಲಂ ಜಿಲ್ಲೆಯ ಬಟುವಾ ಎಂಬ ಹಳ್ಳಿಯಲ್ಲಿ. ಸಿಕಂದರಾಬಾದ್​ ಮತ್ತು ಗುವಾಹಟಿ ಎಕ್ಸ್​ಪ್ರೆಸ್​ ರೈಲು ಈ ಪ್ರದೇಶಕ್ಕೆ ಬರುತ್ತಿದ್ದಂತೆ ಅದರಲ್ಲಿ ಹೊಗೆಯೇಳುತ್ತಿರುವುದನ್ನು ಒಂದಷ್ಟು ಪ್ರಯಾಣಿಕರು ಗಮನಿಸಿ, ಎಮರ್ಜನ್ಸಿ ಚೈನ್​ ಎಳೆದರು. ಆಗ ಈ ರೈಲು ನಿಂತಿತು. ಪ್ರಯಾಣಿಕರು ಅದರಿಂದ ಕೆಳಗೆ ಇಳಿದು ಅಲ್ಲೇ ಪಕ್ಕದ ಹಳಿ ಮೇಲೆ ನಿಂತಿದ್ದರು. ಅದೇ ವೇಳೆ ಮತ್ತೊಂದು ದಿಕ್ಕಿನಿಂದ ವೇಗವಾಗಿ ಬಂದ ಭುವನೇಶ್ವರ್​-ಮುಂಬೈ ರೈಲು (ಕೊನಾರ್ಕ್​ ಟ್ರೇನ್​) ಇವರಿಗೆ ಡಿಕ್ಕಿ ಹೊಡೆದಿದೆ. ಈ ರೈಲು ವಿಶಾಖಪಟ್ಟಣಕ್ಕೆ ಹೋಗುತ್ತಿತ್ತು ಎನ್ನಲಾಗಿದೆ.

ಮೃತಪಟ್ಟ ಎಲ್ಲರ ಗುರುತೂ ಇನ್ನೂ ಪತ್ತೆಯಾಗಿಲ್ಲ. ಇಬ್ಬರು ಅಸ್ಸಾಂನವರು ಎಂದು ಹೇಳಲಾಗಿದೆ. ಉಳಿದವರು ಯಾರು ಎಂಬುದನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ. ಗಾಯಗೊಂಡವರನ್ನು ಶ್ರೀಕಾಕುಲಂ ಜನರಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಾಗೇ ಮೃತದೇಹಗಳನ್ನು ಪೋಸ್ಟ್ ಮಾರ್ಟಮ್​ಗೆ ಕಳಿಸಲಾಗಿದೆ.

ಘಟನೆಯ ಬಗ್ಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್​ ಮೋಹನ್​ ರೆಡ್ಡಿಯವರಿಗೆ ವಿವರಣೆ ನೀಡಲಾಗಿದೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಕೊಡಲು ಎಲ್ಲ ರೀತಿಯ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.  2013ರಲ್ಲಿ ಒಂದು ಹೀಗಿದ್ದೇ ಘಟನೆ ನಡೆದಿತ್ತು. ಆಲಪ್ಪುಳ-ಧನಬಾದ್​ ರೈಲಿನ ಎಸ್​-1 ಕಂಪಾರ್ಟ್​ಮೆಂಟ್​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಸುಳ್ಳು ಸುದ್ದಿ ಹಬ್ಬಿತ್ತು. ಹೀಗಾಗಿ ಹೆದರಿದ ಪ್ರಯಾಣಿಕರು ಚೈನ್ ಎಳೆದು ರೈಲಿನಿಂದ ಇಳಿದು ಪಕ್ಕದ ಹಳಿಯಲ್ಲಿ ನಿಂತಿದ್ದಾಗ ಬೊಕಾರೊ ಎಕ್ಸ್​ಪ್ರೆಸ್ ಪ್ಯಾಸೆಂಜರ್​ ರೈಲು ಅವರಿಗೆ ಡಿಕ್ಕಿ ಹೊಡೆದಿತ್ತು. 9 ಮಂದಿ ಮೃತಪಟ್ಟಿದ್ದರು.

ಇದನ್ನೂ ಓದಿ: ನೀಳ ತಲೆಗೂದಲನ್ನು ಕತ್ತರಿಸಿ ಹೊಸ ಗೆಟಪ್​ನಲ್ಲಿ ಕಾಣಿಸಿಕೊಂಡ ಅನುಪಮಾ ಗೌಡ; ಇದಕ್ಕಿದೆ ಮಹತ್ತರ ಕಾರಣ

Published On - 9:29 am, Tue, 12 April 22