ತಮಿಳುನಾಡಿನ ಶಿವಕಾಶಿಯ ಪಟಾಕಿ ಕಾರ್ಖಾನೆಯಲ್ಲಿ ಭಾರಿ ಸ್ಫೋಟ; ಐವರು ಸಾವು, ಹಲವರಿಗೆ ಗಾಯ

ತಮಿಳುನಾಡಿನ ಶಿವಕಾಶಿಯಲ್ಲಿ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಐವರು ಸಾವನ್ನಪ್ಪಿದ್ದಾರೆ. ಪಟಾಕಿ ಕಾರ್ಖಾನೆಯಿಂದ ದಟ್ಟ ಹೊಗೆ ಮೇಲೇರುತ್ತಿರುವುದು ಕಂಡುಬಂದಿದ್ದು, ಕಾರ್ಖಾನೆಯ ಆವರಣದೊಳಗೆ ಪಟಾಕಿಗಳು ನಿರಂತರವಾಗಿ ಸಿಡಿಯುತ್ತಿವೆ. ತೀವ್ರವಾದ ಸುಟ್ಟ ಗಾಯಗಳಿಂದ ಬಳಲುತ್ತಿರುವ ಹಲವರನ್ನು ರಕ್ಷಿಸಿ, ಆಸ್ಪತ್ರೆಗೆ ಸೇರಿಸಲಾಗಿದೆ. ಸ್ಫೋಟಕ ರಾಸಾಯನಿಕಗಳನ್ನು ಸರಿಯಾಗಿ ನಿರ್ವಹಿಸದ ಕಾರಣದಿಂದ ಸ್ಫೋಟ ಸಂಭವಿಸಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ತಮಿಳುನಾಡಿನ ಶಿವಕಾಶಿಯ ಪಟಾಕಿ ಕಾರ್ಖಾನೆಯಲ್ಲಿ ಭಾರಿ ಸ್ಫೋಟ; ಐವರು ಸಾವು, ಹಲವರಿಗೆ ಗಾಯ
Sivakasi Firecracker Blast

Updated on: Jul 01, 2025 | 3:42 PM

ಶಿವಕಾಶಿ, ಜುಲೈ 1: ತಮಿಳುನಾಡಿನ ವಿರುಧುನಗರ ಜಿಲ್ಲೆಯ ಶಿವಕಾಶಿಯಲ್ಲಿರುವ ಚಿನ್ನಕ್ಕಂಪಟ್ಟಿಯಲ್ಲಿರುವ ಗೋಕುಲೇಶ್ ಪಟಾಕಿ ಕಾರ್ಖಾನೆಯಲ್ಲಿ ಇಂದು ಸಂಭವಿಸಿದ ಪ್ರಬಲ ಸ್ಫೋಟದಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಕನಿಷ್ಠ ಐದು ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಭೀಕರ ಬೆಂಕಿಯು ಘಟಕವನ್ನು ಸುಟ್ಟುಹಾಕಿ ಅನೇಕರು ಗಾಯಗೊಂಡಿದ್ದಾರೆ. ಕಾರ್ಖಾನೆಯಿಂದ ದಟ್ಟ ಹೊಗೆ ಮೇಲೇರುತ್ತಿರುವುದು ಕಂಡುಬಂದಿದ್ದು, ಆವರಣದೊಳಗೆ ಪಟಾಕಿಗಳು ನಿರಂತರವಾಗಿ ಸಿಡಿಯುತ್ತಿವೆ. ಈ ಸ್ಥಳಕ್ಕೆ ತಲುಪಿದ ಪೊಲೀಸರು ಮತ್ತು ಅಗ್ನಿಶಾಮಕ ಸೇವೆಗಳ ಸಿಬ್ಬಂದಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದರು.

ಇಂದು ಸಂಭವಿಸಿದ ಸ್ಫೋಟದಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ಕಟ್ಟಡದ ಅವಶೇಷಗಳನ್ನು ತೆರವುಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶಿವಕಾಶಿ ಬಳಿಯ ಚಿನ್ನಕಾಮನ್‌ಪಟ್ಟಿಯಲ್ಲಿರುವ ಖಾಸಗಿ ಪಟಾಕಿ ಉತ್ಪಾದನಾ ಘಟಕಕ್ಕೆ ಆಗಮಿಸಿದ ಕಂದಾಯ ಅಧಿಕಾರಿಗಳು ಮತ್ತು ಪೊಲೀಸರು ಈ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಗಾಯಾಳುಗಳನ್ನು ಶಿವಕಾಶಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ, ಅಲ್ಲಿ ಅವರು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಇದನ್ನೂ ಓದಿ: ಉತ್ತರ ಪ್ರದೇಶದ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; 4 ಮಹಿಳೆಯರು ಸಾವು, 6 ಮಂದಿಗೆ ಗಾಯ

ಗೋಕುಲೇಶ್ ಪಟಾಕಿ ಕಾರ್ಖಾನೆಯಲ್ಲಿ ಕಾರ್ಖಾನೆ ಕಾರ್ಮಿಕರು ದಿನನಿತ್ಯದ ಕೆಲಸದಲ್ಲಿ ತೊಡಗಿದ್ದಾಗ ಪ್ರಬಲ ಸ್ಫೋಟ ಸಂಭವಿಸಿದೆ. ಸ್ಫೋಟವು ಈ ಕಟ್ಟಡದ ಆವರಣದಲ್ಲಿರುವ ಹಲವಾರು ಕೊಠಡಿಗಳನ್ನು ನೆಲಸಮಗೊಳಿಸಿದೆ. ಶಿವಕಾಶಿ ಮತ್ತು ಸತ್ತೂರಿನ ಅಗ್ನಿಶಾಮಕ ಸೇವೆಗಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಮತ್ತು ನಿಯಂತ್ರಣ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.


ಸ್ಫೋಟಕ ರಾಸಾಯನಿಕಗಳನ್ನು ಸರಿಯಾಗಿ ನಿರ್ವಹಿಸದ ಕಾರಣದಿಂದ ಸ್ಫೋಟ ಸಂಭವಿಸಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಆದರೂ ಅದಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಈಗಾಗಲೇ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ವಿರುಧುನಗರ ಜಿಲ್ಲಾಡಳಿತ ಪರಿಹಾರ ಮತ್ತು ರಕ್ಷಣಾ ಕ್ರಮಗಳನ್ನು ಸಂಘಟಿಸುತ್ತಿದೆ. ಶಿವಕಾಶಿ ಈ ಹಿಂದೆ ಕೂಡ ಹಲವಾರು ದುರಂತ ಘಟನೆಗಳಿಗೆ ಸಾಕ್ಷಿಯಾಗಿದ್ದು, ಈ ಪ್ರದೇಶದ ಪಟಾಕಿ ಉತ್ಪಾದನಾ ಘಟಕಗಳಲ್ಲಿ ಸುರಕ್ಷತಾ ಪದ್ಧತಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ತಮಿಳುನಾಡಿನ ಶಿವಕಾಶಿ ಭಾರತದಲ್ಲಿ ಪಟಾಕಿ ಉದ್ಯಮದ ಕೇಂದ್ರವೆಂದು ವ್ಯಾಪಕವಾಗಿ ಪ್ರಸಿದ್ಧವಾಗಿದೆ. ಪಟಾಕಿ ಉತ್ಪಾದನೆಯ ಶೇ. 90ರಷ್ಟು ಇಲ್ಲಿಂದಲೇ ಬರುತ್ತದೆ. ಶಿವಕಾಶಿಯಲ್ಲಿ ಸುಮಾರು 8 ಸಾವಿರ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿದ್ದು, ಲಕ್ಷಾಂತರ ಜನರಿಗೆ ಉದ್ಯೋಗ ನೀಡುತ್ತಿವೆ.


ಇದನ್ನೂ ಓದಿ: ತಮಿಳುನಾಡಿನ ಶಿವಕಾಶಿಯ ಪಟಾಕಿ ಕಾರ್ಖಾನೆಯಲ್ಲಿ ಭಾರಿ ಸ್ಫೋಟ; 7 ಜನರಿಗೆ ಗಾಯ

ಕಳೆದ ವರ್ಷ, ಶಿವಕಾಶಿಯಲ್ಲಿ ಇದೇ ರೀತಿಯ ಸ್ಫೋಟ ಸಂಭವಿಸಿ 10 ಜನರು ಸಾವನ್ನಪ್ಪಿದರು. ತೆಲಂಗಾಣದ ಸಂಗರೆಡ್ಡಿ ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸಿದ ಭಾರಿ ಸ್ಫೋಟದಲ್ಲಿ ಇದುವರೆಗೆ 36 ಜನರು ಸಾವನ್ನಪ್ಪಿದ್ದಾರೆ. ಹೈದರಾಬಾದ್ ಬಳಿಯ ಕೈಗಾರಿಕಾ ಘಟಕದಲ್ಲಿ ಈ ಸ್ಫೋಟ ಸಂಭವಿಸಿದೆ. ಇತ್ತೀಚೆಗೆ ತೆಲಂಗಾಣದ ಪಶಮಿಲಾರಂನಲ್ಲಿರುವ ಸಿಗಾಚಿ ಕೆಮಿಕಲ್ ಇಂಡಸ್ಟ್ರಿಯಲ್ಲಿ ಸಂಭವಿಸಿದ ಸ್ಫೋಟದಲ್ಲಿ 35 ಜನರು ಸಾವನ್ನಪ್ಪಿದ್ದು, ಹಲವಾರು ಜನರು ಗಾಯಗೊಂಡಿದ್ದರು. ಪಶಮಿಲಾರಂನಲ್ಲಿರುವ ಸಿಗಾಚಿ ಇಂಡಸ್ಟ್ರೀಸ್‌ನ ಫಾರ್ಮಾ ಪ್ಲಾಂಟ್‌ನಲ್ಲಿ ಸಂಭವಿಸಿದ ಮಾರಕ ಅಪಘಾತವು ರಾಸಾಯನಿಕ ಕ್ರಿಯೆಯಿಂದ ಉಂಟಾಗಿದೆ ಎಂದು ಶಂಕಿಸಲಾಗಿದೆ. ಸ್ಫೋಟ ಸಂಭವಿಸಿದಾಗ ಸುಮಾರು 90 ಜನರು ಅಲ್ಲಿ ಕೆಲಸ ಮಾಡುತ್ತಿದ್ದರು. ಸಿಗಾಚಿ ಇಂಡಸ್ಟ್ರೀಸ್ ಲಿಮಿಟೆಡ್ ಔಷಧೀಯ ಕಂಪನಿಯಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 3:42 pm, Tue, 1 July 25