ಕೇರಳ: ರಾಜ್ಯದಲ್ಲಿ ಮತ್ತೆ 5 ಝಿಕಾ ವೈರಸ್ (Zika Virus) ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 28ಕ್ಕೆ ಏರಿಕೆಯಾಗಿದೆ. ಇದೀಗ ಝಿಕಾ ಸೋಂಕು ಕಾಣಿಸಿಕೊಂಡ ಎಲ್ಲರೂ ತಿರುವನಂತಪುರದವರೇ ಆಗಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್, ಇಂದು ಮತ್ತೆ ಐವರಲ್ಲಿ ಝಿಕಾ ವೈರಸ್ ಕಾಣಿಸಿಕೊಂಡಿದೆ. ಅದರಲ್ಲಿ ತಿರುವನಂತಪುರ (Thiruvananthapuram)ದ ಅನಾಯಾರದ ಇಬ್ಬರು, ಕುನ್ನುಕುಜಿ, ಪಾಟ್ಟೋಮ್ ಮತ್ತು ಈಸ್ಟ್ ಫೋರ್ಟ್ನ ತಲಾ ಒಬ್ಬರು ಇದ್ದಾರೆ. ಇದರೊಂದಿಗೆ ಕೇರಳದಲ್ಲಿ ಜಿಕಾ ವೈರಸ್ ಸೋಂಕಿತರ ಒಟ್ಟೂ ಸಂಖ್ಯೆ 28ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.
ಅನಾಯಾರದ ಮೂರು ಕಿಮಿ ಸುತ್ತಲಿನ ಪ್ರದೇಶದಲ್ಲೇ ಜಿಕಾ ವೈರಸ್ ಕಾಣಿಸಿಕೊಂಡಿದ್ದು, ಅದು ಬೇರೆ ಹೆಚ್ಚು ಪ್ರದೇಶಗಳಿಗೆ ಹರಡದಂತೆ ತಡೆಯಲು ಎಲ್ಲ ರೀತಿಯ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಸೊಳ್ಳೆಗಳನ್ನು ನಾಶ ಮಾಡಲು ಸ್ವಚ್ಛತಾ ಕ್ರಮ ತೆಗೆದುಕೊಳ್ಳಲಾಗಿದೆ ಎಂದೂ ವೀಣಾ ಹೇಳಿದ್ದಾರೆ.
ತಿರುವನಂತಪುರಂನಲ್ಲಿ ಝಿಕಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಇಲ್ಲಿನ ಜಿಲ್ಲಾ ಆರೋಗ್ಯ ಕೇಂದ್ರದಲ್ಲಿ ಒಂದು ನಿಯಂತ್ರಣಾ ಕೊಠಡಿ ತೆರೆಯಲಾಗಿದೆ. ಅದರ ಮೂಲಕ ಸೊಳ್ಳೆಗಳ ಮೊಟ್ಟೆ ನಾಶ ಮಾಡುವ, ಸೊಳ್ಳೆ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅದರೊದಿಗೆ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಏಪ್ರಿಲ್ನಲ್ಲೇ ಕಾಣಿಸಿಕೊಂಡಿರಬಹುದು
ಕೇರಳದಲ್ಲಿ ಈಗೀಗ ಝಿಕಾ ವೈರಸ್ನ ಪ್ರಕರಣಗಳು ಪತ್ತೆಯಾಗುತ್ತಿದ್ದರೂ ಅದು ಏಪ್ರಿಲ್ನಲ್ಲೇ ಶುರುವಾಗಿದೆ ಎಂದು ರಾಜ್ಯದ ಕೆಲವು ಆಸ್ಪತ್ರೆಗಳ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಏಪ್ರಿಲ್ನಲ್ಲಿ ಕೊರೊನಾ ಲಾಕ್ಡೌನ್ ಇದ್ದಿದ್ದರಿಂದ ಝಿಕಾ ವೈರಸ್ ತಪಾಸಣೆ ಸರಿಯಾಗಿ ಆಗಲಿಲ್ಲ. ವೈರಸ್ನ ಸೌಮ್ಯ ಲಕ್ಷಣಗಳು ಆಗಲೇ ಕಂಡುಬಂದಿದ್ದವು. ಜ್ವರ, ಕಣ್ಣು ಕೆಂಪಾಗುವುದು, ಮೈಮೇಲೆ ದದ್ದು ಏಳುವಂತ ಲಕ್ಷಣಗಳುಳ್ಳ ಜ್ವರ ಏಪ್ರಿಲ್ನಲ್ಲಿ ಹಲವರಿಗೆ ಬಂದಿದೆ. ಇದೆಲ್ಲ ಜಿಕಾದ ಲಕ್ಷಣಗಳೇ ಆಗಿವೆ ಎಂದು ಕಿಮ್ಸ್ಹೆಲ್ತ್ನ ಹಿರಿಯ ವೈದ್ಯ ಡಾ. ರಾಜಲಕ್ಷ್ಮೀ ತಿಳಿಸಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಒಂದಾದ ಹಾವು-ಮುಂಗುಸಿ; ಮಂಜುಗೆ ಪ್ರೀತಿಯಿಂದ ಕೈ ತುತ್ತು ತಿನ್ನಿಸಿದ ಪ್ರಶಾಂತ್