Murder News: ಹೆಂಗಸನ್ನು ಕೊಂದು, ಕತ್ತರಿಸಿ ಸೂಟ್ಕೇಸ್ನಲ್ಲಿ ಸಾಗಿಸಿದ ಹಂತಕರು; ಫ್ರಿಜ್ನಿಂದ ಬಯಲಾಯ್ತು ಕೊಲೆ ರಹಸ್ಯ!
Crime News Today: ಕೊಲೆಗಾರ ಎಷ್ಟೇ ಬುದ್ಧಿವಂತನಾದರೂ ಒಂದಾದರೂ ಸುಳಿವನ್ನು ಬಿಟ್ಟು ಹೋಗಿರುತ್ತಾನೆ ಎಂಬ ಮಾತು ಈ ಪ್ರಕರಣದಲ್ಲಿಯೂ ಸತ್ಯವಾಗಿದೆ. ಹಂತಕರು ಮಾಡಿದ ಒಂದೇ ಒಂದು ತಪ್ಪಿನಿಂದ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ದ್ವಾರಕಾ: ಹಣಕ್ಕಾಗಿ ಈ ಜಗತ್ತಿನಲ್ಲಿ ಏನು ಬೇಕಾದರೂ ನಡೆಯುತ್ತದೆ. ತಾವು ಸಿಕ್ಕಿಬೀಳುತ್ತೇವೆಂದರೆ ಬೇರೆಯವರ ಜೀವ ತೆಗೆಯುವುದಕ್ಕೂ ಜನರು ಯೋಚನೆ ಮಾಡುವುದಿಲ್ಲ. ಗುಜರಾತ್ (Gujarat) ರಾಜ್ಯದ ದ್ವಾರಕಾ ಜಿಲ್ಲೆಯಲ್ಲಿ ಕೂಡ ಅದೇ ರೀತಿಯ ಘಟನೆಯೊಂದು ನಡೆದಿದೆ. ಮಹಿಳೆಯೊಬ್ಬಳನ್ನು ಕೊಲೆ ಮಾಡಿದ ಗಂಡ-ಹೆಂಡತಿ ಆಕೆಯ ದೇಹವನ್ನು ಮೂರ್ನಾಲ್ಕು ತುಂಡುಗಳಾಗಿ ಕತ್ತರಿಸಿ, ಆ ಹೆಣವನ್ನು ಸೂಟ್ಕೇಸ್ನೊಳಗೆ ತುಂಬಿಕೊಂಡು ಬೇರೆಡೆಗೆ ಸಾಗಿಸಿದ್ದರು. ಆದರೆ, ಅವರು ಮಾಡಿದ ಒಂದೇ ಒಂದು ಸಣ್ಣ ತಪ್ಪಿನಿಂದ ಅವರು ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿದ್ದಾರೆ. ಹಾಗಾದರೆ, ಆ ತಪ್ಪಾದರೂ ಯಾವುದು?
ಪಕ್ಕದ ಮನೆಯ 72 ವರ್ಷದ ಕವಿತಾ ಎಂಬ ಹೆಂಗಸಿನ ಬಳಿ ಸಾಲ ಪಡೆದಿದ್ದ ತನು ಮತ್ತು ಅನಿಲ್ ಎಂಬ ದಂಪತಿ ಆ ಹಣವನ್ನು ವಾಪಾಸ್ ನೀಡಲು ಸಾಧ್ಯವಾಗದೆ ಪರದಾಡುತ್ತಿದ್ದರು. ಆಗಾಗ ಬಂದ ಹಣ ಕೇಳುತ್ತಿದ್ದ ಹೆಂಗಸಿಗೆ ಏನು ಹೇಳುವುದೆಂದು ತಿಳಿಯದೆ ಒದ್ದಾಡಿದ ಅವರು ಕೊನೆಗೆ ಆಕೆಯನ್ನೇ ಮುಗಿಸಿಬಿಟ್ಟರೆ ತಮ್ಮ 1 ಲಕ್ಷ ರೂ. ಸಾಲದ ವಿಷಯವೂ ಆಕೆಯೊಂದಿಗೆ ಸಮಾಧಿಯಾಗುತ್ತದೆ ಎಂದು ತೀರ್ಮಾನ ಮಾಡಿದರು. ಆದರೆ, ಕೊಲೆ ಮಾಡಿದವನು ಬಚಾವಾಗಲು ಸಾಧ್ಯವೇ ಇಲ್ಲ ಎಂಬುದು ಅವರಿಗೆ ಗೊತ್ತಿರಲಿಲ್ಲ.
ಕೊಲೆಗಾರ ಎಷ್ಟೇ ಬುದ್ಧಿವಂತನಾದರೂ ಒಂದಾದರೂ ಸುಳಿವನ್ನು ಬಿಟ್ಟು ಹೋಗಿರುತ್ತಾನೆ ಎಂಬ ಮಾತು ಈ ಪ್ರಕರಣದಲ್ಲಿಯೂ ಸತ್ಯವಾಗಿದೆ. ಕವಿತಾ ಅವರ ಮಗ- ಸೊಸೆ ತಮ್ಮ ಸಂಬಂಧಿಕರ ಮನೆಗೆ ಹೋಗಿದ್ದನ್ನು ತಿಳಿದುಕೊಂಡು ಪಕ್ಕದ ಮನೆಯ ಗಂಡ-ಹೆಂಡತಿ ತಮ್ಮ ಪ್ಲಾನ್ ಸಿದ್ಧಪಡಿಸಿಕೊಂಡಿದ್ದರು. ಜೂನ್ 30ರ ರಾತ್ರಿ ಕವಿತಾ ಅವರ ಮನೆಯ ಬಾಗಿಲು ಬಡಿದ ಅವರು ಮಚ್ಚಿನಿಂದ ಕೊಚ್ಚಿ ಆಕೆಯನ್ನು ಕೊಲೆ ಮಾಡಿದ್ದರು. ನಂತರ ಆ ಶವವನ್ನು ಮೂರು ಭಾಗಗಳಾಗಿ ತುಂಡರಿಸಿ, ಸಣ್ಣ ಸಣ್ಣ ಚೀಲಕ್ಕೆ ತುಂಬಿದರು. ನಂತರ ಆ ಚೀಲಗಳನ್ನು ಸೂಟ್ಕೇಸ್ನೊಳಗೆ ಹಾಕಿದರು.
ಮನೆಯ ತುಂಬ ರಕ್ತದ ಕಲೆಗಳಾಗಿದ್ದರಿಂದ ಯಾವ ಸುಳಿವೂ ಸಿಗಬಾರದೆಂದು ಜಾಗರೂಕತೆಯಿಂದ ಮನೆಯನ್ನು ಸ್ವಚ್ಛಗೊಳಿಸಿದರು. ನಾಲ್ಕೈದು ಬಾರಿ ನೀರಿನಿಂದ ಒರೆಸಿ ಮನೆಯನ್ನು ಶುದ್ಧಗೊಳಿಸಿದ ಅವರು ನಂತರ ಮನೆಯ ಬಾಗಿಲನ್ನು ಹೊರಗಿನಿಂದ ಲಾಕ್ ಮಾಡಿಕೊಂಡು, ಹೆಣ ತುಂಬಿದ್ದ ಸೂಟ್ಕೇಸನ್ನು ಎಳೆದುಕೊಂಡು ತಮ್ಮ ಮನೆಗೆ ಹೋದರು. ಆದರೆ, ಡೈನಿಂಗ್ ಹಾಲ್ನಲ್ಲಿ ಕೊಲೆ ಮಾಡಿದ್ದ ಅವರು ಫ್ರಿಜ್ ಮೇಲೆ ಬಿದ್ದಿದ್ದ ರಕ್ತದ ಹನಿಗಳನ್ನು ಕ್ಲೀನ್ ಮಾಡಲು ಮರೆತಿದ್ದರು. ಫ್ರಿಜ್ ಡೋರ್ ಕೂಡ ಕೆಂಪು ಬಣ್ಣದಲ್ಲಿದ್ದುದರಿಂದ ಅದರ ಮೇಲೆ ಬಿದ್ದಿದ್ದ ರಕ್ತ ಅವರ ಗಮನಕ್ಕೆ ಬಂದಿರಲಿಲ್ಲ. ಅಲ್ಲೇ ಅವರು ಎಡವಿದ್ದು!
ಈ ಘಟನೆ ನಡೆದು ನಾಲ್ಕೈದು ದಿನಗಳ ನಂತರ ಮನೆಯಲ್ಲಿ ಕವಿತಾ ಅವರು ಇಲ್ಲದ್ದನ್ನು ಕಂಡು ಯಾರದೋ ಸಂಬಂಧಿಕರ ಮನೆಗೆ ಹೋಗಿರಬಹುದು ಎಂದುಕೊಂಡರು. ಆದರೆ, ಫೋನ್ಗೂ ಸಿಗದೆ, ಮನೆಗೂ ಬಾರದೆ ಇರುವುದನ್ನು ಕಂಡು ಗಾಬರಿಯಿಂದ ಪೊಲೀಸರಿಗೆ ದೂರು ನೀಡಿದರು. ಮನೆಗೆ ಬಂದ ಪೊಲೀಸರು ಎಲ್ಲ ಕಡೆ ಪರಿಶೀಲನೆ ನಡೆಸಿದಾಗ ಫ್ರಿಜ್ನ ಬಾಗಿಲಿನಲ್ಲಿ ರಕ್ತದ ಕಲೆಗಳು ಇರುವುದನ್ನು ಗಮನಿಸಿದರು. ಇದರಿಂದ ಅನುಮಾನಗೊಂಡ ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನೆಲ್ಲ ಪರಿಶೀಲಿಸಿದರು. ಪಕ್ಕದ ಮನೆಯೊಂದರ ಸಿಸಿಟಿವಿಯಲ್ಲಿ ತನು ಮತ್ತು ಅನಿಲ್ ಕವಿತಾ ಅವರ ಮನೆಯೊಳಗೆ ಪ್ರವೇಶಿಸಿದ್ದ ದೃಶ್ಯ ದಾಖಲಾಗಿತ್ತು.
ಆ ಸಿಸಿಟಿವಿ ದೃಶ್ಯದಲ್ಲಿ ಮಧ್ಯರಾತ್ರಿ ವೇಳೆ ತನು ಮತ್ತು ಅನಿಲ್ ಸೂಟ್ಕೇಸ್ ಎಳೆದುಕೊಂಡು ವಾಪಾಸ್ ಹೋಗಿದ್ದು ಕೂಡ ರೆಕಾರ್ಡ್ ಆಗಿತ್ತು. ಅನಿಲ್ ಮತ್ತು ತನು ವಾಸವಾಗಿದ್ದ ಮನೆಯ ಬಳಿ ಹೋಗಿ ನೋಡಿದಾಗ ಕೆಲವು ದಿನಗಳಿಂದ ಅವರು ಮನೆಯಲ್ಲಿಲ್ಲ ಎಂಬುದು ಗೊತ್ತಾಗಿತ್ತು. ಇದರಿಂದ ಅನುಮಾನಗೊಂಡ ಪೊಲೀಸರು ಅವರಿಬ್ಬರಿಗಾಗಿ ಹುಡುಕಾಟ ನಡೆಸಿದ್ದರು. ಅವರ ಮೊಬೈಲ್ ನೆಟ್ವರ್ಕ್ನ ಜಾಡನ್ನು ಹಿಡಿದು ಪೊಲೀಸರು ಅವರನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ತಾವೇ ಕೊಲೆ ಮಾಡಿ, ಹೆಣವನ್ನು ನದಿಗೆ ಬಿಸಾಡಿರುವುದಾಗಿ ಅವರು ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ: Udupi Murder: ಬ್ರಹ್ಮಾವರದ ಅಪಾರ್ಟ್ಮೆಂಟ್ನಲ್ಲಿ ಮಹಿಳೆಯ ಬರ್ಬರ ಹತ್ಯೆ; ಆಟೋದಲ್ಲಿ ಬ್ಯಾಂಕ್ಗೆ ಹೋಗಿದ್ದೇ ತಪ್ಪಾಯ್ತ?
(Couple Killed Woman and Disposed Dead body in Suitcase but Blood on Fridge CCTV Video Revealed Murder Secret)