ದೆಹಲಿ: ಗ್ಯಾಂಗ್ಸ್ಟರ್ ತಿಲ್ಲು ತಾಜ್‌ಪುರಿಯಾನನ್ನು (Tillu Tajpuriya) ಇರಿದು ಹತ್ಯೆಗೈದ ಸಂದರ್ಭದಲ್ಲಿ ತಿಹಾರ್ ಜೈಲಿನ (Tihar prison) ಸೆಲ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ತಮಿಳುನಾಡು ವಿಶೇಷ ಪೊಲೀಸ್ (TNSP)ಯ ಏಳು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಕಣ್ಣೆದುರೇ ಹತ್ಯೆ ನಡೆಯುತ್ತಿದ್ದಾಗ ಮೂಕಪ್ರೇಕ್ಷಕರಾಗಿ ನಿಂತ ಆರೋಪದ ಮೇಲೆ ಅವರನ್ನು ತಮಿಳುನಾಡಿಗೆ ವಾಪಸ್ ಕಳುಹಿಸಲಾಗಿದೆ ಎಂದು ಜೈಲು ಅಧಿಕಾರಿಗಳು ಭಾನುವಾರ ಹೇಳದ್ದಾರೆ. ದೆಹಲಿ ಕಾರಾಗೃಹಗಳ ಮಹಾನಿರ್ದೇಶಕ ಸಂಜಯ್ ಬೇನಿವಾಲ್ ತನ್ನ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ತಮಿಳುನಾಡು ಪೊಲೀಸರಿಗೆ ಪತ್ರ ಬರೆದ ಕೆಲವು ದಿನಗಳ ನಂತರ ಈ ಬೆಳವಣಿಗೆ ನಡೆದಿದೆ.
ತಮ್ಮ ಸಿಬ್ಬಂದಿಯ ಕಡೆಯಿಂದ ಆಪಾದಿತ ನಿರ್ಲಕ್ಷ್ಯದ ಬಗ್ಗೆ ಟಿಎನ್‌ಎಸ್‌ಪಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಯಿತು. ಈ ಸಂದರ್ಭದಲ್ಲಿ ಅವರು ತಮ್ಮ ಸಿಬ್ಬಂದಿ ವಿರುದ್ಧ ಇಲಾಖಾ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಜೈಲಿನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತಮಿಳುನಾಡು ಪೊಲೀಸರು ಈಗ ತನ್ನ ಏಳು ಸಿಬ್ಬಂದಿಯನ್ನು ಅಮಾನತುಗೊಳಿಸಿ ಅವರನ್ನು ವಾಪಸ್ ಕರೆದಿದ್ದಾರೆ ಎಂದು ಜೈಲಿನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆ ನಡೆದ ಸೆಲ್ ಸಂಖ್ಯೆ ಎಂಟರಲ್ಲಿ ಟಿಎನ್‌ಎಸ್‌ಪಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟಿಎನ್‌ಎಸ್‌ಪಿ ತಿಹಾರ್ ಜೈಲಿನ ಆವರಣದಲ್ಲಿ ಭದ್ರತೆಯನ್ನು ಒದಗಿಸುತ್ತದೆ.
ಇದನ್ನೂ ಓದಿ: ಮಣಿಪುರ ಹಿಂಸಾಚಾರದ ಬಗ್ಗೆ ಮೌನ ಮುರಿದ ಅಮಿತ್ ಶಾ; ಶಾಂತಿ ಕಾಪಾಡುವಂತೆ ಜನರಿಗೆ ಮನವಿ
ತಾಜ್‌ಪುರಿಯ ಮೇಲೆ ಭದ್ರತಾ ಸಿಬ್ಬಂದಿಯ ಮುಂದೆಯೇ ದಾಳಿ ನಡೆದಿದ್ದು, ಚೂರಿಯಿಂದ ಇರಿದ ನಂತರ ಆತನನ್ನು ಕರೆದೊಯ್ಯುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಮಂಗಳವಾರ ಬೆಳಗ್ಗೆ ಹೆಚ್ಚಿನ ಭದ್ರತೆಯ ಜೈಲಿನೊಳಗೆ ಗೋಗಿ ಗ್ಯಾಂಗ್‌ನ ನಾಲ್ವರು ಸದಸ್ಯರು ತಾಜ್‌ಪುರಿಯ ಮೇಲೆ ಆಯುಧಗಳಿಂದ ಹಲ್ಲೆ ನಡೆಸಿದ್ದರು. ಆಗ ಅವನಿಗೆ ಜೀವವಿತ್ತು, ಸೆರೆಮನೆಯ ಭದ್ರತಾ ಸಿಬ್ಬಂದಿ ಆತನನ್ನು ಕೊಂಡೊಯ್ಯುತ್ತಿದ್ದಾಗ ಆರೋಪಿಗಳು ಎರಡನೇ ಬಾರಿಗೆ ದಾಳಿ ನಡೆಸಿದ್ದು ದೃಶ್ಯಾವಳಿಗಳಲ್ಲಿದೆ.
ದಾಳಿಕೋರರುಗ್ಯಾಂಗ್ ಸ್ಟರ್ ಮೇಲೆ ದಾಳಿ ನಡೆಸುತ್ತಿರುವಾಗ ಭದ್ರತಾ ಸಿಬ್ಬಂದಿ ಮೂಕ ಪ್ರೇಕ್ಷಕರಾಗಿ ನಿಂತಿರುವುದು ವಿಡಿಯೊದಲ್ಲಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:27 pm, Mon, 8 May 23