ದೇಶದಲ್ಲಿ ಕೊರೊನಾ ಸೋಂಕಿನ ಅಬ್ಬರ ಹೆಚ್ಚಾಗಿದ್ದರೂ ಸಹ, ವೈರಸ್ನಿಂದಾಗಿ ಶೇ.70.38 ರಷ್ಟು ಜನರು ಗುಣಮುಖರಾಗ್ತಿದ್ದಾರೆ. ಗುಣಮುಖ ಪ್ರಮಾಣ ಶೇಕಡಾ 70 ರ ಗಡಿ ದಾಟಿದ್ದು, ದೇಶದಲ್ಲಿ ಸಕ್ರಿಯ ಪ್ರಕರಣಗಳು ಶೇಕಡಾ 27.64 ರಷ್ಟು ಮಾತ್ರ ಇವೆ. ದೇಶದಲ್ಲಿ ಕೊರೊನಾ ರೋಗಿಗಳ ಪೈಕಿ ಶೇಕಡಾ 1.98 ರಷ್ಟು ಸಾವನ್ನಪ್ಪಿದ್ದಾರಂತೆ.
ಕೊರೊನಾ ‘ನಾಗಾಲೋಟ’
ಭಾರತದಲ್ಲಿ ಕೊರೊನಾ ಸೋಂಕಿನ ನಾಗಾಲೋಟ ಮುಂದುವರಿದಿದ್ದು, ಸೋಂಕಿತರ ಸಂಖ್ಯೆ 23,28,405ಕ್ಕೆ ಏರಿಕೆಯಾಗಿದೆ. ಸೋಂಕಿನಿಂದ 46 ಸಾವಿರ ಜನರು ಉಸಿರು ಚೆಲ್ಲಿದ್ದಾರೆ. 6,44,116 ಜನರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ರೆ, 16,38,101 ಜನರು ಕೊರೊನಾ ವಿರುದ್ಧ ಹೋರಾಡಿ ಗುಣಮುಖರಾಗಿದ್ದಾರೆ. 8,944 ಜನರ ಸ್ಥಿತಿ ಇನ್ನೂ ಚಿಂತಾಜನಕವಾಗಿದೆ.
ಲಕ್ಷಣ ರಹಿತರಿಗೆ ಮನೆಯಲ್ಲೇ ಚಿಕಿತ್ಸೆ?
ಕೊರೊನಾ ಸೋಂಕು ಕಾಣಿಸಿಕೊಂಡ ತಕ್ಷಣ ಆಸ್ಪತ್ರೆಗೆ ಸೇರಿಸಲಾಗ್ತಿದೆ. ಆದ್ರೆ, ರೋಗ ಲಕ್ಷಣಗಳೇ ಇಲ್ಲದವರಿಗೆ ಆಸ್ಪತ್ರೆಗೆ ಸೇರಿಸುವ ಅಗತ್ಯವಿಲ್ಲ. ಮನೆಯಲ್ಲೇ ಐಸೋಲೇಷನ್ ಮಾಡಿ ಚಿಕಿತ್ಸೆ ನೀಡಬಹುದು ಅಂತಾ ಕೇಂದ್ರ ಸರ್ಕಾರ ಹೇಳಿದೆ. ಲಕ್ಷಣ ರಹಿತ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದ್ದು, ಇವರಿಗೆ ಮನೆಯಲ್ಲೇ ಐಸೋಲೇಷನ್ ಮಾಡಿದ್ರೆ ಸಾಕು ಅಂತಾ ಸರ್ಕಾರ ಹೇಳಿದೆ.
PPE ಕಿಟ್ ರಫ್ತಿಗೆ ಅನುಮತಿ?
ಭಾರತಕ್ಕೆ ಕೊರೊನಾ ಎಂಟ್ರಿಕೊಟ್ಟ ಆರಂಭದಲ್ಲಿ ದೇಶದಲ್ಲಿ ಪಿಪಿಇ ಕಿಟ್ಗಳ ಕೊರತೆ ಎದುರಾಗಿತ್ತು. ಹೀಗಾಗಿ, ಚೀನಾ ದೇಶದಿಂದ ಕಿಟ್ಗಳನ್ನ ಖರೀದಿಸಲಾಗ್ತಿತ್ತು. ಆದ್ರೀಗ, ಭಾರತದಲ್ಲೇ ಪಿಪಿಇ ಕಿಟ್ಗಳನ್ನ ಅತಿ ಹೆಚ್ಚಾಗಿ ಉತ್ಪಾದನೆ ಮಾಡಲಾಗ್ತಿದ್ದು, ವಿದೇಶಗಳಿಗೆ ರಫ್ತು ಮಾಡಲು ಮುಂದಾಗಿದೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಸಚಿವ ನಿತಿನ್ ಗಡ್ಕರಿ, ಈ ಬಗ್ಗೆ ಪ್ರಧಾನಿ ಮೋದಿಗೆ ಪತ್ರ ಬರೆದು ಕಿಟ್, ಮಾಸ್ಕ್ ಮತ್ತು ಸ್ಯಾನಿಟೈಸರ್ ರಫ್ತಿಗೆ ಅನುಮತಿ ಕೋರಿದ್ದಾರೆ.
ಪರಿಚಯಿಸುವ ಮುನ್ನ ಪರೀಕ್ಷೆ!
ಕೊರೊನಾ ಸೋಂಕಿಗೆ ರಷ್ಯಾದಲ್ಲಿ ಸೋಂಕು ಪತ್ತೆ ಹಚ್ಚಿದ್ದು, ಈ ಲಸಿಕೆ ಭಾರತಕ್ಕೆ ಪರಿಚಯಿಸುವ ಮುನ್ನ ಪರೀಕ್ಷಿಸಬೇಕಾಗುತ್ತೆ ಅಂತಾ ದೆಹಲಿಯಲ್ಲಿ ಏಮ್ಸ್ ನಿರ್ದೇಶಕ ಡಾ.ಗುಲೇರಿಯಾ ಹೇಳಿದ್ದಾರೆ. ರಷ್ಯಾದ ಲಸಿಕೆ ಯಶಸ್ವಿಯಾದರೆ ಅದು ಸುರಕ್ಷಿತವಾಗಿರಬೇಕು. ಆ ಲಸಿಕೆಯ ಪರಿಣಾಮಗಳ ಬಗ್ಗೆ ಪರೀಕ್ಷೆ ಮಾಡಬೇಕು. ಲಸಿಕೆಯಿಂದ ಯಾವುದೇ ಅಡ್ಡಪರಿಣಾಮಗಳು ಇರಬಾರದು ಅಂತಾ ಹೇಳಿದ್ದಾರೆ.
ಅಂಡಮಾನ್ನಲ್ಲಿ ಸೋಂಕು
ದ್ವೀಪ ಪ್ರದೇಶಕ್ಕೂ ಕೊರೊನಾ ಸೋಂಕು ವಕ್ಕರಿಸಿಕೊಂಡಿದ್ದು ಅಟ್ಟಹಾಸ ಮೆರೆಯುತ್ತಲೇ ಇದೆ. ಅಂಡಮಾನ್ ಮತ್ತು ನಿಕೋಬಾರ್ನಲ್ಲಿ ಮತ್ತೆ ಸೋಂಕು ಹೆಚ್ಚಳವಾಗಿದೆ. ದ್ವೀಪದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1764ಕ್ಕೆ ಏರಿಕೆಯಾಗಿದ್ದು, ಸೋಂಕಿನಿಂದ 21 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸೋಂಕಿನ ವಿರುದ್ಧ ಹೋರಾಡಿ 749 ಜನರು ಗುಣಮುಖರಾಗಿದ್ದಾರೆ.
ಕಮಲ ಹ್ಯಾರಿಸ್ ಅಖಾಡಕ್ಕೆ
ಅಮೆರಿಕದಲ್ಲಿ ಕೊರೊನಾ ಅಬ್ಬರದ ಮಧ್ಯೆಯೂ, ಮುಂಬವರುವ ಅಧ್ಯಕ್ಷೀಯ ಚುನಾವಣೆಗೆ ಕಾವು ಜೋರಾಗಿದೆ. ಟ್ರಂಪ್ಗೆ ವಿರುದ್ಧವಾಗಿ ಡೆಮೊಕ್ರೆಟಿಕ್ ಪಕ್ಷದ ಜೋ ಬಿಡನ್ ಅಖಾಡದಲ್ಲಿದ್ದು, ಅವರು ಭಾರತೀಯ ಮೂಲದ ಕಮಲ ಹ್ಯಾರಿಸ್ರನ್ನ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಆರಿಸಿಕೊಂಡಿದ್ದಾರೆ. ತಮಿಳುನಾಡು ಮೂಲದ ತಾಯಿ ಮತ್ತು ಕ್ಯಾಲಿಫೋರ್ನಿಯಾದ ವ್ಯಕ್ತಿಯ ಮಗಳಾಗಿರೋ ಕಮಲಾ ರೇಸ್ಗೆ ಇಳಿದಿರೋದು ಕುತೂಹಲ ಮೂಡಿಸಿದೆ.
85 ಪ್ರಯಾಣಿಕರು ಡಿಸ್ಚಾರ್ಜ್
ಕೇರಳದ ಕೋಯಿಕ್ಕೋಡ್ನಲ್ಲಿ ವಿಮಾನ ದುರಂತದಲ್ಲಿ ಗಾಯಗೊಂಡಿದ್ದ ಪ್ರಯಾಣಿಕರು ಗುಣಮುಖರಾಗಿದ್ದಾರೆ. ಗಾಯಗೊಂಡು ಕೇರಳದ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 85ಕ್ಕೂ ಹೆಚ್ಚು ಪ್ರಯಾಣಿಕರು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ತಿಮ್ಮಪ್ಪನ ಹುಂಡಿಗೆ 24 ಗಂಟೆಯಲ್ಲಿ 69 ಲಕ್ಷ ಕಾಣಿಕೆ
ಕೊರೊನಾ ವೈರಸ್ನಿಂದ ಕಂಗೆಟ್ಟರೂ ಸಹ ಆಂಧ್ರ ಪ್ರದೇಶದಲ್ಲಿ ಭಕ್ತರ ಭಕ್ತಿಗೆ ಮಾತ್ರ ಪಾರವೇ ಇಲ್ಲದಂತಾಗಿದೆ. ಸೋಂಕಿನ ಭೀತಿಯ ಮಧ್ಯೆಯೂ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಭಕ್ತರು ಆಗಮಿಸುತ್ತಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ, 8401 ಭಕ್ತರು ಆಗಮಿಸಿದ್ದು, 69 ಲಕ್ಷ ಕಾಣಿಕೆ ನೀಡಿದ್ದಾರೆ. 1880 ಭಕ್ತರು ತಲೆ ಮುಡಿ ನೀಡಿದ್ದಾರಂತೆ.
Published On - 3:35 pm, Wed, 12 August 20