ಹಸುವಿನ ಹೊಟ್ಟೆಯಿಂದ 77ಕೆಜಿ ಪ್ಲಾಸ್ಟಿಕ್​ ತೆಗೆದ ವೈದ್ಯರು; ಇದ್ದಿದ್ದೆಲ್ಲ ಐಸ್​ಕ್ರೀಂ ಕಪ್​ಗಳು, ಸ್ಪೂನ್​ಗಳು !

| Updated By: Lakshmi Hegde

Updated on: Dec 02, 2021 | 11:41 AM

ಪ್ಲಾಸ್ಟಿಕ್​ ತಿಂದು ಅನಾರೋಗ್ಯಕ್ಕೀಡಾಗುವ ಪ್ರಾಣಿಗಳ ಸಂಖ್ಯೆ ಹೆಚ್ಚುತ್ತಿದೆ. ಗುಜರಾತ್​ನ ಆನಂದ್​ ಜಿಲ್ಲೆಯಲ್ಲೇ ಏನಿಲ್ಲವೆಂದರೂ ವಾರಕ್ಕೆ 3-4 ಪ್ರಕರಣಗಳು ಸಿಗುತ್ತಿವೆ ಎಂದು ವೈದ್ಯರು ತಿಳಿಸಿದ್ದಾರೆ.

ಹಸುವಿನ ಹೊಟ್ಟೆಯಿಂದ 77ಕೆಜಿ ಪ್ಲಾಸ್ಟಿಕ್​ ತೆಗೆದ ವೈದ್ಯರು; ಇದ್ದಿದ್ದೆಲ್ಲ ಐಸ್​ಕ್ರೀಂ ಕಪ್​ಗಳು, ಸ್ಪೂನ್​ಗಳು !
ಪ್ರಾತಿನಿಧಿಕ ಚಿತ್ರ
Follow us on

ಪ್ಲಾಸ್ಟಿಕ್​ ನಿಷೇಧದ (Plastic Ban)ಬಗ್ಗೆ ಅದೆಷ್ಟೇ ಅರಿವು ಮೂಡಿಸುವ ಪ್ರಯತ್ನಗಳು ನಡೆಯುತ್ತಿದ್ದರೂ ಅದು ಸಂಪೂರ್ಣವಾಗಿ ಜಾರಿಗೆ ಬರುತ್ತಿಲ್ಲ. ಆದರೆ ಈ ಪ್ಲಾಸ್ಟಿಕ್​ ಪ್ರಕೃತಿಗೆ, ಪ್ರಾಣಿ ಸಂಕುಲಕ್ಕೆ  ಮಾರಕವಾಗಿ ಪರಿಣಮಿಸುತ್ತದೆ. ಅದರಲ್ಲೂ ನಗರಪ್ರದೇಶದಲ್ಲಿ ಎಲ್ಲೆಂದರಲ್ಲಿ ಬೀಸಾಡುವ ಪ್ಲಾಸ್ಟಿಕ್​ಗಳು ಸೀದಾ ಬೀಡಾಡಿ ಹಸುಗಳ ಹೊಟ್ಟೆಯನ್ನೇ ಸೇರುತ್ತಿವೆ. ಅದಕ್ಕೊಂದು ತಾಜಾ ಉದಾಹರಣೆಯೆಂದರೆ ಹಸುವೊಂದರ ಹೊಟ್ಟೆಯಿಂದ ಬರೋಬ್ಬರಿ 77 ಕೆಜಿ ಪ್ಲಾಸ್ಟಿಕ್​​ಗಳನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದಿದ್ದು..! 

ಗುಜರಾತ್​​ನ ಆನಂದ್​ ಜಿಲ್ಲೆಯಲ್ಲಿ ಹೀಗೊಂದು ಪ್ರಕರಣ ಬೆಳಕಿಗೆ ಬಂದಿದೆ. ಅನಾರೋಗ್ಯಕ್ಕೀಡಾಗಿದ್ದ ಒಂದು ಬೀಡಾಡಿ ಹಸುವನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಿದಾಗ, ಅದರ ಹೊಟ್ಟೆಯಲ್ಲಿ ಐಸ್​ಕ್ರೀಂ ಕಪ್​ಗಳು, ಪ್ಲಾಸ್ಟಿಕ್​ ಕಪ್​ಗಳು, ಸ್ಪೂನ್​ಗಳು ಪತ್ತೆಯಾಗಿವೆ. ಆನಂದ್​ ಜಿಲ್ಲೆಯ ಪಶುವೈದ್ಯಕೀಯ ತಂಡ ಸುಮಾರು ಎರಡೂವರೆ ತಾಸುಗಳ ಕಾಲ ಸರ್ಜರಿ ನಡೆಸಿದೆ. ಅನಾರೋಗ್ಯಕ್ಕೀಡಾಗಿದ್ದ ಈ ಹಸುವನ್ನು ಎನ್​ಜಿಒವೊಂದು ಆಸ್ಪತ್ರೆಗೆ ತಂದಿತ್ತು. ಮನುಷ್ಯರು ಕಸದ ತೊಟ್ಟಿಗೆ ಹಾಕಿದ್ದ, ರಸ್ತೆ ಬದಿಗೆ ಎಸೆದಿದ್ದ ಪ್ಲಾಸ್ಟಿಕ್​​ಗಳನ್ನು ತಿಂದ ಪರಿಣಾಮವೇ ಹಸುವಿನ ಆರೋಗ್ಯ ಕೆಟ್ಟಿತ್ತು. ಈಗ ಅದನ್ನೆಲ್ಲ ತೆಗೆಯಲಾಗಿದ್ದು, ಹಸುವಿಗೆ ಚಿಕಿತ್ಸೆ ಮುಂದುವರಿದಿದೆ ಎಂದು ಡಾ. ಪಿನೇಶ್​ ಪರಿಖ್​ ತಿಳಿಸಿದ್ದಾರೆ.

ಹೀಗೆ ಪ್ಲಾಸ್ಟಿಕ್​ ತಿಂದು ಅನಾರೋಗ್ಯಕ್ಕೀಡಾಗುವ ಪ್ರಾಣಿಗಳ ಸಂಖ್ಯೆ ಹೆಚ್ಚುತ್ತಿದೆ. ಗುಜರಾತ್​ನ ಆನಂದ್​ ಜಿಲ್ಲೆಯಲ್ಲೇ ಏನಿಲ್ಲವೆಂದರೂ ವಾರಕ್ಕೆ 3-4 ಪ್ರಕರಣಗಳು ಸಿಗುತ್ತಿವೆ. ಈಗಾಗಲೇ ಹಲವು ದನಕರುಗಳಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದೂ ವೈದ್ಯರು ಮಾಹಿತಿ ನೀಡಿದ್ದಾರೆ.  ಹಾಗೇ, ಇಲ್ಲಿಯವರೆಗೆ ಸರ್ಜರಿಗೆ ಒಳಗಾದ ಹಸುಗಳ ಹೊಟ್ಟೆಯಲ್ಲಿ 10 ಕೆಜಿಯಿಂದ 50-60 ಕೆಜಿವರೆಗಿನ ಪ್ಲಾಸ್ಟಿಕ್​ಗಳು ಪತ್ತೆಯಾಗಿದೆ ಎಂದು ಹೇಳಿದ್ದಾರೆ.

ಪ್ಲಾಸ್ಟಿಕ್ ಮಣ್ಣಿನಲ್ಲಿ ಹೇಗೆ ಕರಗುವುದಿಲ್ಲವೋ ಹಾಗೇ ಹೊಟ್ಟೆಯಲ್ಲಿ ಜೀರ್ಣವೂ ಕೂಡ ಆಗುವುದಿಲ್ಲ. ಬೀಡಾಡಿ ಹಸುಗಳು ಮನುಷ್ಯರು ರಸ್ತೆಯ ಮೇಲೆ, ರಸ್ತೆ ಪಕ್ಕ ಇರುವ ಕಸದ ತೊಟ್ಟಿಯಲ್ಲಿ ಎಸೆಯುವ ಪ್ಲಾಸ್ಟಿಕ್​ಗಳನ್ನು ಸೇವಿಸಿದಾಗ ಅವು ಹೊಟ್ಟೆಯಲ್ಲಿ ಹಾಗೇ ಕುಳಿತುಕೊಳ್ಳುತ್ತವೆ. ಹಸುಗಳು ಅವುಗಳನ್ನು ಅದೆಷ್ಟೇ ಅಗೆದು ನುಂಗಿದರೂ ಹಾಗೇ ಉಳಿದುಕೊಳ್ಳುತ್ತವೆ. ಅವು ಸಗಣಿಯ ಜತೆಗೆ ಹೊರಗೂ ಹೋಗುವುದಿಲ್ಲ. ಕ್ರಮೇಣ ಪ್ರಾಣಿಗಳ ಜೀರ್ಣಾಂಗ ವ್ಯವಸ್ಥೆಯನ್ನು ಹಾಳು ಮಾಡುತ್ತವೆ. ಆಹಾರ ಸೇವಿಸಲು ಆಗದಂತೆ ಮಾಡುತ್ತವೆ. ಇದರಿಂದಾಗಿ ಅವುಗಳು ಅನಾರೋಗ್ಯಕ್ಕೆ ಒಳಗಾಗುತ್ತವೆ. ಹೀಗಾಗಿ ಪ್ಲಾಸ್ಟಿಕ್​ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು ವೈದ್ಯರು ಹೇಳಿದ್ದಾರೆ.

ಇದನ್ನೂ ಓದಿ: Video: ಬಾಯಿಯಿಂದ ಗಾಳಿ ಹೊರಹಾಕುವುದರಲ್ಲೂ ಗಿನ್ನಿಸ್​ ದಾಖಲೆ ನಿರ್ಮಿಸಿದ ಆಸ್ಟ್ರೇಲಿಯಾದ ವ್ಯಕ್ತಿ; ಇವರು ತೇಗುವ ಶಬ್ದಕ್ಕೆ ಭಯವಾಗದೆ ಇರದು !