Delhi Chalo: ಇಂದು 7ನೇ ಸುತ್ತಿನ ಸಭೆ; ಫಲಿತಾಂಶಕ್ಕೆ ಕಾದು ಕುಳಿತಿದೆ ಇಡೀ ದೇಶ
ಕೇಂದ್ರ ಸರ್ಕಾರ ಮತ್ತು ರೈತ ಒಕ್ಕೂಟಗಳ ನಡುವೆ ಇಂದು 7ನೇ ಸುತ್ತಿನ ಸಭೆ ನಡೆಯಲಿದೆ. ಇಂದಿನ ಮಾತುಕತೆಯಲ್ಲಿ ಹೊರ ಹೊಮ್ಮುವ ನಿರ್ಧಾರವನ್ನು ಇಡೀ ದೇಶವೇ ಕುತೂಹಲದಿಂದ ಎದುರು ನೋಡುತ್ತಿದೆ.
ಚಂಡಿಗಢ: ಹರಿಯಾಣದ ರೇವಾರಿ-ಅಲ್ವಾರಿ ಗಡಿಯಲ್ಲಿ ಚಳುವಳಿಕಾರರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದಿದೆ. ಭಾನುವಾರ ಹರಿಯಾಣದಿಂದ ದೆಹಲಿಯತ್ತ ಹೊರಟ ಸಾವಿರಾರು ರೈತರನ್ನು ತಡೆಯಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ. ಜೊತೆಗೆ, ಮೆರವಣಿಗೆಯಲ್ಲಿ ವಾಹನವೊಂದಕ್ಕೆ ಬೆಂಕಿ ತಗುಲಿದೆ. ಇವೆರಡೂ ಘಟನೆಗಳು ಚಳುವಳಿಯಲ್ಲಿ ಭಾಗಿಯಾಗಲು ಹೊರಟ ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಪಂಜಾಬ್ನ ಪೊಲೀಸರೂ ನಿನ್ನೆ ರೈತ ಚಳುವಳಿಕಾರರ ವಿರುದ್ಧ ಲಾಠಿ ಬೀಸಿದ್ದಾರೆ. ಪಂಜಾಬ್ ಬಿಜೆಪಿ ರಾಜ್ಯಾಧ್ಯಕ್ಷ ಅಶ್ವಿನಿ ಕುಮಾರ್ ಶರ್ಮಾ ನಡೆಸುತ್ತಿದ್ದ ಪಕ್ಷದ ಆಂತರಿಕ ಸಭೆಯತ್ತ ನುಗ್ಗಲೆತ್ನಿಸಿದ ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಲಾಠಿ ಕೈಗೆತ್ತಿಕೊಂಡರು.
ಈ ಮಧ್ಯೆ.. ಇಂದಿನ ಕೇಂದ್ರ ಸರ್ಕಾರದ ಜೊತೆಗಿನ ಸಭೆಯಲ್ಲಿ ಏನಾಗಬಹುದೆಂಬ ಆತಂಕ, ಗೊಂದಲವಂತೂ ಎಲ್ಲರಲ್ಲೂ ಎದ್ದು ಕಾಣುತ್ತಿದೆ. ತಮ್ಮ ಬೇಡಿಕೆಗಳನ್ನು ಈಡೇರಿಸದೆ ತಮ್ಮ ಪಟ್ಟು ಬಿಡುವುದಿಲ್ಲವೆಂದು ರೈತರು ಈಗಾಗಲೇ ಘೋಷಿಸಿದ್ದಾರೆ.
ರೈತರ ಬೇಡಿಕೆಗಳೇನು? ರೈತರ 4 ಬೇಡಿಕೆಗಳಲ್ಲಿ 2 ಬೇಡಿಕೆಗಳಿಗೆ ಈಗಾಗಲೇ ಒಮ್ಮತಕ್ಕೆ ಬರಲಾಗಿದೆ. ಇನ್ನುಳಿದ 2 ಪ್ರಮುಖ ಬೇಡಿಕೆಗಳಾಗಿವೆ.
1. ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನಾತ್ಮಕವಾಗಿ ಖಚಿತಪಡಿಸಬೇಕು. 2. ನೂತನ ಕೃಷಿ ಕಾಯ್ದೆಗಳನ್ನು ಸಂಪೂರ್ಣ ರದ್ದುಗೊಳಿಸಬೇಕು. ಈ ಎರಡೂ ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಸಮ್ಮತಿಸದೆ ಯಾವುದೇ ಕಾರಣಕ್ಕೂ ಚಳುವಳಿ ಹಿಂಪಡೆಯುವುದಿಲ್ಲ ಎಂದು ರೈತ ಒಕ್ಕೂಟಗಳು ಖಚಿತಪಡಿಸಿವೆ.
ಆದರೆ, ಕೇಂದ್ರ ಸರ್ಕಾರದ ಈವರೆಗಿನ ನಿಲುವಿನ ಪ್ರಕಾರ ಯಾವ ಕಾರಣಕ್ಕೂ ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಿಲ್ಲ. ರೈತರು ಸೂಚಿಸಿದ ಬದಲಾವಣೆಗಳನ್ನು ಮಾಡಲು ಸಿದ್ಧ. ಜೊತೆಗೆ, ಕನಿಷ್ಠ ಬೆಂಬಲ ಬೆಲೆಯಲ್ಲಿ ಯಾವ ವ್ಯತ್ಯಾಸವೂ ಆಗುವುದಿಲ್ಲ ಎಂದಿದೆ. ಹೀಗಾಗಿ, ಇಂದು ನಡೆಯಲಿರುವ 7ನೇ ಸುತ್ತಿನ ಸಭೆ ಕುತೂಹಲ ಮೂಡಿಸಿದೆ.
Fact Check | ರೈತರ ಪ್ರತಿಭಟನಾ ಸ್ಥಳದಲ್ಲಿ ಇದ್ದದ್ದು ಜೀಪ್, ₹1.5 ಕೋಟಿ ಮೌಲ್ಯದ ಬೆಂಜ್ ಕಾರು ಅಲ್ಲ
Published On - 11:25 am, Mon, 4 January 21