ಅತೀಕ್ ಅಹ್ಮದ್​​ ದೇಹ ಹೊಕ್ಕ 8 ಬುಲೆಟ್‌ಗಳು: ಮರಣೋತ್ತರ ವರದಿ ಬಹಿರಂಗ

|

Updated on: Apr 16, 2023 | 7:16 PM

 ಅತೀಕ್ ಅಹ್ಮದ್​ ಮತ್ತು ಅಶ್ರಫ್ ಅಹ್ಮದ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ಯಾಂಗ್‌ಸ್ಟರ್‌ ಅತಿಕ್ ಅಹ್ಮದ್‌ ಮರಣೋತ್ತರ ಪರೀಕ್ಷಾ ವರದಿ ಬಹಿರಂಗವಾಗಿದೆ.

ಅತೀಕ್ ಅಹ್ಮದ್​​ ದೇಹ ಹೊಕ್ಕ 8 ಬುಲೆಟ್‌ಗಳು: ಮರಣೋತ್ತರ ವರದಿ ಬಹಿರಂಗ
ಅಶ್ರಫ್ ಅಹ್ಮದ್ ಮತ್ತು ಅತೀಕ್ ಅಹ್ಮದ್
Follow us on

ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಅತೀಕ್ ಅಹ್ಮದ್ (Atiq Ahmad) ಮತ್ತು ಅಶ್ರಫ್ ಅಹ್ಮದ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ಯಾಂಗ್‌ಸ್ಟರ್‌ ಅತಿಕ್ ಅಹ್ಮದ್‌ ಮರಣೋತ್ತರ ಪರೀಕ್ಷಾ ವರದಿ ಬಹಿರಂಗವಾಗಿದ್ದು, 8 ಬುಲೆಟ್‌ಗಳು ದೇಹಕ್ಕೆ ಹೊಕ್ಕಿದ್ದರಿಂದ ಅತಿಕ್ ಅಹ್ಮದ್​ ಮೃತಪಟ್ಟಿದ್ದಾರೆ. ಆರೋಪಿಗಳು ಮೊದಲು ಅತಿಕ್ ಅಹ್ಮದ್‌ ತಲೆಗೆ ಗುಂಡು ಹಾರಿಸಿದ್ದರು. ಬಂಧಿತ ಮೂವರು ಆರೋಪಿಳನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಸೆಷನ್ಸ್‌ ಕೋರ್ಟ್‌ ಆದೇಶಿಸಿದೆ. ಶನಿವಾರ ರಾತ್ರಿ ಪ್ರಯಾಗ್‌ರಾಜ್‌ನ ಮೆಡಿಕಲ್ ಕಾಲೇಜ್ ಬಳಿ ಗ್ಯಾಂಗ್‌ಸ್ಟರ್-ರಾಜಕಾರಣಿ ಅತೀಕ್ ಅಹ್ಮದ್ ಮತ್ತು ಅವರ ಸಹೋದರ ಅಶ್ರಫ್ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ಇಬ್ಬರೂ ಸಾವನ್ನಪ್ಪಿದ್ದರು. 2005ರ ಉಮೇಶ್ ಪಾಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ವಿಚಾರಣೆಗಾಗಿ ಇಬ್ಬರನ್ನೂ ಇಲ್ಲಿಗೆ ಕರೆತರಲಾಗಿತ್ತು. ಏಪ್ರಿಲ್ 13 ರಂದು, ಝಾನ್ಸಿಯಲ್ಲಿ ಪೊಲೀಸ್ ಎನ್‌ಕೌಂಟರ್‌ನಲ್ಲಿ ಅಹ್ಮದ್ ಅವರ ಮಗ ಮತ್ತು ಅವರ ಸಹಚರರೊಬ್ಬರನ್ನು ಹತ್ಯೆ ಮಾಡಲಾಗಿತ್ತು.

ಬಂಧಿತ ಮೂವರು ಹಂತಕರಿಗೆ 14 ದಿನ ನ್ಯಾಯಾಂಗ ಬಂಧನ

ಪ್ರಕರಣದ ಆರೋಪಿಗಳಾಗಿರುವ ಲವ್ಲೇಶ್‌ ತಿವಾರಿ, ಸನ್ನಿ ಸಿಂಗ್‌, ಅರುಣ್‌ ಮೌರ್ಯಗೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಸೆಷನ್ಸ್‌ ಕೋರ್ಟ್‌ 14 ದಿನ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ. ಹತ್ಯೆಗೆ ಸಂಬಂಧಿಸಿದ ಬೆಳವಣಿಗೆಗಳು ಮತ್ತು ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಡಿಜಿ ಸಿಎಂ ಯೋಗಿ ಅವರಿಗೆ ವಿವರಿಸಿದ್ದಾರೆ.

ಇದನ್ನೂ ಓದಿ: Atiq Ahmad Death: ಅತೀಕ್ ಅಹ್ಮದ್, ಅಶ್ರಫ್ ಹತ್ಯೆ ಬಳಿಕ ಸಿಎಂ ಯೋಗಿ ಅಧಿಕಾರಿಗಳಿಗೆ ನೀಡಿದ ಸೂಚನೆ ಏನು?

ಪ್ರಯಾಗ್ರಾಜ್ನಲ್ಲಿ ಸೆಕ್ಷನ್ 144 ಜಾರಿ

ಘಟನೆ ಬಳಿಕ ಪ್ರಯಾಗ್ರಾಜ್ನಲ್ಲಿ ಸೆಕ್ಷನ್ 144 ಅನ್ನು ಜಾರಿ ಮಾಡಲಾಗಿದೆ. ಇದಲ್ಲದೇ ಸುತ್ತಮುತ್ತಲ ಜಿಲ್ಲೆಗಳಿಂದಲೂ ಪಡೆ ಕರೆಸಿಕೊಳ್ಳಲಾಗಿದೆ. ಇದರೊಂದಿಗೆ PAC ಮತ್ತು RAF ಪಡೆಗಳನ್ನು ಸಹ ನಿಯೋಜಿಸಲಾಗಿದೆ. ಇದಲ್ಲದೇ ಜಿಲ್ಲೆಯ ಗಡಿಯನ್ನು ಮುಚ್ಚಲಾಗಿದೆ. ಕೂಡಲೇ ಉನ್ನತ ಮಟ್ಟದ ಸಭೆ ಕರೆದು ಇಡೀ ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ.

ಮೂವರು ಸದಸ್ಯರ ನ್ಯಾಯಾಂಗ ಆಯೋಗ (ನ್ಯಾಯಾಂಗ ವಿಚಾರಣಾ ಆಯೋಗ) ರಚನೆಗೂ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಮೂವರು ದಾಳಿಕೋರರು ಸ್ಥಳದಲ್ಲೇ ಸಿಕ್ಕಿಬಿದ್ದಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

17 ಪೊಲೀಸ್ ಸಿಬ್ಬಂದಿ ಅಮಾನತು

ಅತಿಕ್ ಅಹ್ಮದ್‌ ಭದ್ರತೆ ಹೊಣೆ ಹೊತ್ತಿದ್ದ 17 ಪೊಲೀಸ್ ಸಿಬ್ಬಂದಿ ಅಮಾನತುಗೊಳಿಸಿ ಉತ್ತರ ಪ್ರದೇಶ ಸರ್ಕಾರ ಆದೇಶ ಹೊರಡಿಸಿದೆ. ಹಾಗೂ ಅತಿಕ್‌ ಶೂಟೌಟ್ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶ ನೀಡಿದೆ.

ಇದನ್ನೂ ಓದಿ: Atiq Ahmad: ಉತ್ತರಪ್ರದೇಶದ ಮಾಫಿಯಾ ಡಾನ್‌ ಅತೀಕ್ ಅಹ್ಮದ್‌ ಮತ್ತು ಸಹೋದರನನ್ನು ಗುಂಡಿಕ್ಕಿ ಹತ್ಯೆ; ಮೂವರು ಅರೆಸ್ಟ್

2006ರಲ್ಲಿ ಉಮೇಶ್‌ ಪಾಲ್‌ ಅಪಹರಣ ಪ್ರಕರಣದಲ್ಲಿ ಗ್ಯಾಂಗ್​​ಸ್ಟರ್ ಅತೀಕ್‌ ಅಹ್ಮದ್‌  ದೋಷಿ ಎಂದು ಪ್ರಯಾಗರಾಜ್‌ ನ್ಯಾಯಾಲಯ  ತೀರ್ಪು ನೀಡಿತ್ತು. ಉಮೇಶ್ ಪಾಲ್ ಅಪಹರಣ ಪ್ರಕರಣದಲ್ಲಿ ಅತೀಕ್ ಅಹ್ಮದ್, ಖಾನ್ ಸೌಲತ್ ಹನೀಫ್ ಮತ್ತು ದಿನೇಶ್ ಪಾಸಿ ಅವರಿಗೆ ಪ್ರಯಾಗ್‌ರಾಜ್‌ನಲ್ಲಿರುವ ಎಂಪಿ/ಎಂಎಲ್ಎ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ಕೊಲೆ ಮತ್ತು ಅಪಹರಣ ಸೇರಿದಂತೆ ಕನಿಷ್ಠ 100 ಕ್ರಿಮಿನಲ್ ಪ್ರಕರಣಗಳನ್ನು ಮಾಜಿ ಸಂಸದ ಮತ್ತು ಶಾಸಕ ಅತೀಕ್ ಅಹ್ಮದ್ ಎದುರಿಸುತ್ತಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.