Viral Video: ‘ಯಾವ ನೋವೂ ಇಲ್ಲ..ಅಡ್ಡಪರಿಣಾಮವೂ ಇಲ್ಲ..ಲಸಿಕೆ ಹಾಕಿಸಿಕೊಳ್ಳಿ’-ವಿಡಿಯೋ ಸಂದೇಶ ನೀಡಿದ 97ವರ್ಷದ ವೃದ್ಧೆ
ಯಾರೂ ಲಸಿಕೆಯ ಬಗ್ಗೆ ಹೆದರಬೇಡಿ. ಕೊರೊನಾ ಲಸಿಕೆ ಪಡೆಯುವುದರಿಂದ ನಿಮಗೇ ಒಳ್ಳೆಯದು. ಅಷ್ಟೇ ಅಲ್ಲ, ನಿಮ್ಮ ಸುತ್ತಲೂ ಇರುವವರಿಗೂ ಒಳ್ಳೆಯದೇ. ಲಸಿಕೆ ಸುರಕ್ಷಿತವಾಗಿದೆ ಎಂದು ವೃದ್ಧೆ ಹೇಳಿದ್ದಾರೆ.
ಕೊರೊನಾ ಲಸಿಕೆ ತೆಗೆದುಕೊಳ್ಳಲು ಯಾರೂ ಹಿಂಜರಿಯಬೇಡಿ. ಪ್ರತಿಯೊಬ್ಬರೂ ವ್ಯಾಕ್ಸಿನ್ ಹಾಕಿಸಿಕೊಳ್ಳಿ ಎಂದು 97 ವರ್ಷದ ವೃದ್ಧೆಯೊಬ್ಬರು ವಿಡಿಯೋ ಮೂಲಕ ನೀಡಿದ ಸಂದೇಶ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿದೆ. ಭಾರತದಲ್ಲಿ ಮೇ 1ರಿಂದ ಮೂರನೇ ಹಂತದ ಕೊರೊನಾ ಲಸಿಕೆ ಅಭಿಯಾನ ಶುರುವಾಗಿದೆ. ಈ ಹಂತದಲ್ಲಿ 18-44ವರ್ಷದವರೆಗಿನ ಎಲ್ಲರಿಗೂ ಲಸಿಕೆ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ. ಆದರೆ ಎಲ್ಲ ರಾಜ್ಯಗಳಲ್ಲೂ ಇನ್ನೂ ಸರಿಯಾಗಿ ಪ್ರಾರಂಭವಿಲ್ಲ. ಇನ್ನು ಕೆಲವು ಕಡೆಗಳಲ್ಲಿ ಪ್ರಾರಂಭವಾದರೆ ಅಡ್ಡಪರಿಣಾಮದ ಭಯದಿಂದ ಜನರೇ ಹಿಂದೇಟು ಹಾಕುತ್ತಿದ್ದಾರೆ.
ಇದೀಗ 97 ವರ್ಷದ ವೃದ್ಧೆಯೊಬ್ಬರು ಲಸಿಕೆ ಬಗ್ಗೆ ವಿಡಿಯೋವೊಂದನ್ನು ಮಾಡಿದ್ದಾರೆ. ನನಗೆ 97 ವರ್ಷವಾಗಿದೆ. ಮಾರ್ಚ್ 9ರಂದು ಕೊರೊನಾ ಲಸಿಕೆಯ ಮೊದಲ ಡೋಸ್ ಪಡೆದಿದ್ದೇನೆ. ಎರಡನೇ ಡೋಸ್ ಮೇ 9ರಂದು ಪಡೆಯಬೇಕಿತ್ತು. ಅದಕ್ಕಾಗಿ ಕಾಯುತ್ತಿದ್ದೇನೆ. ನನಗೆ ಲಸಿಕೆ ಪಡೆದುಕೊಂಡ ನಂತರ ಯಾವುದೇ ಅಡ್ಡಪರಿಣಾಮ ಆಗಿಲ್ಲ. ನೋವು, ಜ್ವರ ಏನೂ ಕಾಣಿಸಿಕೊಂಡಿಲ್ಲ. ಯಾರೂ ಲಸಿಕೆಯ ಬಗ್ಗೆ ಹೆದರಬೇಡಿ. ಕೊರೊನಾ ಲಸಿಕೆ ಪಡೆಯುವುದರಿಂದ ನಿಮಗೇ ಒಳ್ಳೆಯದು. ಅಷ್ಟೇ ಅಲ್ಲ, ನಿಮ್ಮ ಸುತ್ತಲೂ ಇರುವವರಿಗೂ ಒಳ್ಳೆಯದೇ. ಲಸಿಕೆ ಸುರಕ್ಷಿತವಾಗಿದ್ದು, ಸಹಜ ಜೀವನ ನಡೆಸಲು ಇದನ್ನು ಪಡೆಯುವುದೊಂದೇ ಮಾರ್ಗ ಎಂದು ಈ ಅಜ್ಜಿ ಹೇಳಿದ್ದನ್ನು ವಿಡಿಯೋದಲ್ಲಿ ಕೇಳಬಹುದು.
ದೇಶದಲ್ಲಿ ಜನವರಿ 16ರಿಂದ ಕೊವಿಡ್ ಲಸಿಕೆ ವಿತರಣೆ ಶುರುವಾಗಿದ್ದು, ಮೊದಲ ಹಂತದಲ್ಲಿ ಕೊವಿಡ್ ವಾರಿಯರ್ಸ್ಗೆ ನೀಡಲಾಗಿದೆ. ಎರಡನೇ ಹಂತದಲ್ಲಿ 65 ವರ್ಷ ಮೇಲ್ಪಟ್ಟವರಿಗೆ ಮತ್ತು 45 ವರ್ಷ ಮೇಲ್ಪಟ್ಟು, ಇತರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಲಸಿಕೆ ಹಾಕಲಾಗಿತ್ತು. ನಂತರ ಅದನ್ನು 45 ವರ್ಷ ಮೇಲ್ಪಟ್ಟ ಎಲ್ಲರಿಗೂ ವಿಸ್ತರಿಸಲಾಗಿತ್ತು. ಮೂರನೇ ಹಂತದಲ್ಲಿ 18 ವರ್ಷ ಮೇಲ್ಪಟ್ಟವರಿಗೂ ಕೊಡುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.
ಕೊವಿನ್ ಆ್ಯಪ್ ದಾಖಲೆ ಪ್ರಕಾರ, ಮೇ 1-ಮೇ 7ರ ನಡುವೆ ಸುಮಾರು 11.6 ಮಿಲಿಯನ್ ಡೋಸ್ಗಳಷ್ಟು ಲಸಿಕೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಕೊರೊನಾ ಲಸಿಕೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನೀಡಲು ಸರ್ಕಾರಗಳು ಸಿದ್ಧತೆ ನಡೆಸಿವೆ.
Hope this young lady can convert some sceptics pic.twitter.com/WYXpPMrKhd
— Latha Venkatesh (@latha_venkatesh) May 8, 2021
ಇದನ್ನೂ ಓದಿ: ಸಂಸದೆ ಸುಮಲತಾ ಅಂಬರೀಶ್ ವಿಶೇಷ ಸಂದರ್ಶನ: ‘ಕರ್ತವ್ಯ ದೋಷದಿಂದ ಒಂದು ಜೀವ ಹೋದ್ರೂ ಅದಕ್ಕೆ ನಾವೇ ಜವಾಬ್ದಾರಿ…‘