ಆಟೋದ ಮೇಲೆ ದಟ್ಟವಾದ ಹಸಿರು ಪೊದೆ; ಉಷ್ಣತೆಯಿಂದ ಪಾರಾಗಲು ಚಾಲಕನ ಐಡಿಯಾ !
ಹೀಗೆ ಆಟೋ ಮೇಲೆ ಮಹೇಂದ್ರ ಕುಮಾರ್ ಗಿಡಗಳನ್ನು ಬೆಳೆಸಿಕೊಂಡಿದ್ದು ಇದೇ ಮೊದಲೇನೂ ಅಲ್ಲ. ಎರಡು ವರ್ಷಗಳ ಹಿಂದೆ ಹೀಗೆ ಬಿಸಿಲಿನ ಮಟ್ಟ ತೀವ್ರವಾಗಿದ್ದಾಗ ಮೊದಲ ಬಾರಿಗೆ ಪ್ರಯೋಗ ಮಾಡಿದ್ದರು.
ಈಗಂತೂ ದೇಶದೆಲ್ಲೆಡೆ ವಿಪರೀತ ಸೆಖೆ. ಉಷ್ಣತೆ ಗರಿಷ್ಠ ಮಟ್ಟ ತಲುಪಿ ಜನರು ಪರದಾಡುತ್ತಿದ್ದಾರೆ. ಹೀಗಿರುವಾಗ ಒಬ್ಬ ಆಟೋ ಡ್ರೈವರ್ ಸೆಖೆಯಿಂದ ಪಾರಾಗಲು ಮಾಡಿಕೊಂಡಿರುವ ಐಡಿಯಾ ಈಗ ಸಖತ್ ಸುದ್ದಿಯಾಗಿದೆ. ಇವರು ದೆಹಲಿಯಲ್ಲಿ ರಿಕ್ಷಾ ಚಾಲಕನಾಗಿದ್ದು, ಹೆಸರು ಮಹೇಂದ್ರ ಕುಮಾರ್. ದಿನವಿಡೀ ಬಿರುಬಿಸಿಲಿಲ್ಲಿ ಆಟೋ ಓಡಿಸುವ ಇವರು ಸೆಖೆಯಿಂದ ಪಾರಾಗಲು ತಮ್ಮ ಆಟೋದ ಮೇಲೆ ಗಿಡಗಳನ್ನು ಬೆಳೆಸಿದ್ದಾರೆ. ಇವರ ಆಟೋದ ಮೇಲೆ ದೊಡ್ಡದಾದ, ಹಸಿರಾದ, ದಟ್ಟವಾದ ಪೊದೆಯೇ ಬೆಳೆದು ನಿಂತಿದೆ. ಅಂದಹಾಗೇ, ಆಟೋದ ಮೇಲೆ ಸುಮಾರು 20 ವಿವಿಧ ಬಗೆಯ ಗಿಡಗಳಿದ್ದು, ಕೆಲವು ಹೂವು ಬಿಟ್ಟಿವೆ. ಆಟೋ ಮುಂದೆ ಸಾಗುತ್ತಿದ್ದರೆ, ಥೇಟ್ ಒಂದು ಗಾರ್ಡನ್ ಸಂಚರಿಸುದಂತೆ ಕಾಣುತ್ತದೆ. ಅನೇಕರು ಅದರ ಫೋಟೋ, ವಿಡಿಯೋಗಳನ್ನು ತೆಗೆದುಕೊಳ್ಳುತ್ತಿದ್ದಾರೆ.
ಹೀಗೆ ಆಟೋ ಮೇಲೆ ಮಹೇಂದ್ರ ಕುಮಾರ್ ಗಿಡಗಳನ್ನು ಬೆಳೆಸಿಕೊಂಡಿದ್ದು ಇದೇ ಮೊದಲೇನೂ ಅಲ್ಲ. ಎರಡು ವರ್ಷಗಳ ಹಿಂದೆ ಹೀಗೆ ಬಿಸಿಲಿನ ಮಟ್ಟ ತೀವ್ರವಾಗಿದ್ದಾಗ ಮೊದಲ ಬಾರಿಗೆ ಪ್ರಯೋಗ ಮಾಡಿದ್ದರು. ಇದರಿಂದ ನನ್ನ ಆಟೋ ಒಳಗೆ ತುಂಬ ತಂಪಾಗಿರುತ್ತದೆ. ಪ್ರಯಾಣಿಕರೂ ಸೆಖೆಯಿಂದ ಪಾರಾಗಬಹುದು ಎಂದು ಕುಮಾರ್ ಹೇಳಿದ್ದಾಗಿ ಎಎಫ್ಪಿ ವರದಿ ಮಾಡಿದೆ. ಕುಮಾರ್ ತಮ್ಮ ರಿಕ್ಷಾದ ಒಳಗೆ ಎರಡು ಚಿಕ್ಕದಾದ ಕೂಲರ್ ಮತ್ತು ಫ್ಯಾನ್ಗಳನ್ನೂ ಇಟ್ಟುಕೊಂಡಿದ್ದಾರೆ. ಆಟೋ ಮೇಲೆ ಗಿಡಗಳನ್ನು ಇರುವುದನ್ನು ನೋಡಿ ಪ್ರಯಾಣಿಕರು ಖುಷಿಯಾಗುತ್ತಾರೆ. ಎಷ್ಟೋ ಜನ 10-20 ರೂಪಾಯಿ ಹೆಚ್ಚಿಗೆಯೂ ಕೊಡುತ್ತಾರೆ ಎಂದೂ ಕುಮಾರ್ ತಿಳಿಸಿದ್ದಾರೆ.
ಆಟೋದ ಮೇಲ್ಭಾಗದಲ್ಲಿ ಮೊದಲು ಒಂದು ಮ್ಯಾಟ್ ಹಾಕುತ್ತೇನೆ. ನಂತರ ಗೋಣಿಚೀಲ ಹಾಸಿ, ಅದರ ಮೇಲೆ ಮಣ್ಣು ಉದುರಿಸಿದ್ದೇನೆ. ಬಳಿಕ ರಸ್ತೆ ಬದಿಯಲ್ಲಿ ಬೆಳೆಯುವ ಹುಲ್ಲನ್ನೂ ಹಾಕಿದೆ. ಇನ್ನು ಸ್ನೇಹಿತರಿಂದ ಕೆಲವು ಸಸ್ಯಗಳ ಬೀಜವನ್ನು ಪಡೆದು ಅದನ್ನೂ ಹಾಕಿದ್ದೇನೆ. ಒಂದೆರಡು ದಿನದಲ್ಲೇ ಅವು ಸಸಿಯಾಗುತ್ತವೆ ಎಂದು ಆಟೋ ಚಾಲಕ ವಿವರಿಸಿದ್ದಾರೆ. ಇದಕ್ಕೆ ಹೆಚ್ಚಿನ ಶ್ರಮವೇನೂ ಬೇಡ. ನಾನು ದಿನದಲ್ಲಿ ಎರಡು ಬಾಟಲಿ ನೀರು ಹಾಕುತ್ತೇನೆ ಅಷ್ಟೇ ಎಂದೂ ಹೇಳಿದ್ದಾರೆ. (Source)
ಹೆಚ್ಚಿನ ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:49 pm, Tue, 3 May 22