ಇತ್ತೀಚಿನ ದಿನಗಳಲ್ಲಿ ಕೃಷಿ ಕೆಲಸ ಅಂದರೆ ಉಳುಮೆ-ಬಿತ್ತನೆ-ಕಟಾವು ಮುಂತಾದವೆಲ್ಲ ಭಯಂಕರ ದುಬಾರಿಯಾಗಿವೆ, ಹಾಗಾಗಿ ನಾನೊಂದು ಹೆಲಿಕಾಪ್ಟರ್ ಖರೀದಿಸಿ ಅದನ್ನು ಬಾಡಿಗೆಗೆ ಬಿಡಬೇಕು ಅಂಥ ನಿರ್ಧರಿಸಿದ್ದೇನೆ. ಹಾಗಾಗಿ ನನಗೆ 6 ರೂ. ಕೋಟಿಗಳ ಸಾಲವನ್ನು ಮಂಜೂರು ಮಾಡಬೇಕು ಅಂತ ಮಹಾರಾಷ್ಟ್ರದ ಹಿಂಗೋಲಿಯ 22-ವರ್ಷ ವಯಸ್ಸಿನ ರೈತರೊಬ್ಬರು ಬ್ಯಾಕೊಂದಕ್ಕೆ ಸಾಲದ ಅರ್ಜಿ (loan application) ಗುಜರಾಯಿಸಿದ್ದಾರೆ! ಆಂದಹಾಗೆ ಇವರ ಹೆಸರು ಕೈಲಾಸ್ ಪತಂಗೆ (Kailas Patange) ಮತ್ತು ಅವರು ಅರ್ಜಿ ಸಲ್ಲಿಸಿದ್ದು ಬ್ಯಾಂಕ್ ಆಫ್ ಗೊರಗಾಂವ್ (Bank of Goregaon) ಶಾಖೆಗೆ.
ತಮ್ಮೂರಲ್ಲಿ 2-ಎಕರೆ ಜಮೀನು ಹೊಂದಿರುವ ಕೈಲಾಸ್, ಅನಿಯಮಿತ ಮಳೆ, ಮತ್ತು ಬರಗಾಲದಂಥ ಸ್ಥಿತಿಗಳಿಂದಾಗಿ ಇತ್ತೀಚಿನ ಕೆಲ ವರ್ಷಗಳಿಂದ ಕೃಷಿ ಕಾಯಕ ಬಹಳ ದುಬಾರಿಯಾಗಿದೆ ಅಂತ ಹೇಳಿದ್ದಾರೆ.
‘ಕಳೆದ 2 ವರ್ಷಗಳಿಂದ ನನ್ನ ಜಮೀನಲ್ಲಿ ಸೋಯಾಬೀನ್ ಬಿತ್ತಿದ್ದೆ, ಅದರೆ ಅಕಾಲಿಕ ಮಳೆಗಳಿಂದಾಗಿ ನಾನು ನಿರೀಕ್ಷಿಸಿದಷ್ಟು ಪ್ರತಿಫಲ ಸಿಗಲಿಲ್ಲ. ಬೆಳೆ ವಿಮೆ ಮೂಲಕ ಸಿಕ್ಕ ಹಣ ಸಹ ತೀರ ಕಮ್ಮಿ,’ ಎಂದು ಪತಂಗೆ ಪಿಟಿಐ ಸುದ್ದಿಸಂಸ್ಥೆಗೆ ಹೇಳಿದ್ದಾರೆ.
ಈ ಹಿನ್ನೆಲೆಯಲ್ಲೇ ಪತಂಗೆ ಅವರಿಗೆ ಹೆಲಿಕಾಪ್ಟರ್ ಖರೀದಿಸಿ ಅದನ್ನು ಬಾಡಿಗೆಗೆ ಬಿಡುವ ಯೋಚನೆ ಹುಟ್ಟಿಕೊಂಡಿದೆ. ‘ಕೇವಲ ದುಡ್ಡಿರುವವರು ಮಾತ್ರ ದೊಡ್ಡ ದೊಡ್ಡ ಕನಸುಗಳನ್ನು ಕಾಣಬೇಕು ಅಂತ ಎಲ್ಲಿ ಹೇಳಿದೆ. ರೈತರು ಸಹ ದೊಡ್ಡ ಕನಸುಗಳನ್ನು ಕಾಣಬಹುದು. ಒಂದು ಹೆಲಿಕಾಪ್ಟರ್ ಕೊಳ್ಳಲು ನಾನು ರೂ 6.5 ಕೋಟಿ ಸಾಲಕ್ಕೆ ಅರ್ಜಿ ಸಲ್ಲಿಸಿದ್ದೇನೆ. ಬೇರೆ ವ್ಯಾಪಾರಗಳಲ್ಲಿ ಬಹಳ ಪೈಪೋಟಿ ಇದೆ. ಹಾಗಾಗಿ ಇದನ್ನು ಮಾಡೋಣ ಅಂತ ನಾನು ನಿರ್ಧರಿಸಿದೆ,’ ಎಂದು ಪತಂಗೆ ಪಿಟಿಗೆ ಹೇಳಿದ್ದಾರೆ.
ಪ್ರವಾಸ ಮತ್ತು ಪ್ರಯಾಣಕ್ಕಾಗಿ ಹೆಲಿಕಾಪ್ಟರ್‌ಗಳನ್ನು ಬಾಡಿಗೆಗೆ ನೀಡುವುದು ಒಂದು ದೊಡ್ಡ ವ್ಯವಹಾರ ಅನ್ನೋದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ. ಇತ್ತೀಚೆಗೆ ಬ್ಲೇಡ್ ಹೆಸರಿನ ಒಂದು ಬ್ರ್ಯಾಂಡ್ ಗೋವಾದಲ್ಲಿ ಈ ಬಗೆಯ ವ್ಯವಾಹಾರವನ್ನು ಆರಂಭಿಸಿದೆ. ಸ್ಥಳೀಯರು ಮತ್ತು ಪ್ರವಾಸಿಗರಿಗೆ ಚಾಪರ್ ಸೇವೆ ಲಭ್ಯವಿದೆ.
ಹೆಲಿಕಾಪ್ಟರ್ ಸೇವೆಯು ಗೋವಾ ವಿಮಾನ ನಿಲ್ದಾಣದಿಂದ ಉತ್ತರ ಗೋವಾ, ದಕ್ಷಿಣ ಗೋವಾ ಮತ್ತು ಹಳೆಯ ಗೋವಾಕ್ಕೆ-ಪಾರಂಪರಿಕ ಸ್ಮಾರಕಗಳ ಸಮೂಹವನ್ನು ಹೊಂದಿರುವ ಸ್ಥಳಗಳನ್ನು ಸಂಪರ್ಕಿಸುತ್ತದೆ.
ಉತ್ತರ ಗೋವಾದ ಅಗುಡಾ ಹೆಲಿಪ್ಯಾಡ್‌ನಲ್ಲಿ ರಾಜ್ಯದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಈ ಸೇವೆಯನ್ನು ಉದ್ಘಾಟಿಸಿದರು. ಈ ಸೇವೆಯಿಂದಾಗಿ ಪ್ರಯಾಣಿಕರು ಗೋವಾವನ್ನು ಹೆಚ್ಚು ಸುಲಭವಾಗಿ ಮತ್ತು ಸಂಚಾರ ಯೋಗ್ಯವಾಗಿ ಕಂಡುಕೊಳ್ಳುತ್ತಾರೆ ಎಂದು ಕಂಪನಿ ಹೇಳಿದೆ. ಇದಕ್ಕೂ ಮೊದಲು, ಬ್ರಾಂಡ್ ತನ್ನ ಹೆಲಿಕಾಪ್ಟರ್ ಸೇವೆಗಳನ್ನು ಮಹಾರಾಷ್ಟ್ರ ಮತ್ತು ಕರ್ನಾಟಕಗಳಲ್ಲಿ ಆರಂಭಿಸುವ ಘೋಷಣೆ ಮಾಡಿತ್ತು.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.