ನೂಪುರ್ ಶರ್ಮಾ ಹೇಳಿಕೆಗೆ ಹಲವು ದೇಶಗಳ ಆಕ್ಷೇಪ: ಸರ್ಕಾರದ ನಿಲುವು ಮತ್ತೊಮ್ಮೆ ಸ್ಪಷ್ಟಪಡಿಸಿದ ವಿದೇಶಾಂಗ ಸಚಿವ ಜೈಶಂಕರ್
‘ಜನರ ಸಂವೇದನೆಗಳು ಮತ್ತು ಭಾವನೆಗಳಿಗೆ ಈ ಬೆಳವಣಿಗೆಯಿಂದ ಧಕ್ಕೆಯಾಗಿದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ.
ದೆಹಲಿ: ಪ್ರವಾದಿ ಮೊಹಮದ್ ಪೈಗಂಬರ್ ಅವರ ಬಗ್ಗೆ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ (Nupur Sharma) ಮತ್ತು ಬಿಜೆಪಿ ನಾಯಕ ನವೀನ್ ಜಿಂದಾಲ್ (Naveen Jindal) ನೀಡಿದ್ದ ಹೇಳಿಕೆಗೆ ಹಲವು ದೇಶಗಳಿಂದ ಖಂಡನೆ ವ್ಯಕ್ತವಾಗಿತ್ತು. ಆಕ್ಷೇಪಾರ್ಹ ಹೇಳಿಕೆ ನೀಡಿದ ನೂಪುರ್ ಶರ್ಮಾ ಅವರನ್ನು ಬಿಜೆಪಿ ಪಕ್ಷದಿಂದ ಹೊರಹಾಕಿತ್ತು. ಇದು ಸರ್ಕಾರದ ನಿಲುವಲ್ಲ ಎಂದು ಹಲವು ಹಿರಿಯ ನಾಯಕರು ಸ್ಪಷ್ಟಪಡಿಸಿದ್ದರು. ಇದೀಗ ಮತ್ತೊಮ್ಮೆ ಈ ವಿವಾದಕ್ಕೆ ಸಂಬಂಧಿಸಿದಂತೆ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿರುವ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ (External Affairs Minister S Jaishankar) ಸ್ಪಷ್ಟಪಡಿಸಿದ್ದಾರೆ. ‘ಜನರ ಸಂವೇದನೆಗಳು ಮತ್ತು ಭಾವನೆಗಳಿಗೆ ಈ ಬೆಳವಣಿಗೆಯಿಂದ ಧಕ್ಕೆಯಾಗಿದೆ’ ಎಂದು ಹೇಳಿದ್ದಾರೆ.
ಪ್ರವಾದಿಯ ಕುರಿತ ಹೇಳಿಕೆಗೆ ಇತರ ದೇಶಗಳ ಪ್ರತಿಕ್ರಿಯೆಯನ್ನು ‘ಉಪದೇಶ’ ಎಂದು ಭಾವಿಸಲು ಆಗುವುದಿಲ್ಲ ಎಂದು ಹೇಳಿದ ಅವರು, ‘ಅವರು ತಮ್ಮ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನು ಉಪದೇಶ ಎಂದು ತಳ್ಳಿಹಾಕಲು ಆಗುವುದಿಲ್ಲ. ನನಗೆ ಮತ್ತು ಸರ್ಕಾರಕ್ಕೆ ಈ ಬಗ್ಗೆ ಅರಿವು ಇದೆ’ ಎಂದು ಹೇಳಿದರು.
ಕೇವಲ ಮಧ್ಯಪ್ರಾಚ್ಯ ದೇಶಗಳು ಮಾತ್ರವೇ ಈ ಬಗ್ಗೆ ಭಾರತದೊಂದಿಗೆ ತಮ್ಮ ಅಸಮಾಧಾನ ಹೊರಹಾಕಿಲ್ಲ. ಆಗ್ನೇಯ ಏಷ್ಯಾದಂಥ ಹಲವು ದೇಶಗಳೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿವೆ. ಆದರೆ ಈ ದೇಶಗಳಲ್ಲಿ ಸರ್ಕಾರವನ್ನು ಮುನ್ನಡೆಸುವ ನಾಯಕರಿಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ವ್ಯಕ್ತಿ ಮತ್ತು ಸರ್ಕಾರ ಬೇರೆಬೇರೆ ಎಂಬ ಅರಿವು ಇದೆ. ಅಷ್ಟೇ ಅಲ್ಲ, ಭಾರತದ ಸರ್ಕಾರದ ನಿಲುವನ್ನು ಈ ಪೈಕಿ ಹಲವು ದೇಶಗಳು ಮೆಚ್ಚಿಕೊಂಡಿವೆ ಎಂದು ವಿವರಿಸಿದರು.
‘ನಮ್ಮ ದೇಶದೊಂದಿಗೆ (ಆಕ್ಷೇಪ ವ್ಯಕ್ತಪಡಿಸಿರುವ ದೇಶಗಳಿಗೆ) ಹಲವು ರೀತಿಯ ಸಂಬಂಧಗಳನ್ನು ಇವು ಹೊಂದಿವೆ. ನಾವು ಎಂಥವರು ಎಂಬುದು ಇವರಿಗೆ ಗೊತ್ತಾಗಿದೆ’ ಎಂದು ಹೇಳಿದರು.
‘ಕದಡಿದ ನೀರಿನಲ್ಲಿ ಮೀನು ಹಿಡಿಯುವ ಮನಸ್ಥಿತಿಯ ಜನರು ಹಲವರಿದ್ದಾರೆ. ವಿಶ್ವ ರಾಜಕಾರಣ, ವಿವಿಧ ದೇಶಗಳ ನಡುವಣ ಸಂಬಂಧಗಳನ್ನು ನಿರ್ವಹಿಸುವುದು ತುಂಬಾ ಸವಾಲಿನ ಕೆಲಸ. ಬಾಕ್ಸಿಂಗ್ ನಿಯಮಗಳಂತೆ ಆಡಲು ಆಗುವುದಿಲ್ಲ. ಇನ್ನೊಬ್ಬರ ದುರ್ಬಲ ಕ್ಷಣಗಳ ಲಾಭ ಪಡೆಯಲು ಯತ್ನಿಸುವ ಸಾಕಷ್ಟು ಜನರು ಇದದೇ ಇರುತ್ತಾರೆ’ ಎಂದು ಅವರು ಯಾವುದೇ ದೇಶದ ಹೆಸರು ಹೇಳದೆ ಪ್ರತಿಕ್ರಿಯಿಸಿದರು.
ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ಇತ್ತೀಚೆಗೆ ನೀಡಿದ್ದ ಹೇಳಿಕೆಯನ್ನು ಹಲವು ಮುಸ್ಲಿಂ ದೇಶಗಳು ಖಂಡಿಸಿದ್ದವು ಕತಾರ್, ಕುವೈತ್, ಇರಾನ್, ಸೌದಿ ಅರೇಬಿಯಾ, ಒಮಾನ್, ಅಫ್ಘಾನಿಸ್ತಾನ, ಇಂಡೋನೇಷಿಯಾ, ಯುಎಸ್ಇ, ಮಾಲ್ಡೀವ್ಸ್, ಜೋರ್ಡಾನ್, ಬಹ್ರೇನ್ ಮತ್ತು ಲಿಬಿಯಾ ದೇಶಗಳು ಈ ಬಗ್ಗೆ ತಮ್ಮ ಅಕ್ಷೇಪವನ್ನು ಅಧಿಕೃತವಾಗಿ ವ್ಯಕ್ತಪಡಿಸಿದ್ದವು. ಆಕ್ಷೇಪಾರ್ಹ ಹೇಳಿಕೆಯಿಂದ ಸರ್ಕಾರವು ಪ್ರತಿ ಹಂತದಲ್ಲಿಯೂ ಅಂತರ ಕಾಯ್ದುಕೊಂಡು ಬರುತ್ತಿದೆ.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:37 am, Sun, 19 June 22