ಮುಂಬೈ: ಮಹಾರಾಷ್ಟ್ರದಲ್ಲಿ ಮುಂಬೈನ ಕಮಲಾ ಬಿಲ್ಡಿಂಗ್ (Kamala building) ಬೆಂಕಿ ಅವಘಡದ ಕುರಿತು ತನಿಖೆಗಾಗಿ ನಾಲ್ಕು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ ಎಂದು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಆದೇಶವನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್ಐ ಭಾನುವಾರ ವರದಿ ಮಾಡಿದೆ. ಡೆಪ್ಯುಟಿ ಮುನ್ಸಿಪಲ್ ಕಮಿಷನರ್ ಮಟ್ಟದ ಅಧಿಕಾರಿಯ ನೇತೃತ್ವದಲ್ಲಿ ತನಿಖೆ ನಡೆಯಲಿದ್ದು, 15 ದಿನಗಳಲ್ಲಿ ಬಿಎಂಸಿ ಆಯುಕ್ತರಿಗೆ ವರದಿ ಸಲ್ಲಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಮುಂಬೈನ 20 ಅಂತಸ್ತಿನ ಕಮಲಾ ಬಿಲ್ಡಿಂಗ್ನಲ್ಲಿ ಶನಿವಾರ ಬೆಳಗ್ಗೆ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಈ ಘಟನೆಯಲ್ಲಿ ಆರು ಮಂದಿ ಸಾವನ್ನಪ್ಪಿದ್ದು, 23 ಮಂದಿ ಗಾಯಗೊಂಡಿದ್ದಾರೆ. ಅಗ್ನಿಶಾಮಕ ದಳದ ಅಧಿಕಾರಿಗಳಿಗೆ ಬೆಳಗ್ಗೆ 7.28ಕ್ಕೆ ಬೆಂಕಿ ಕಾಣಿಸಿಕೊಂಡ ಬಗ್ಗೆ ಮೊದಲ ಮಾಹಿತಿ ಸಿಕ್ಕಿತು. ಹಂತ 3 (ದೊಡ್ಡ) ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಅಗ್ನಿಶಾಮಕ ದಳವು ಸುಮಾರು ಎರಡೂವರೆ ಗಂಟೆಗಳ ಕಾಲ ತೆಗೆದುಕೊಂಡಿತು ಮತ್ತು ಅದನ್ನು ಸಂಪೂರ್ಣವಾಗಿ ನಂದಿಸಲು ಸುಮಾರು ಐದು ಗಂಟೆಗಳು ಬೇಕಾಗಿ ಬಂತು ಎಂದು ಹಿಂದೂಸ್ತಾನ್ ಟೈಮ್ಸ್ ವರದಿಮಾಡಿದೆ. ಮುಂಬೈನಲ್ಲಿ ಮೂರು ತಿಂಗಳ ಅವಧಿಯಲ್ಲಿ ಸಂಭವಿಸಿದ ನಾಲ್ಕನೇ ದೊಡ್ಡ ಅಗ್ನಿ ಅವಘಡವಾಗಿದೆ ಇದು. ಪ್ರಧಾನಿ ನರೇಂದ್ರ ಮೋದಿ ಅವರು ಅವಘಡದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ (ಪಿಎಂಎನ್‌ಆರ್‌ಎಫ್) ತಲಾ ₹ 2 ಲಕ್ಷ ಪರಿಹಾರವನ್ನು ಘೋಷಿಸಿದರು. ಗಾಯಗೊಂಡವರಿಗೆ ₹ 50,000 ನೀಡುವುದಾಗಿ ಘೋಷಿಸಿದರು.
ಉದ್ಧವ್ ಠಾಕ್ರೆ ಸರ್ಕಾರವು ಮೃತರ ಕುಟುಂಬಕ್ಕೆ ₹ 5 ಲಕ್ಷ ಪರಿಹಾರವನ್ನು ಘೋಷಿಸಿತು ಮತ್ತು ಘಟನೆಯ ಬಗ್ಗೆ ಸೂಕ್ತ ತನಿಖೆಗೆ ಭರವಸೆ ನೀಡಿದೆ.
Mumbai | Fire at Kamala building, Tardeo: A 4-member committee formed to probe the incident. Probe to be presided by Deputy Municipal Commissioner level officer; report to be submitted in 15 days to BMC commissioner, as per BMC
6 dead, 23 injured in the fire incident yesterday.
— ANI (@ANI) January 23, 2022
“ಮುಂಬೈನ ತಾರ್ಡಿಯೊ ಪ್ರದೇಶದಲ್ಲಿ ಕಮಲಾ ಕಟ್ಟಡದಲ್ಲಿ ಸಂಭವಿಸಿದ ಅಗ್ನಿ ದುರಂತದ ಬಗ್ಗೆ ತನಿಖೆ ನಡೆಸಲಾಗುವುದು. ಮುಂಬೈ ಉಪನಗರದ ನಮ್ಮ ಉಸ್ತುವಾರಿ ಸಚಿವ ಆದಿತ್ಯ ಠಾಕ್ರೆ ಮತ್ತು ಮುಂಬೈ ಸಿಟಿ ರಕ್ಷಕ ಸಚಿವ ಅಸ್ಲಾಂ ಶೇಖ್ ಅವರು ಇದನ್ನು ಪರಿಶೀಲಿಸುತ್ತಾರೆ” ಎಂದು ಉಪಮುಖ್ಯಮಂತ್ರಿ ಅಜಿತ್ ಪವಾರ್ ಶನಿವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳ ಪ್ರಕಾರ, ಸಚಿನಮ್ ಹೈಟ್ಸ್ ಬಿಲ್ಡಿಂಗ್ ಎಂದು ಕರೆಯಲ್ಪಡುವ ತಾರ್ಡಿಯೊಸ್ ಕಮಲಾ ಕಟ್ಟಡದಲ್ಲಿ ಅಗ್ನಿಶಾಮಕ ವ್ಯವಸ್ಥೆಯು ಬೆಂಕಿಯ ಸಮಯದಲ್ಲಿ ಕಾರ್ಯನಿರ್ವಹಿಸಲಿಲ್ಲ. “ಕಟ್ಟಡದ ಆಂತರಿಕ ಅಗ್ನಿಶಾಮಕ ವ್ಯವಸ್ಥೆಯು ಕಾರ್ಯನಿರ್ವಹಿಸುತ್ತಿಲ್ಲ, ಮತ್ತು ಕಟ್ಟಡವು ತನ್ನ ದ್ವೈವಾರ್ಷಿಕ ಅಗ್ನಿ ಸುರಕ್ಷತಾ ಆಡಿಟ್ ಅನ್ನು ಅಗ್ನಿಶಾಮಕ ದಳಕ್ಕೆ ಸಲ್ಲಿಸಿಲ್ಲ” ಎಂದು ಮುಂಬೈ ಅಗ್ನಿಶಾಮಕ ದಳದ ಮುಖ್ಯ ಅಗ್ನಿಶಾಮಕ ಅಧಿಕಾರಿ ಹೇಮಂತ್ ಪರಬ್ ಹೇಳಿದ್ದಾರೆ.
ಇದನ್ನೂ ಓದಿ: ಸೀಮಿತ ಸಮಯ, ಸ್ಥಳಾವಕಾಶದ ಕಾರಣದಿಂದ ಗಣರಾಜ್ಯೋತ್ಸವ ಪರೇಡ್ಗೆ ಕೇವಲ 12 ರಾಜ್ಯಗಳ ಸ್ತಬ್ಧಚಿತ್ರಗಳ ಆಯ್ಕೆ: ಕೇಂದ್ರ