ಯೂಟ್ಯೂಬ್​​ನಲ್ಲಿ ವಿಡಿಯೋ ನೋಡಿಕೊಂಡು ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ; ಪಾಲಕರಿಗೆ ಗೊತ್ತಾಗದಂತೆ ನಿಭಾಯಿಸಿದ ರೀತಿ ನಿಜಕ್ಕೂ ಶಾಕಿಂಗ್​​

ಯುವತಿ ಮತ್ತು ಪಕ್ಕದ ಮನೆಯ ಯುವಕನಿಗೆ ಸಂಬಂಧವಿತ್ತು. ಈ ಬಗ್ಗೆ ಅವರ ಕುಟುಂಬದವರಿಗೂ ಗೊತ್ತಿತ್ತು. ಆದರೆ ಹುಡುಗಿ ಗರ್ಭಿಣಿಯಾಗಿದ್ದರ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಯೂಟ್ಯೂಬ್​​ನಲ್ಲಿ ವಿಡಿಯೋ ನೋಡಿಕೊಂಡು ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ; ಪಾಲಕರಿಗೆ ಗೊತ್ತಾಗದಂತೆ ನಿಭಾಯಿಸಿದ ರೀತಿ ನಿಜಕ್ಕೂ ಶಾಕಿಂಗ್​​
ಸಾಂಕೇತಿಕ ಚಿತ್ರ

17 ವರ್ಷದ ಹುಡುಗಿ ಯೂಟ್ಯೂಬ್​​ನಲ್ಲಿ ವಿಡಿಯೋ ನೋಡಿ, ಮಗುವಿಗೆ ಜನನ ನೀಡಿದ ಘಟನೆ ಕೇರಳದಲ್ಲಿ ನಡೆದಿದೆ. ಮಗಳು ಗರ್ಭಿಣಿ ಎಂಬುದು ತಂದೆ-ತಾಯಿಗೂ ಗೊತ್ತಿಲ್ಲ. ಈಕೆ ತನ್ನ ಕೋಣೆಯಲ್ಲಿ ಲಾಕ್​​ ಮಾಡಿಕೊಂಡು, ಮಗುವನ್ನು ಹೆರುವ ವಿಧಾನವನ್ನು ಯೂಟ್ಯೂಬ್​​​ನಲ್ಲಿ ನೋಡಿಕೊಂಡು ಹೆತ್ತಿದ್ದಾಳೆ. ಹಾಗೇ, ಹೆರಿಗೆಯಾದ ಮೇಲೆ ಕೂಡು ಮೂರು ದಿನ ಕೋಣೆಯಲ್ಲೇ ಇದ್ದಳು. 

ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಅಕ್ಟೋಬರ್​ 24ರಂದು ಈ ಘಟನೆ ನಡೆದಿದೆ. ಅಪ್ಪ-ಅಮ್ಮನಿಗೆ ಗೊತ್ತಿಲ್ಲದೆ ಹೆರಿಗೆ ಮಾಡಿಕೊಂಡಿದ್ದ  ಹುಡುಗಿ ಒಂದು ಕೋಣೆಯಲ್ಲಿ ತನ್ನನ್ನು ತಾನು ಲಾಕ್​ ಮಾಡಿಕೊಂಡಿದ್ದಳು. ಆದರೆ ಮಗು ಅಳುವ ಶಬ್ದ ಕೇಳಿದ ಆ ಹುಡುಗಿಯ ತಾಯಿ ಬಾಗಿಲು ಬಡಿದಿದ್ದಾರೆ. ಕೋಣೆ ಬಾಗಿಲು ತೆರೆಯುತ್ತಿದ್ದಂತೆ ತಂದೆ-ತಾಯಿ ಇಬ್ಬರೂ ಶಾಕ್​ ಆಗಿದ್ದಾರೆ. ಹಾಗೇ ಬಾಲಕಿ ಮತ್ತು ಆಕೆಯ ಶಿಶು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದಾರೆ.  ಇನ್ನೂ 17ವರ್ಷ ಆಗಿದ್ದರಿಂದ ಹುಡುಗಿ ಅಪ್ರಾಪ್ತೆಯೆಂದೇ ಪರಿಗಣಿಸಲ್ಪಡುತ್ತಾಳೆ. ಆಸ್ಪತ್ರೆಯವರು ವಿಷಯವನ್ನು ಮಕ್ಕಳ ಕಲ್ಯಾಣ ಸಮಿತಿ (CWC)ಗೆ ತಿಳಿಸಿದ್ದಾರೆ. ಸಮಿತಿಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಬಂದು ವಿಚಾರಣೆ ಮಾಡಿದಾಗ ಯುವತಿ, ಪಕ್ಕದ ಮನೆಯ 21ವರ್ಷದ ಯುವಕನೇ ತನ್ನ ಮಗುವಿನ ತಂದೆ ಎಂದು ಹೇಳಿಕೊಂಡಿದ್ದಾಳೆ. ಅಷ್ಟೇ ಅಲ್ಲ, ಯೂಟ್ಯೂಬ್​  ನೋಡಿ ಮಗುವಿಗೆ ಜನ್ಮ ನೀಡು. ಹೊಕ್ಕುಳಬಳ್ಳಿಯನ್ನು ಕತ್ತರಿಸುವ ವಿಧಾನವೂ ಅದರಲ್ಲೇ ಇರುತ್ತದೆ ಎಂದೂ ತನಗೆ ಹೇಳಿದ್ದಾಗಿ ಪೊಲೀಸರ ಎದುರು ಹೇಳಿಕೊಂಡಿದ್ದಾಳೆ.  ಹುಡುಗಿ ನೀಡಿದ ಮಾಹಿತಿ ಮೇರೆಗೆ ಪೊಲೀಸರು ಯುವಕನನ್ನು ಬಂಧಿಸಿ, ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಯುವತಿ ಮತ್ತು ಪಕ್ಕದ ಮನೆಯ ಯುವಕನಿಗೆ ಸಂಬಂಧವಿತ್ತು. ಈ ಬಗ್ಗೆ ಅವರ ಕುಟುಂಬದವರಿಗೂ ಗೊತ್ತಿತ್ತು. ಆದರೆ ಹುಡುಗಿ ಗರ್ಭಿಣಿಯಾಗಿದ್ದರ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. ಇನ್ನು ಹುಡುಗಿ ತಾನು ಗರ್ಭಿಣಿಯಾದಾಗಿನಿಂದಲೂ ದಿನದ ಬಹುತೇಕ ಸಮಯ ಕೋಣೆಯಲ್ಲೇ ಕಳೆಯುತ್ತಿದ್ದಳು. ಕೇಳಿದರೆ ನನಗೆ ಆನ್​ಲೈನ್​ ಕ್ಲಾಸ್​ ಇದೆ ಎನ್ನುತ್ತಿದ್ದಳು. ಹೀಗೆ ಮಾಡಿಯೇ ತನ್ನ ಪಾಲಕರಿಂದ ಪಾರಾಗಿದ್ದಳು ಎಂದು ಮಾಹಿತಿ ನೀಡಿದ್ದಾರೆ. ಘಟನೆ ಬಗ್ಗೆ ಮಕ್ಕಳ ಕಲ್ಯಾಣ ಸಮಿತಿ ಕೂಡ ಅಚ್ಚರಿ ವ್ಯಕ್ತಪಡಿಸಿದೆ. ಈ ಹುಡುಗಿ ಗರ್ಭಿಣಿಯಾಗಿದ್ದು ಆಕೆಯ ತಾಯಿಗೂ ಗೊತ್ತಾಗದೆ ಇರುವುದು ವಿಚಿತ್ರ ಎಂದು ಹೇಳಿದೆ. ಆದರೆ ಯುವತಿಯ ತಾಯಿಗೆ ದೃಷ್ಟಿ ದೋಷ ಇರುವ ಕಾರಣ ಮಗಳ ಬಗ್ಗೆ ಅರಿವು ಉಂಟಾಗಲಿಲ್ಲ. ಇನ್ನು ಇವಳ ತಂದೆ ಸೆಕ್ಯೂರಿಟಿ ಗಾರ್ಡ್​ ಆಗಿದ್ದು ರಾತ್ರಿಯೆಲ್ಲ ಮನೆಗೆ ಬರುವುದಿಲ್ಲ. ಇದೇ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಹುಡುಗ-ಹುಡುಗಿ ತಮ್ಮ ಸಂಬಂಧ ಮುಂದುವರಿಸಿದ್ದರು. ಗರ್ಭಿಣಿಯಾದಾಗಲೂ ಆಕೆಗೆ ಪರಿಸ್ಥಿತಿ ನಿಭಾಯಿಸುವುದು ಸುಲಭವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

Click on your DTH Provider to Add TV9 Kannada