ಕೋಳಿ ಕಾಳಗವೆಂಬುದು(cockfight) ಭಾರತದಲ್ಲಿ ಆಂಧ್ರಪ್ರದೇಶ, ಒಡಿಶಾ, ತೆಲಂಗಾಣ, ತಮಿಳುನಾಡು ರಾಜ್ಯಗಳಲ್ಲಿ ಬಹುಮುಖ್ಯ. ಹೀಗೆ ಕಾಳಗಕ್ಕೆಂದೇ ಕೋಳಿಗಳನ್ನು ವಿಶೇಷವಾಗಿ ಪಳಗಿಸಲಾಗುತ್ತದೆ. ಕೋಳಿಗಳ ಕಾಲಿಗೆ ಚಾಕು, ಬ್ಲೇಡ್ಗಳನ್ನು ಕಟ್ಟಿ ಕಾಳಗಕ್ಕೆ ಬಿಡುವ ಪದ್ಧತಿಯೂ ಇದೆ. ಆದರೆ ಈ ಪದ್ಧತಿ ವ್ಯಕ್ತಿಯೊಬ್ಬರ ಜೀವ ತೆಗೆದ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ. 1960ರಿಂದಲೇ ದೇಶದಲ್ಲಿ ಕೋಳಿ ಕಾಳಗ ಕಾನೂನು ಬಾಹಿರ. ಆದರೂ ಕೂಡ ಜನರು ಅದನ್ನೊಂದು ಸಂಪ್ರದಾಯವೆಂಬಂತೆ ಆಚರಿಸುತ್ತಾರೆ. ಕೆಲವು ಆಯೋಜಕರು ಕೋಳಿ ಕಾಳಗ ಏರ್ಪಡಿಸಿ ಗೆದ್ದವರಿಗೆ ಇಂತಿಷ್ಟು ಬಹುಮಾನ ಎಂದು ಘೋಷಿಸುವುದು ಇದೆ. ಇಲ್ಲವೆ, ಸುಮ್ಮನೆ ಇಬ್ಬರು ವ್ಯಕ್ತಿಗಳು ತಮ್ಮ ಹುಂಜಗಳನ್ನು ಕಾಳಗಕ್ಕೆ ಬಿಟ್ಟು, ಸೋತವರು ಗೆದ್ದವರಿಗೆ ಇಷ್ಟು ಕೊಡಬೇಕು ಎಂದು ಸವಾಲು ಹಾಕಿಕೊಳ್ಳುವುದೂ ನಡೆಯುತ್ತದೆ. ಅದರಾಚೆ, ಕಾಳಗದಲ್ಲಿ ಕಣದಲ್ಲಿ ಇದ್ದವರ ಹೊರತಾಗಿ ಬೇರೆಯವರೂ ಕೂಡ ಇದೇ ಕೋಳಿ ಗೆಲ್ಲುತ್ತದೆಂದು ಬೆಟ್ ಕಟ್ಟಿಕೊಳ್ಳುವುದೂ ನಡೆಯುತ್ತದೆ. ಪ್ರಾಣಿ ರಕ್ಷಣಾ ಎನ್ಜಿಒಗಳು ಇದನ್ನು ಪ್ರಬಲವಾಗಿ ವಿರೋಧಿಸುತ್ತಿದ್ದರೂ ಸಂಪೂರ್ಣವಾಗಿ ಇನ್ನೂ ನಿಷೇಧ ಗೊಂಡಿಲ್ಲ.
ಹಾಗೇ, ಕಳೆದ ನಾಲ್ಕು ದಿನಗಳ ಹಿಂದೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪೆದ್ದಮಂಡ್ಯಂ ಮಂಡಲದ ಕಲಿಚೆರ್ಲ ಗ್ರಾಮದ ಹೊರವಲಯದಲ್ಲಿರುವ ಪರುಶ ತೋಪು ಆವರಣದಲ್ಲಿ ಕೋಳಿ ಕಾಳಗ ನಡೆದಿತ್ತು. ದಷ್ಟಪುಷ್ಟವಾದ ಎರಡು ಕೋಳಿಗಳನ್ನು ಕಣದಲ್ಲಿ ಬಿಡಲಾಗಿತ್ತು. ಎರಡೂ ಕೋಳಿಗಳ ಕಾಲಿಗೆ ಹರಿತವಾದ ಬ್ಲೇಡ್ ಕಟ್ಟಲಾಗಿತ್ತು. ಆದರೆ ಈ ಬ್ಲೇಡ್ ವ್ಯಕ್ತಿಯೊಬ್ಬನ ಪಾಲಿಗೆ ಮೃತ್ಯುವಾಗಿದೆ. ಅಲ್ಲಿಯೇ ನಿಂತಿದ್ದ 37ವರ್ಷದ ಗಂಗೂಲಯ್ಯ ಎಂಬುವರ ಪಾದಕ್ಕೆ ತೀಕ್ಷ್ಣವಾಗಿಯೇ ತಾಗಿದೆ. ಸರಿಯಾಗಿ ರಕ್ತನಾಳಕ್ಕೇ ತಗುಲಿದ್ದರಿಂದ ಅದು ಕತ್ತರಿಸಿ, ತೀವ್ರ ರಕ್ತಸ್ರಾವವಾಗಿತ್ತು. ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದರೂ ಕೂಡ ಬದುಕುಳಿಯಲಿಲ್ಲ ಎಂದು ಹೇಳಲಾಗಿದೆ. ಮೃತ ವ್ಯಕ್ತಿ ಕುರಬಳಕೋಟ ಮಂಡಲದ ಮುಡಿವೇಡು ಕ್ರಾಸ್ ನಿವಾಸಿಯಾಗಿದ್ದರು.
ಆಗಲೇ ಹೇಳಿದಂತೆ ಕೋಳಿ ಕಾಳಗ ಕಾನೂನು ಬಾಹಿರ. ಇದನ್ನು ನಡೆಸಬಾರದು ಎಂದು ಸುಪ್ರೀಂಕೋರ್ಟ್ 2015ರಲ್ಲಿ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಇದೇ ಆದೇಶವನ್ನು 2016ರಲ್ಲಿ ಹೈದರಾಬಾದ್ ಹೈಕೋರ್ಟ್ ಎತ್ತಿಹಿಡಿದಿದೆ. ಹಾಗಿದ್ದಾಗ್ಯೂ ಕೂಡ ದೇಶದಲ್ಲಿ ಕದ್ದುಮುಚ್ಚಿ ಈ ಕೋಳಿ ಫೈಟ್ ನಡೆಯುತ್ತಲೇ ಇದೆ. ಈ ಕೋಳಿ ಕಾಳಗವನ್ನು ಮಾಜಿ ಶಾಸಕ ಕಲಿಚೆರ್ಲಾ ಪ್ರಭಾಕರ್ ರೆಡ್ಡಿಯವರ 11ನೇ ಪುಣ್ಯಸ್ಮರಣೆ ನಿಮಿತ್ತ ಅವರ ಹತ್ತಿರ ಸಂಬಂಧಿಯೊಬ್ಬರು ಆಯೋಜಿಸಿದ್ದರು ಎನ್ನಲಾಗಿದೆ. ಆದರೆ ಇದನ್ನು ಪೆದ್ದಮಂಡ್ಯಮ್ ಪೊಲೀಸರು ಇನ್ನೂ ದೃಢಪಡಿಸಿಲ್ಲ. ಘಟನೆಗೆ ಸಂಬಂಧಪಟ್ಟಂತೆ ಈಗಾಗಲೇ ಪೊಲೀಸರು ಪ್ರಕರಣ ದಾಖಲಿಸಿಕೊಂಡು 13 ಮಂದಿಯನ್ನು ಬಂಧಿಸಿದ್ದಾರೆ.
ಅಂದಹಾಗೇ, ಇಂಥ ಘಟನೆ ನಡೆದಿದ್ದು ಇದೇ ಮೊದಲಲ್ಲ. 2021ರ ಫೆಬ್ರವರಿ 23ರಂದು ತೆಲಂಗಾಣದ ಜಗ್ತಿಯಾಲ್ ಜಿಲ್ಲೆಯ ಗೊಲ್ಲಪಲ್ಲಿ ಮಂಡಲದ ಲೋತುನೂರ್ನಲ್ಲಿ ಹೀಗೇ ಆಗಿತ್ತು. ಕಾಳಗಕ್ಕೆಂದು ಹುಂಜದ ಕಾಲಿಗೆ ಕಟ್ಟಿದ್ದ ಚಾಕುವೊಂದು ಚುಚ್ಚಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದರು. ಅದೇ ರೀತಿ 2020ರ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿನ ಚಿಂತಲಪುಡಿ ಮಂಡಲದ ಪ್ರಗಡವರಂನಲ್ಲಿ ನಡೆದ ಕೋಳಿ ಕಾಳಗದಲ್ಲಿ ಹುಂಜಕ್ಕೆ ಕಟ್ಟಿದ ಚಾಕು ತೊಡೆಗೆ ಚುಚ್ಚಿದ ಪರಿಣಾಮ ತೀವ್ರ ರಕ್ತಸ್ರಾವದಿಂದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು.
ಇದನ್ನೂ ಓದಿ: ‘ಪೊಲೀಸರು, ಅಧಿಕಾರಿಗಳು ನೌಕರರಾಗಿ ಕೆಲಸ ಮಾಡುತ್ತಿಲ್ಲ; ಬಿಜೆಪಿ ಕಾರ್ಯಕರ್ತರಂತೆ ಕೆಲಸ ಮಾಡುತ್ತಿದ್ದಾರೆ’