Melanistic Tiger: ಒಡಿಶಾದ ಸಿಮಿಲಿಪಾಲ್‌ದಲ್ಲಿ ಅಪರೂಪದ ಮೆಲನಿಸ್ಟಿಕ್ ಹುಲಿ ಸಾವು
ಅಪರೂಪದ ಮೆಲನಿಸ್ಟಿಕ್ ಹುಲಿಯೊಂದು ಸಾವನ್ನಪ್ಪಿರುವ ಘಟನೆ ಒಡಿಶಾದ ಸಿಮಿಲಿಪಾಲ್ ರಾಷ್ಟ್ರೀಯ ಉದ್ಯಾನವನದ ಕೋರ್ ಪ್ರದೇಶದಲ್ಲಿ ನಡೆದಿದೆ ಎಂದು ಹಿರಿಯ ಅರಣ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬರಿಪಾದ: ಅಪರೂಪದ ಮೆಲನಿಸ್ಟಿಕ್ ಹುಲಿಯೊಂದು (Melanistic Tiger) ಸಾವನ್ನಪ್ಪಿರುವ ಘಟನೆ ಒಡಿಶಾದ ಸಿಮಿಲಿಪಾಲ್ ರಾಷ್ಟ್ರೀಯ ಉದ್ಯಾನವನದ ಕೋರ್ ಪ್ರದೇಶದಲ್ಲಿ ನಡೆದಿದೆ ಎಂದು ಹಿರಿಯ ಅರಣ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನವನಾದ ಬಡಮಕ್ಕಬಾಡಿ-ಎಲ್‌ಎಲ್ ಬೀಟ್ ಪ್ರದೇಶದಲ್ಲಿ ಸಿಮಿಲಿಪಾಲ್ ದಕ್ಷಿಣ ವಿಭಾಗದ ಸಿಬ್ಬಂದಿ ಇದನ್ನು ಪತ್ತೆ ಮಾಡಿದ್ದಾರೆ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸುಶೀಲ್ ಕುಮಾರ್ ಪೊಪ್ಲಿ ತಿಳಿಸಿದ್ದಾರೆ. ಅಪರೂಪದ ಮೆಲನಿಸ್ಟಿಕ್ ಹುಲಿ ಈ ಹಿಂದೆ ಭಾರೀ ವೈರಲ್ ಆಗಿತ್ತು, ಇದೀಗ ಸಾವನ್ನಪ್ಪಿದೆ ಎಂದು ಹೇಳಲಾಗಿದೆ.
ಮೂರೂವರೆ ವರ್ಷದ ಗಂಡು ಹುಲಿ ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ, ಆದರೆ ಮತ್ತೊಂದು ಹುಲಿಯೊಂದಿಗಿನ ಕಾದಾಟದಲ್ಲಿ ಇದು ಸಾವನ್ನಪ್ಪಿರುವ ಶಂಕೆ ಇದೆ ಎಂದು ಸಿಬ್ಬಂದಿಗಳು ಸೋಮವಾರ ಹೇಳಿದರು.
ಹುಲಿಯ ಮೃತದೇಹದಲ್ಲಿ ಗೀರುಗಳ ಗುರುತುಗಳಿದ್ದು, ಇದು ಎರಡು ಹುಲಿಗಳ ನಡುವಿನ ಕದನವೇ ಇದರ ಸಾವಿಗೆ ಕಾರಣ ಎಂದು ಅರಣ್ಯಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಯಾವುದೇ ಹುಲಿಗಳು ಮೂರು ವರ್ಷ ವಯಸ್ಸಿನ ನಂತರ ಕಾಡಿನ ಅನೇಕ ಕಡೆ ಸುತ್ತಾಡುತ್ತದೆ. ಈ ಸಮಯದಲ್ಲಿ ಇದರ ಮುಂದೆ ಎದುರಾಗುವ ಇತರ ಹುಲಿಗಳ ಜತೆಗೆ ಕಾದಡುತ್ತದೆ ಎಂದು ಸುಶೀಲ್ ಕುಮಾರ್ ಪೊಪ್ಲಿ ಹೇಳಿದರು.
ಹುಲಿಯ ಸಾವಿನ ನಂತರ ಅದರ ದೇಹವನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ತಿಳಿಯಬಹುದು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಪ್ರತಿನಿಧಿ ಸೇರಿದಂತೆ ಇತರರ ಸಮ್ಮುಖದಲ್ಲಿ ಸೋಮವಾರ ಪ್ರಾಣಿಯ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಮಾದರಿಗಳನ್ನು ಒಡಿಶಾ ಕೃಷಿ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ ಮತ್ತು ಭಾರತೀಯ ವನ್ಯಜೀವಿ ಸಂಸ್ಥೆಗೆ ವಿಶ್ಲೇಷಣೆಗಾಗಿ ಕಳುಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:Viral Video : ಈ ಕಪ್ಪು ಹುಲಿ ಇರುವುದು ಒಡಿಶಾದ ಸಿಮಿಲಿಪಲ್ ರಾಷ್ಟ್ರೀಯ ಉದ್ಯಾನದಲ್ಲಿ
ಮರಣೋತ್ತರ ಪರೀಕ್ಷೆಯ ನಂತರ ಹುಲಿ ದೇಹವನ್ನು ಕಾನೂನಿನಂತೆ ಸುಡಲಾಯಿತು. ಸಿಮಿಲಿಪಾಲ್ ರಾಷ್ಟ್ರೀಯ ಉದ್ಯಾನವನವು 18 ರಾಯಲ್ ಬೆಂಗಾಲ್ ಟೈಗರ್‌ಗಳನ್ನು ಹೊಂದಿದ್ದು, ಅವುಗಳಲ್ಲಿ ಎಂಟು ಅಥವಾ ಒಂಬತ್ತು ಮೆಲನಿಸ್ಟಿಕ್ ವಿಧಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:09 pm, Tue, 2 May 23