ಭೋಪಾಲ್: ಮಧ್ಯಪ್ರದೇಶದ (Madhya Pradesh) ಸಾಗರ್ ನಗರದಲ್ಲಿರುವ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿಯೊಬ್ಬಳು ಕ್ಲಾಸ್ರೂಂನಲ್ಲಿಯೇ ನಮಾಜ್ ಮಾಡಿದ ಫೋಟೋ, ವಿಡಿಯೋ ಸಿಕ್ಕಾಪಟೆ ವೈರಲ್ ಆಗುತ್ತಿರುವ ಬೆನ್ನಲ್ಲೇ, ಯೂನಿರ್ವಸಿಟಿ ಈ ಬಗ್ಗೆ ತನಿಖೆ ಆದೇಶ ನೀಡಿದೆ. ಸಾಗರ್ನಲ್ಲಿರುವ ಡಾ.ಹರಿಸಿಂಗ್ ಗೌರ್ ವಿಶ್ವವಿದ್ಯಾಲಯದ ತರಗತಿ ಕೋಣೆಯೊಂದರಲ್ಲಿ ಯುವತಿ ನಮಾಜ್ ಮಾಡುತ್ತಿರುವ ವಿಡಿಯೋವನ್ನು ಹಿಂದು ಜಾಗರಣ ಮಂಚ್ ಮೊದಲು ಬಿಡುಗಡೆ ಮಾಡಿತ್ತು. ಅದು ಯೂನಿವರ್ಸಿಟಿಯ ಗಮನಕ್ಕೂ ತಂದಿದೆ. ವಿಶ್ವವಿದ್ಯಾಲಯಕ್ಕೆ ಈ ವಿಡಿಯೋ ಸಲ್ಲಿಸಿದ ಹಿಂದು ಜಾಗರಣ್ ಮಂಚ್, ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿಯನ್ನೂ ಮಾಡಿತ್ತು.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಹಿಂದು ಜಾಗರಣ ಮಂಚ್ ಸಾಗರ ಘಟಕದ ಅಧ್ಯಕ್ಷ ಉಮೇಶ್ ಸರಫ್, ವಿದ್ಯಾರ್ಥಿನಿ ಅನೇಕ ದಿನಗಳಿಂದಲೂ ಹಿಜಾಬ್ ಧರಿಸಿಯೇ ತರಗತಿಗೆ ಬರುತ್ತಿದ್ದಾಳೆ. ಅಷ್ಟೇ ಅಲ್ಲ ಶುಕ್ರವಾರ ಯೂನಿವರ್ಸಿಟಿ ಕ್ಲಾಸ್ ರೂಂನಲ್ಲಿಯೇ ನಮಾಜ್ ಕೂಡ ಮಾಡಿದ್ದು, ವಿಡಿಯೋ ಸಾಕ್ಷಿಗಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಇಂಥ ಧಾರ್ಮಿಕ ಚಟುವಟಿಕೆಗಳಿಗೆ ಅನುಮತಿ, ಅವಕಾಶ ಇರುವುದಿಲ್ಲ. ನಾವು ಈ ವಿಚಾರವಾಗಿ ಯೂನಿರ್ವಸಿಟಿಯ ಉಪಕುಲಪತಿ ಮತ್ತು ರಿಜಿಸ್ಟ್ರಾರ್ಗೆ ದೂರು ನೀಡಿದ್ದೇವೆ ಎಂದು ತಿಳಿಸಿದ್ದಾರೆ. ಇದೇ ವೇಳೆ ಕರ್ನಾಟಕ ಹಿಜಾಬ್ ವಿವಾದಕ್ಕೆ ಸಂಬಂಧಪಟ್ಟಂತೆ ಹೈಕೋರ್ಟ್ ನೀಡಿರುವ ತೀರ್ಪನ್ನೂ ಉಲ್ಲೇಖಿಸಿದ್ದಾರೆ.
ದೂರಿನ ಬಗ್ಗೆ ಪ್ರತಿಕ್ರಿಯೆ ನೀಡಿದ ಡಾ. ಹರಿಸಿಂಗ್ ಗೌರ್ ಸಾಗರ್ ಯೂನಿರ್ವಸಿಟಿ ಉಪಕುಲಪತಿ ನೀಲಿಮಾ ಗುಪ್ತಾ, ನಾವು ಈಗಾಗಲೇ ತನಿಖೆ ಪ್ರಾರಂಭಿಸಿದ್ದೇವೆ. ವಿದ್ಯಾರ್ಥಿನಿ ತರಗತಿಯಲ್ಲಿ ನಮಾಜ್ ಮಾಡಿದ್ದರ ಬಗ್ಗೆ ತನಿಖೆ ನಡೆಸಲು ಒಂದು ಸಮಿತಿಯನ್ನು ರಚಿಸಿದ್ದೇವೆ. ಅಷ್ಟೇ ಅಲ್ಲ, ಇದೊಂದು ಕೇಂದ್ರೀಯ ವಿಶ್ವವಿದ್ಯಾಲಯ. ಇಲ್ಲಿ ಯಾವುದೇ ಧರ್ಮದವರಿಗೂ ಧಾರ್ಮಿಕ ಆಚರಣೆಗೆ ಅವಕಾಶವಿಲ್ಲ. ಅವರು ತಮ್ಮ ಖಾಸಗಿ ಸ್ಥಳಗಳಲ್ಲಿ ಮತ್ತು ಆಯಾ ಧರ್ಮದವರ ಧಾರ್ಮಿಕ ಕ್ಷೇತ್ರಗಳಲ್ಲಿ ಆಚರಣೆ ಮಾಡಿಕೊಳ್ಳಬಹುದು ಎಂದು ವಿದ್ಯಾರ್ಥಿಗಳಿಗೆ ಸ್ಪಷ್ಟ ಸಂದೇಶ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಇನ್ನು ಕರ್ನಾಟಕದಲ್ಲಿ ಹಿಜಾಬ್ ವಿವಾದ ಯಾವ ಮಟ್ಟಕ್ಕೆ ತಲುಪಿದೆ ಎಂದು ಇಡೀ ದೇಶ ನೋಡಿದೆ. ಸದ್ಯ ಹೈಕೋರ್ಟ್ ಕೂಡ ತೀರ್ಪು ನೀಡಿದ್ದು, ಹಿಜಾಬ್ ಇಸ್ಲಾಮ್ನಲ್ಲಿ ಅತ್ಯಗತ್ಯ ಅಂಶವಲ್ಲ. ಹೀಗಾಗಿ ಕ್ಲಾಸ್ ರೂಮಿಗೆ ಹೋಗುವಾಗ ಹಿಜಾಬ್ ಧರಿಸಿ ಹೋಗುವಂತಿಲ್ಲ ಎಂದು ಹೇಳಿದೆ. ಈ ಆದೇಶದ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲು ಏರಿದವರೂ ಇದ್ದಾರೆ.
ಇದನ್ನೂ ಓದಿ: ಗ್ಯಾಸ್ಟ್ರಿಕ್ ಸಮಸ್ಯೆ ಇದ್ದವರು ಇವುಗಳನ್ನ ಸೇವಿಸಿ; ತಕ್ಷಣ ನಿವಾರಣೆಯಾಗುತ್ತದೆ