ಉತ್ತರಾಖಂಡ್​ ವಿಧಾನಸಭೆ ಸ್ಪೀಕರ್ ಆಗಿ ರಿತು ಖಂಡೂರಿ ಭೂಷಣ್ ಆಯ್ಕೆ; ರಾಜ್ಯದ ಇತಿಹಾಸದಲ್ಲಿ ಮೊದಲ ಮಹಿಳಾ ಸ್ಪೀಕರ್​ ಇವರು

ಉತ್ತರಾಖಂಡ್​ ವಿಧಾನಸಭೆ ಅಧ್ಯಕ್ಷರಾಗಿ ನೇಮಕವಾಗುತ್ತಿದ್ದಂತೆ ಟ್ವೀಟ್ ಮಾಡಿರುವ ರಿತು, ಬಿಜೆಪಿ ಸದಸ್ಯರು ಮತ್ತು ಪ್ರತಿಪಕ್ಷಗಳ ನಾಯಕರಿಗೆ ನನ್ನ ಧನ್ಯವಾದಗಳು. ಸಂಸದೀಯ ಸಂಪ್ರದಾಯ ಮತ್ತು ಪರಿಕಲ್ಪನೆಗಳನ್ನು ಪೂರೈಸಲು ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದ್ದಾರೆ.

ಉತ್ತರಾಖಂಡ್​ ವಿಧಾನಸಭೆ ಸ್ಪೀಕರ್ ಆಗಿ ರಿತು ಖಂಡೂರಿ ಭೂಷಣ್ ಆಯ್ಕೆ; ರಾಜ್ಯದ ಇತಿಹಾಸದಲ್ಲಿ ಮೊದಲ ಮಹಿಳಾ ಸ್ಪೀಕರ್​ ಇವರು
ರಿತು ಖಂಡೂರಿ ಭೂಷಣ್​
Follow us
TV9 Web
| Updated By: Lakshmi Hegde

Updated on:Mar 26, 2022 | 4:51 PM

ಉತ್ತರಾಖಂಡ್​ನ ನೂತನ ಸ್ಪೀಕರ್ (5ನೇ ಸ್ಪೀಕರ್​)​ ಆಗಿ ರಿತು ಖಂಡೂರಿ ಭೂಷಣ್​​ (Ritu Khanduri Bhushan )ನೇಮಕವಾಗಿದ್ದಾರೆ. ಅವರು ಈ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದು, ಉತ್ತರಾಖಂಡ್​ ಇತಿಹಾಸದಲ್ಲಿಯೇ ಮೊದಲ ಮಹಿಳಾ ಸ್ಪೀಕರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಉತ್ತರಾಖಂಡದ ಕೋಟ್‌ದ್ವಾರ ವಿಧಾನಸಭೆ ಕ್ಷೇತ್ರದ ಶಾಸಕಿಯಾಗಿದ್ದರು. ರಿತು ಅವರು ಗುರುವಾರ ಡೆಹ್ರಾಡೂನ್​​ನಲ್ಲಿ ಮುಖ್ಯಮಂತ್ರಿ ಪುಷ್ಕರ್​ ಸಿಂಗ್​ ಧಾಮಿ ಮತ್ತು ಇತರ ಬಿಜೆಪಿ ನಾಯಕರ ಸಮ್ಮುಖದಲ್ಲಿ ವಿಧಾನಸಭೆ ಕಾರ್ಯದರ್ಶಿ ಮುಖೇಶ್ ಸಿಂಘಾಲ್​ಗೆ ತಮ್ಮ ನಾಮಪತ್ರ ಸಲ್ಲಿಕೆ ಮಾಡಿದ್ದರು.

ಉತ್ತರಾಖಂಡ್​ ವಿಧಾನಸಭೆ ಅಧ್ಯಕ್ಷರಾಗಿ ನೇಮಕವಾಗುತ್ತಿದ್ದಂತೆ ಟ್ವೀಟ್ ಮಾಡಿರುವ ರಿತು, ಬಿಜೆಪಿ ಸದಸ್ಯರು ಮತ್ತು ಪ್ರತಿಪಕ್ಷಗಳ ನಾಯಕರಿಗೆ ನನ್ನ ಧನ್ಯವಾದಗಳು. ಸಂಸದೀಯ ಸಂಪ್ರದಾಯ ಮತ್ತು ಪರಿಕಲ್ಪನೆಗಳನ್ನು ಪೂರೈಸಲು ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉತ್ತರಾಖಂಡ್​​ನ ಮೊದಲ ಮಹಿಳಾ ಸ್ಪೀಕರ್​ ಆಗಿ ನಾನು ನೇಮಕಗೊಳ್ಳುತ್ತಿರುವುದು ಬರೀ ನನಗಷ್ಟೇ ಹೆಮ್ಮೆಯ ವಿಚಾರವಲ್ಲ, ಇಡೀ ಉತ್ತರಾಖಂಡ್​ ಪಾಲಿಗೇ ಹೆಮ್ಮೆ. ಮಹಿಳೆಯೊಬ್ಬರಿಗೆ ಪ್ರಾಶಸ್ತ್ಯ ನೀಡಿದ್ದು ನಿಜಕ್ಕೂ ಖುಷಿ ತಂದಿದೆ ಎಂದು ಹೇಳಿದ್ದಾರೆ. ಇನ್ನು ಉತ್ತರಾಖಂಡ್ ಸಿಎಂ ಪುಷ್ಕರ್ ಸಿಂಗ್ ಧಾಮಿ ರಿತು ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಅವರು ಸದನವನ್ನು ಚೆನ್ನಾಗಿ ನಡೆಸಬಲ್ಲರು ಎಂಬ ನಂಬಿಕೆ ಇದೆ ಎಂದು ಹೇಳಿದ್ದಾರೆ.

ರಿತು ಅವರು ಉತ್ತರಾಖಂಡ್ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಮೇಜರ್ ಜನರಲ್​  (ನಿವೃತ್ತ) ಭುವನ್ ಚಂದ್ರ ಖಂಡೂರಿ ಅವರ ಪುತ್ರಿ. ಈ ಬಾರಿ ಕೋಟ್‌ದ್ವಾರ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.  ಕಾಂಗ್ರೆಸ್​​ನ ಸುರೇಂದ್ರ ಸಿಂಗ್ ನೇಗಿಯವರ ವಿರುದ್ಧ ಸುಮಾರು 3,687 ಮತಗಳ ಅಂತರದಿಂದ ಗೆದ್ದಿದ್ದಾರೆ. ಒಂದು ಗಮನಾರ್ಹ ಸಂಗತಿಯೆಂದರೆ ಇದೇ ಕ್ಷೇತ್ರದಲ್ಲಿ ರಿತು ಅವರ ತಂದೆ ಭುವನ್​ ಚಂದ್ರ ಖಂಡೂರಿಯವರನ್ನು ಸುರೇಂದ್ರ ಸಿಂಗ್ ನೇಗಿ 2012ರಲ್ಲಿ ಸೋಲಿಸಿದ್ದರು. ರಿತು 2017ರಲ್ಲಿ ಉತ್ತರಾಖಂಡ್​ನ ಯಮ್ಕೇಶ್ವರ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. ಆದರೆ ಈ ಬಾರಿ ಯಮ್ಕೇಶ್ವರ್​ನಿಂದ ಟಿಕೆಟ್ ನೀಡಲು ಬಿಜೆಪಿ ನಿರಾಕರಿಸಿ, ಕೋಟ್​ದ್ವಾರದಿಂದ ಕೊಟ್ಟಿತ್ತು.

ಭುವನ್ ಚಂದ್ರ ಖಂಡೂರಿ ಉತ್ತರಾಖಂಡ್​​ನಲ್ಲಿ 2007ರಿಂದ 2009ರವರೆಗೆ ಮುಖ್ಯಮಂತ್ರಿಯಾಗಿದ್ದರು.  ಮತ್ತೆ 2011-2012ರವರೆಗೆ ಕೂಡ ಸಿಎಂ ಹುದ್ದೆಯಲ್ಲಿ ಇದ್ದರು. ಆದರೆ 2012ರಲ್ಲಿ ಸುರೇಂದ್ರ ಸಿಂಗ್ ನೇಗಿ ವಿರುದ್ಧ ಕೋಟ್​ದ್ವಾರ್​ನಲ್ಲಿ ಸೋತರು. ಅದಾದ ಮೇಲೆ 2014ರ ಲೋಕಸಭಾ ಚುನಾವಣೆಯಲ್ಲಿ ಪೌರಿ ಗರ್ವಾಲ್ ಕ್ಷೇತ್ರದಿಂದ ಗೆದ್ದರು. ಮತ್ತೆ 2019ರ ಚುನಾವಣೆಯಲ್ಲಿ ವಯಸ್ಸಾದ ಕಾರಣ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ನಿರಾಕರಿಸಿದ್ದರು.

ಇದನ್ನೂ ಓದಿ: ಮಠಾಧೀಶರ ಅಸ್ಮಿತೆ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಒಬ್ಬ ಮಾನಸಿಕ ರೋಗಿ: ಪ್ರಣವಾನಂದ ಸ್ವಾಮಿಜಿ ಆಕ್ರೋಶ

Published On - 4:18 pm, Sat, 26 March 22