ಅಹಮದಾಬಾದ್: ಗುಜರಾತಿನ (Gujarat) ವಲ್ಸಾದ್ ಜಿಲ್ಲೆಯ ಹಲವು ಸರ್ಕಾರಿ ಮತ್ತು ಖಾಸಗಿ ವಿದ್ಯಾರ್ಥಿಗಳಿಗೆ ‘ಮಾರೋ ಆದರ್ಶ್ ನಾಥೂರಾಂ ಗೋಡ್ಸೆ’ (ನನ್ನ ಆದರ್ಶ ನಾಥೂರಾಂ ಗೋಡ್ಸೆ) ಎಂಬ ವಿಷಯದ ಕುರಿತು ಭಾಷಣ ಸ್ಪರ್ಧೆಯನ್ನು ನಡೆಸಿದ್ದಕ್ಕೆ ಯುವಜನ ಅಭಿವೃದ್ಧಿ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ಈ ಬಗ್ಗೆ ಗುಜರಾತ್ ಸರ್ಕಾರದ ಯುವಜನ ಸೇವೆಗಳು ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಇಲಾಖೆಯು ವಿಚಾರಣೆಯನ್ನು ಪ್ರಾರಂಭಿಸಿದೆ. 1949ರಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಯನ್ನು ಹತ್ಯೆಗೈದ ಗೋಡ್ಸೆಯನ್ನು (Nathuram Godse) ಗಲ್ಲಿಗೇರಿಸಲಾಗಿತ್ತು. 5-8 ನೇ ತರಗತಿಯ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಭಾಷಣ ಸ್ಪರ್ಧೆಯ ವಿಜಯಿಗಳಿಗೆ ಬಹುಮಾನವನ್ನೂ ವಿತರಿಸಲಾಗಿತ್ತು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವ ಅಭಿವೃದ್ಧಿ ಅಧಿಕಾರಿ ನೀತಾಬೆನ್ ಗವ್ಲಿ ಅವರನ್ನು ಅಮಾನತುಗೊಳಿಸಲಾಗಿದೆ. ಸೋಮವಾರ ಗುಜರಾತ್ ಸರ್ಕಾರದ ಯುವಜನ ಸೇವಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಇಲಾಖೆಯಡಿಯಲ್ಲಿ ಜಿಲ್ಲಾ ಮಟ್ಟದ ಬಾಲಪ್ರತಿಭಾ ಶೋಧ ಸ್ಪರ್ಧೆ (ಮಕ್ಕಳ ಪ್ರತಿಭಾ ಶೋಧ ಸ್ಪರ್ಧೆ) ಅಂಗವಾಗಿ ಕುಸುಮ್ ವಿದ್ಯಾಲಯ ಎಂಬ ಸೆಲ್ಫ್ ಫಿನಾನ್ಶಿಯಲ್ ಶಾಲೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಆಯೋಜಿಸಲು ಶಾಲೆಯ ಆವರಣವನ್ನು ಮಾತ್ರ ನೀಡಿದ್ದೇವೆ ಮತ್ತು ಶಾಲೆಯ ಯಾರೂ ಅದರಲ್ಲಿ ಭಾಗವಹಿಸಲಿಲ್ಲ ಎಂದು ಶಾಲೆಯ ಅಧಿಕಾರಿಗಳು ಹೇಳಿದ್ದಾರೆ. ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಜಿಲ್ಲೆಯ 25 ವಿವಿಧ ಸರ್ಕಾರಿ ಮತ್ತು ಖಾಸಗಿ ಶಾಲೆಗಳ 8 ರಿಂದ 12 ವರ್ಷದೊಳಗಿನ ವಿದ್ಯಾರ್ಥಿಗಳು ವಾಕ್ಚಾತುರ್ಯ, ದೋಹಾ ಛಂದ ಸೋಪೈ, ಜಾನಪದ ಸಂಗೀತ, ಜಾನಪದ, ಪ್ರಬಂಧ ಬರಹ, ಪಾತ್ರಗಳು, ಗಾಯನ ಸಂಗೀತ, ಭಜನೆ, ಜಾನಪದ ನೃತ್ಯ ಮತ್ತು ಕರಕುಶಲ ಮುಂತಾದ ವಿಭಾಗಗಳಲ್ಲಿ ಭಾಗವಹಿಸಿದ್ದರು. ಅದೇ ದಿನ ಬಹುಮಾನ ವಿತರಣಾ ಸಮಾರಂಭವೂ ನಡೆದಿತ್ತು. ಸ್ಪರ್ಧೆಯ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗದ್ದು, ಜಿಲ್ಲಾ ಶಿಕ್ಷಣ ಕಚೇರಿ ಇದು ನಿರ್ಲಕ್ಷ್ಯ ಎಂದು ಹೇಳಿಕೊಂಡಿದೆ.
ಹಿರಿಯ ಕಾಂಗ್ರೆಸ್ ನಾಯಕ ಅರ್ಜುನ್ ಮೊದ್ವಾಡಿಯಾ ಅವರು ಘಟನೆಯನ್ನು ಖಂಡಿಸಿದ್ದು, “ವಲ್ಸಾದ್‌ನಲ್ಲಿ ಭಾಷಣ ಸ್ಪರ್ಧೆಯ ಹೆಸರಿನಲ್ಲಿ, ಗೋಡ್ಸೆ ಹೀರೋ ಎಂದು ಮಕ್ಕಳಿಗೆ ಕಲಿಸುವ ಅತ್ಯಂತ ನಾಚಿಕೆಗೇಡಿನ ಪ್ರಯತ್ನವಾಗಿದೆ, ಹೀಗಾಗಿ ಅವರ ಮನಸ್ಸಿನಲ್ಲಿ ಮಹಾತ್ಮಾ ಗಾಂಧಿಯವರ ಮೇಲೆ ದ್ವೇಷವನ್ನು ಸ್ಥಾಪಿಸಲಾಗಿದೆ” ಎಂದು ಟ್ವೀಟ್ ಮಾಡಿದ್ದಾರೆ. ಗೋಡ್ಸೆಯನ್ನು ಪೂಜಿಸುವುದನ್ನು ನಿಲ್ಲಿಸದಿದ್ದರೆ ಬಿಜೆಪಿ ವಿರುದ್ಧ ಸಾರ್ವಜನಿಕ ಆಂದೋಲನದ ಎಚ್ಚರಿಕೆಯನ್ನು ಅವರು ನೀಡಿದರು.
ವಲ್ಸಾದ್ ಜಿಲ್ಲಾಧಿಕಾರಿ ಕ್ಷಿಪ್ರಾ ಅಗ್ರೆ ದಿ ಇಂಡಿಯನ್ ಎಕ್ಸ್‌ಪ್ರೆಸ್ ಜತೆ ಮಾತನಾಡಿದ್ದು “ಗಾಂಧಿನಗರದಲ್ಲಿರುವ ಸಾಂಸ್ಕೃತಿಕ ಇಲಾಖೆಯ ಉನ್ನತ ಅಧಿಕಾರಿಗಳಿಂದ ನಾವು ಆದೇಶವನ್ನು ಸ್ವೀಕರಿಸಿದ ನಂತರ ನಾವು ಸಂಬಂಧಿಸಿದ ಅಧಿಕಾರಿ ನೀತಾಬೆನ್ ಗವ್ಲಿಯನ್ನು ತಕ್ಷಣದಿಂದಲೇ ಅಮಾನತುಗೊಳಿಸಿದ್ದೇವೆ. ಅವರು ಘಟನೆಯ ಬಗ್ಗೆ ತನಿಖೆಯನ್ನು ಸಹ ಪ್ರಾರಂಭಿಸಿದ್ದಾರೆ ಎಂದಿದ್ದಾರೆ.
ಕುಸುಮ್ ವಿದ್ಯಾಲಯದಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿರುವ ಬಗ್ಗೆ ನಮಗೆ ತಿಳಿದಿರಲಿಲ್ಲ, ಏಕೆಂದರೆ ಇದನ್ನು ಜಿಲ್ಲಾ ಯುವ ವಿಕಾಸ ಕಚೇರಿಯು ಯೋಜಿಸಿ ಅನುಷ್ಠಾನಗೊಳಿಸಿದೆ. ಯುವ ವಿಕಾಸ ಕಛೇರಿಯು ಫೆಬ್ರವರಿ 8 ರಂದು ಜಿಲ್ಲೆಯ ಎಲ್ಲಾ 25 ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ಪತ್ರವನ್ನು ರವಾನಿಸಿದೆ ಮತ್ತು ಫೆಬ್ರವರಿ 14 ರಂದು ವಲ್ಸಾದ್‌ನ ತಿಥಾಲ್ ರಸ್ತೆಯಲ್ಲಿರುವ ಕುಸುಮ್ ವಿದ್ಯಾಲಯದಲ್ಲಿ ನಡೆಯಲಿರುವ ವಿವಿಧ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತೆ ಕೋರಿದೆ. ತೀರ್ಪುಗಾರರನ್ನು ಸಹ ನಿಯೋಜಿಸಲಾಗಿದೆ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ಬಿ.ಡಿ.ಬಾರಯ್ಯ ಹೇಳಿದ್ದಾರೆ.
ಘಟನೆ ನಡೆದ ಕುಸುಮ್ ವಿದ್ಯಾಲಯವು ಸಮರ್ಪಣ್ ಚಾರಿಟೀಸ್ ನಡೆಸುತ್ತಿರುವ ಹೈಯರ್ ಸೆಕೆಂಡರಿ ಶಾಲೆಯಾಗಿದೆ. ಶಾಲೆಯ ಟ್ರಸ್ಟಿ ವಿವೇಕ್ ದೇಸಾಯಿ ಮಾತನಾಡಿ, ನಮ್ಮ ಶಾಲೆಯಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಒಬ್ಬ ವಿದ್ಯಾರ್ಥಿ ಅಥವಾ ಶಿಕ್ಷಕರು ಭಾಗವಹಿಸಿರಲಿಲ್ಲ. ಸ್ಪರ್ಧೆಗಳನ್ನು ಆಯೋಜಿಸಲು ನಮ್ಮ ತರಗತಿ ಕೊಠಡಿಗಳನ್ನು ವ್ಯವಸ್ಥೆಗೊಳಿಸುವಂತೆ ಜಿಲ್ಲಾ ಯುವ ವಿಕಾಸ ಕಚೇರಿಯಿಂದ ನಮಗೆ ಪತ್ರ ಬಂದಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶ, ಬಿಹಾರ, ದೆಹಲಿಯಿಂದ ಭಯ್ಯಾಗಳು ಇಲ್ಲಿ ಬಂದು ಅಧಿಕಾರ ನಡೆಸಲು ಸಾಧ್ಯವಿಲ್ಲ: ಚರಣ್ಜಿತ್ ಸಿಂಗ್ ಚನ್ನಿ