ದೆಹಲಿ: ಅಫ್ತಾಬ್ ಪೂನಾವಾಲಾ(Aaftab Poonawala) ಲಿವ್-ಇನ್ ಸಂಗಾತಿ ಶ್ರದ್ಧಾ ವಾಕರ್ನ್ನು(Shraddha Walkar) ಕೊಂದು ಆಕೆಯ ಅವರ ಮೂಳೆಯನ್ನು ಗ್ರೈಂಡರ್ ಬಳಸಿ ಪುಡಿ ಮಾಡಿ ವಿಲೇವಾರಿ ಮಾಡಿದ್ದ. ಮೂರು ತಿಂಗಳ ನಂತರ ಆತ ಎಸೆದ ಕೊನೆಯ ತುಂಡಿನಲ್ಲಿ ಆಕೆಯ ತಲೆಯೂ ಒಂದಾಗಿತ್ತು ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ದೆಹಲಿಯಲ್ಲಿ ನಡೆದ ಈ ಬೆಚ್ಚಿಬೀಳಿಸುವ ಕೊಲೆಯ 6,600 ಪುಟಗಳ ಚಾರ್ಜ್‌ಶೀಟ್ ಭಯಾನಕ ವಿವರಗಳನ್ನು ಪಟ್ಟಿ ಮಾಡಿದೆ. ಇತರ ವಿಷಯಗಳ ಜೊತೆಗೆ, ಮೇ 18 ರಂದು, ಶ್ರದ್ಧಾಳನ್ನು ಕೊಂದ ನಂತರ, ಪೂನಾವಾಲಾ ಜೊಮಾಟೊದಿಂದ ಚಿಕನ್ ರೋಲ್‌ನಲ್ಲಿ ಆರ್ಡರ್ ಮಾಡಿ ತಿಂದಿದ್ದ. ಕಳೆದ ವರ್ಷ ಮೇ ತಿಂಗಳಲ್ಲಿ ಶ್ರದ್ಧಾ ವಾಕರ್ ಮತ್ತು ಆಫ್ತಾಬ್ ಪೂನಾವಾಲಾ ದೆಹಲಿಗೆ ತೆರಳಿದ್ದರು. ಆದರೆ ಸಂಬಂಧದಲ್ಲಿ ಆಗಲೇ ಬಿರುಕು ಉಂಟಾಗಿತ್ತು. ಇಬ್ಬರೂ ಖರ್ಚು ವೆಚ್ಚಗಳು ಮತ್ತು ಅಫ್ತಾಬ್ ಪೂನಾವಾಲಾನ ಗರ್ಲ್ ಫ್ರೆಂಡ್ಸ್ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಅಲ್ಲಿ ವಾಗ್ವಾದ ನಡೆದಿತ್ತು. ಆತನಿಗೆ ದೆಹಲಿಯಿಂದ ದುಬೈ ತನಕ ಗೆಳತಿಯರಿದ್ದರು ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಮೇ 18 ರಂದು ಇಬ್ಬರೂ ಮುಂಬೈಗೆ ಹೋಗಲು ಪ್ಲಾನ್ ಮಾಡಿದ್ದರು. ಆದರೆ ಇದ್ದಕ್ಕಿದ್ದಂತೆ ಆಫ್ತಾಬ್ ಪೂನಾವಾಲಾ ಟಿಕೆಟ್ ರದ್ದು ಮಾಡಿದ್ದ. ಅದರ ನಂತರ ಮತ್ತೊಂದು ಖರ್ಚಿನ ಜಗಳವಾಯಿತು. ಆ ಹೊತ್ತಿನ ಸಿಟ್ಟಿನಲ್ಲಿ ಪೂನಾವಾಲಾ ಆಕೆಯ ಕತ್ತು ಹಿಸುಕಿದ್ದ ಎಂದು ಹೇಳಲಾಗಿದೆ.
ಮೊದಲಿಗೆ ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ವಿಲೇವಾರಿ ಮಾಡಲು ಯೋಚಿಸಿದ್ದ ಎಂದು ಆರೋಪಪಟ್ಟಿ ಹೇಳುತ್ತದೆ. ಅದಕ್ಕಾಗಿ ಅವ ಚೀಲವನ್ನು ಸಹ ಖರೀದಿಸಿದ್ದ. ಆದರೆ ಹೀಗೆ ಮಾಡಿದರೆ ತಕ್ಷಣ ಸಿಕ್ಕಿಬೀಳುತ್ತೇನೆ ಎಂದು ಭಾವಿಸಿ ಈ ಪ್ಲಾನ್ ಕೈಬಿಟ್ಟಿದ್ದ. ಕೊನೆಗೆ ಆಕೆಯ ದೇಹವನ್ನು ಕತ್ತರಿಸಲು ನಿರ್ಧರಿಸಿ ಗರಗಸ, ಸುತ್ತಿಗೆ ಮತ್ತು ಮೂರು ಚಾಕುಗಳನ್ನು ಖರೀದಿಸಿದ್ದ.ವಿಶೇಷವಾಗಿ ಬೆರಳುಗಳನ್ನು ಬೇರ್ಪಡಿಸಲು ಬ್ಲೋ ಟಾರ್ಚ್ ಅನ್ನು ಬಳಸಿದ್ದ.
35 ತುಂಡುಗಳಾಗಿ ಕತ್ತರಿಸಿದ ದೇಹವನ್ನು ಫ್ರಿಡ್ಜ್‌ನಲ್ಲಿ ಇರಿಸಲಾಗಿತ್ತು. ಪೂನಾವಾಲಾ ತನ್ನ ಗೆಳತಿಯರು ಭೇಟಿ ನೀಡಿದಾಗಲೆಲ್ಲ ಫ್ರಿಡ್ಜ್‌ನಿಂದ ಪೊಟ್ಟಣಗಳನ್ನು ತೆಗೆದುಕೊಂಡು ಅಡುಗೆಮನೆಯಲ್ಲಿ ಇಡುತ್ತಿದ್ದ ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ.
ಪೂನಾವಾಲಾ ಶ್ರದ್ಧಾಳ ಮೊಬೈಲ್ ಅನ್ನು ಇಟ್ಟುಕೊಂಡಿದ್ದ. ಮೇ 18 ರ ನಂತರ ಆಕೆಯ ಖಾತೆ ಆತನ ಫೋನ್‌ನಿಂದ ಚಾಲನೆಯಾಗುತ್ತಿತ್ತು ಎಂದು ಗೂಗಲ್ ಡೇಟಾ ಬಹಿರಂಗಪಡಿಸಿದೆ. ನಂತರ ಮುಂಬೈನಲ್ಲಿ ಆಕೆಯ ಸೆಲ್‌ಫೋನ್ ಮತ್ತು ಲಿಪ್‌ಸ್ಟಿಕ್ ಅನ್ನು ವಿಲೇವಾರಿ ಮಾಡಿದ್ದಾನೆ ಎಂದು ಆರೋಪಪಟ್ಟಿ ಹೇಳುತ್ತದೆ.
ಶ್ರದ್ಧಾ ವಾಕರ್ ದೇಹದ 20 ಕ್ಕಿಂತ ಕಡಿಮೆ ತುಂಡುಗಳು ಪತ್ತೆಯಾಗಿವೆ. ತಲೆ ಇನ್ನೂ ಪತ್ತೆಯಾಗಿಲ್ಲ.
ಕಳೆದ ವರ್ಷಾಂತ್ಯದಲ್ಲಿ ನಡೆದ ಪಾಲಿಗ್ರಾಫ್ ಮತ್ತು ನಾರ್ಕೋ-ಅನಾಲಿಸಿಸ್ ಪರೀಕ್ಷೆಗಳಲ್ಲಿ ಆಫ್ತಾಬ್ ಪೂನಾವಾಲಾ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಆತ ಪಶ್ಚಾತ್ತಾಪಪಟ್ಟಿದ್ದಾನೆ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.ಪೂನಾವಾಲಾ ಅವರ ತಪ್ಪೊಪ್ಪಿಗೆಗಳು ಸಾಕ್ಷಿಯಾಗಿ ಸ್ವೀಕಾರಾರ್ಹವಲ್ಲ. ಪೊಲೀಸರ ಮುಂದೆ ಆತನ ಆರಂಭಿಕ ತಪ್ಪೊಪ್ಪಿಗೆಯನ್ನು ಸಹ ನ್ಯಾಯಾಲಯದಲ್ಲಿ ಬಳಸಲಾಗುವುದಿಲ್ಲ. ಬಂಧಿತ ವ್ಯಕ್ತಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾದಾಗ ಮಾತ್ರ ಸಾಕ್ಷ್ಯವಾಗಿ ಬಳಸಬಹುದು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:57 pm, Tue, 7 February 23