ವಿಪಕ್ಷಗಳು ಸದನದಲ್ಲಿ ಚರ್ಚೆಯನ್ನೇ ನಡೆಸದೆ, ಸರ್ಕಾರ ಉತ್ತರ ನೀಡುತ್ತಿಲ್ಲ ಎಂದು ಆರೋಪಿಸುವುದರಲ್ಲಿ ಅರ್ಥವಿಲ್ಲ : ಪ್ರಲ್ಹಾದ್ ಜೋಶಿ ವಾಗ್ದಾಳಿ
ಸಂಸತ್ ಕಲಾಪಗಳಲ್ಲಿ ಚರ್ಚೆ ನಡೆಯಬೇಕು. ಚರ್ಚೆ ನಡೆದಾಗ ಸದಸ್ಯರ ಪ್ರಶ್ನೆಗಳಿಗೆ ಸರ್ಕಾರದ ಪರವಾಗಿ ಸಚಿವರು ಸದನದಲ್ಲಿ ಉತ್ತರ ಕೊಡಬಹುದು. ಸದನದಲ್ಲಿ ಕಲಾಪ ನಡೆಯದೇ ಸರ್ಕಾರ ಉತ್ತರಿಸುತ್ತಿಲ್ಲ ಎಂದರೆ ಹೇಗೆ..? ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಪ್ರಶ್ನೆ
ನವದೆಹಲಿ: ಕಾಂಗ್ರೆಸ್ ಸೇರಿದಂತೆ ವಿಪಕ್ಷ ನಾಯಕರು ಮತ್ತು ಸದಸ್ಯರು (opposition) ಮೊದಲು ಸಂಸತ್ ಕಲಾಪಗಳಲ್ಲಿ ಪಾಲ್ಗೊಂಡು ಚರ್ಚೆ ನಡೆಸಲಿ. ಸದನದಲ್ಲಿ ಚರ್ಚೆಯೇ ನಡೆಯಲು ಬಿಡದೇ (Debate in the Parliament) ಸರ್ಕಾರ ಉತ್ತರಿಸುತ್ತಿಲ್ಲ ಎಂದು ವಿಪಕ್ಷಗಳು ಆರೋಪಿಸುವುದರಲ್ಲಿ ಅರ್ಥವೇ ಇಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಹೇಳಿದ್ದಾರೆ.
ದೆಹಲಿಯಲ್ಲಿಂದು ಬಿಜೆಪಿ ಸಂಸದೀಯ ಪಕ್ಷದ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜೋಶಿ, ಇಂದಿನಿಂದ ಸಂಸತ್ ನಲ್ಲಿ ಸುಗಮ ಕಲಾಪಕ್ಕೆ ಸಹಕರಿಸುವಂತೆ ವಿಪಕ್ಷ ನಾಯಕರಿಗೆ ಮನವಿ ಮಾಡಿದ ಸಂದರ್ಭದಲ್ಲಿ ಸಂಸತ್ತಿನಲ್ಲಿ ಕಾಂಗ್ರೆಸ್ ನಡೆಯನ್ನು ಟೀಕಿಸಿದರು.
ಸಂಸತ್ ಕಲಾಪಗಳಲ್ಲಿ ಚರ್ಚೆ ನಡೆಯಬೇಕು. ಚರ್ಚೆ ನಡೆದಾಗ ಸದಸ್ಯರ ಪ್ರಶ್ನೆಗಳಿಗೆ ಸರ್ಕಾರದ ಪರವಾಗಿ ಸಚಿವರು ಸದನದಲ್ಲಿ ಉತ್ತರ ಕೊಡಬಹುದು. ಸದನದಲ್ಲಿ ಕಲಾಪ ನಡೆಯದೇ ಸರ್ಕಾರ ಉತ್ತರಿಸುತ್ತಿಲ್ಲ ಎಂದರೆ ಹೇಗೆ..? ಸರ್ಕಾರ ಉತ್ತರ ಕೊಡಲು ಸದನದ ಕಲಾಪಗಳಲ್ಲಿ ಚರ್ಚೆ ನಡೆಯಬೇಕಲ್ಲ. ವಿಪಕ್ಷಗಳು ಚರ್ಚೆ ನಡೆಸುವುದಕ್ಕೆ ತಯಾರಿಲ್ಲ. ಹೀಗಿರುವಾಗ ಸರ್ಕಾರದ ಮೇಲೆ ಗೂಬೆ ಕುರಿಸುವುದು ಸರಿಯಲ್ಲ ಎಂದರು.
ಬಜೆಟ್ ಮಂಡನೆ ಬಳಿಕ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯ ಕೈಗೊಳ್ಳುವುದು ಸಂಸತ್ ನಲ್ಲಿ ಈ ಮೊದಲಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ವಿಪಕ್ಷಗಳು ರಾಷ್ಟ್ರಪತಿಯವರ ಭಾಷಣದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಅವರು ಏನು ಹೇಳಬೇಕು ಸದನದಲ್ಲಿ ಹೇಳಲಿ. ಆಗ ಸುಗಮ ಕಲಾಪಕ್ಕೆ ಅವಕಾಶವಾಗುತ್ತದೆ. ಈ ನಿಟ್ಟಿನಲ್ಲಿ ವಿಪಕ್ಷಗಳು ಸಹಕರಿಸಲಿ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಬಜೆಟ್ ಬಗ್ಗೆ ಪ್ರಧಾನಿ ಮೋದಿ ಅವರು ಮೆಚ್ಚುಗೆ ವ್ಯಕ್ಯಪಡಿಸಿದ್ದು, ಈ ಬಜೆಟ್ ನಲ್ಲಿ ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ನೀಡಿರುವ ಯೋಜನೆಗಳ ಬಗ್ಗೆ ಸಂಸದರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಜನರೊಟ್ಟಿಗೆ ಸಂವಾದ ಕಾರ್ಯಕ್ರಮಗಳನ್ನ ನಡೆಸುವಂತೆ ಪ್ರಧಾನಿ ಮೋದಿ ಅವರು ಕರೆ ನೀಡಿದ್ದಾರೆ ಎಂದು ಇದೇ ವೇಳೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರು ತಿಳಿಸಿದರು.